ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ ಸಹಕಾರಿ ತತ್ವದಡಿ ವಿದ್ಯುತ್ ಪೂರೈಸುತ್ತಿರುವ ರಾಜ್ಯದ ಏಕೈಕ ಸಂಸ್ಥೆ ಎಂಬ ಹೆಮ್ಮೆಗೆ ಪಾತ್ರವಾಗಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಿಂದ ಶೀಘ್ರ ವೈರ್ (ತಂತಿ) ಹಾಗೂ ವಿದ್ಯುತ್ ಪರಿವರ್ತಕ (ಟಿಸಿ) ಉತ್ಪಾದಿಸುವ ಘಟಕಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.ತಾಲೂಕಿನ ಸುಲ್ತಾನಪುರದಲ್ಲಿ ಹೊಸದಾಗಿ ಸ್ಥಾಪಿಸಲಾದ 110/11 ಕೆವಿ ಉಪವಿದ್ಯುತ್ ವಿತರಣಾ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಷ್ಠಿತ ಈ ಸಂಸ್ಥೆಯಿಂದ ಬರುವ ದಿನಗಳಲ್ಲಿ ತಂತಿ ಮತ್ತು ಟಿಸಿ ತಯಾರಿಕೆ ಘಟಕಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಇದರಿಂದ ಗ್ರಾಹಕರು ಮತ್ತು ರೈತರಿಗೆ ತ್ವರಿತ ಸೇವೆ ಮಾಡಲು ಅನುಕೂಲವಾಗಲಿದೆ ಎಂದರು.ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಬದಲು ಜನರಿಗೆ ಬದುಕು ಕಟ್ಟಿಕೊಡುವ ಕಾರ್ಯಕ್ರಮಗಳನ್ನು ರೂಪಿಸಬೇಕು. ರೈತರು ಸ್ವಂತ ಹಣ ಭರಿಸಿ ಟಿಸಿ ಪಡೆಯಬೇಕು ಎಂಬ ಅವೈಜ್ಞಾನಿಕ ಆದೇಶ ಪರಾಮರ್ಶಿಸಬೇಕು. ರೈತರಿಗೆ ಪ್ರತಿದಿನ 7 ಗಂಟೆ ಗುಣಮಟ್ಟದ ವಿದ್ಯುತ್ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಸಂಸ್ಥೆ ವ್ಯಾಪ್ತಿಯ ತೋಟಪಟ್ಟಿಗಳಿಗೆ ನಿರಂತರ ವಿದ್ಯುತ್ ಪೂರೈಸಲು ₹44 ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಇನ್ನು ಹೆಚ್ಚಿನ ವಿದ್ಯುತ್ ಪೂರೈಕೆಗೆ ಬೇಕಿರುವ 400 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಸರ್ಕಾರ ಮುಂದಾದಲ್ಲಿ ತಾಲೂಕಿನ ನೇರ್ಲಿ ಬಳಿ 40 ಎಕರೆ ಜಮೀನು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು. ₹12.28 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಕೇಂದ್ರದಿಂದ ಸುಲ್ತಾನಪುರ ಸುತ್ತಲಿನ 8 ಹಳ್ಳಿಗಳಿಗೆ ಗುಣಮಟ್ಟದ ವಿದ್ಯುತ್ ದೊರಕಲಿದೆ. ನೀರಾವರಿಗೆ ಮತ್ತಷ್ಟು ಅನುಕೂಲವಾಗಲಿದೆ. ಜತೆಗೆ ಉದ್ಯೋಗ ಸೃಷ್ಟಿಯಾಗಲಿದೆ. ಬರುವ ದಿನಗಳಲ್ಲಿ ಬೆಳವಿ, ನಿಡಸೋಸಿ, ಪಾಶ್ವಾಪೂರ ಹಾಗೂ ಶೇಕಿನ ಹೊಸುರದಲ್ಲಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪಿಸುವ ಗುರಿ ಹೊಂದಲಾಗಿದೆ. ಸಹಕಾರಿ ಮಹರ್ಷಿ ದಿ.ಅಪ್ಪಣ್ಣಗೌಡ ಪಾಟೀಲ, ದಿ.ಉಮೇಶ ಕತ್ತಿ ಅವರ ಕಂಡ ಕನಸು ಇಂದು ನನಸಾಗಿದೆ ಎಂದು ಅವರು ಹೇಳಿದರು.ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರ ಶಿವಾಜಿ ಖರೆ, ಸಂಘದ ನಿರ್ದೇಶಕ ಅಶೋಕ ಚಂದಪ್ಪಗೋಳ ಮಾತನಾಡಿದರು. ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೆ.ಎಲ್.ಶ್ರೀನಿವಾಸ ಸ್ವಾಗತಿಸಿದರು. ಸ್ಥಾನಿಕ ಅಭಿಯಂತರ ನೇಮಿನಾಥ ಖೆಮಲಾಪೂರೆ ನಿರೂಪಿಸಿದರು. ನಿರ್ದೇಶಕ ರವೀಂದ್ರ ಹಿಡಕಲ್ ವಂದಿಸಿದರು. ಇದೇ ವೇಳೆ ಕೇಂದ್ರ ನಿರ್ಮಾಣಕ್ಕೆ ಭೂದಾನ ಮಾಡಿದ ದಸ್ತಗೀರ ಮುಲ್ತಾನಿ ಅವರನ್ನು ಸನ್ಮಾನಿಸಲಾಯಿತು.ಸಂಸ್ಥೆ ಅಧ್ಯಕ್ಷ ಕಲಗೌಡ ಪಾಟೀಲ, ಉಪಾಧ್ಯಕ್ಷ ವಿಷ್ಣು ರೇಡೇಕರ, ನಿರ್ದೇಶಕ ಕುನಾಲ ಪಾಟೀಲ, ಜೋಮಲಿಂಗ ಪಟೋಳಿ, ರವೀಂದ್ರ ಅಸೂದೆ, ಈರಪ್ಪಾ ಬಂಜಿರಾಮ, ಬಸಗೌಡ ಮಗೆಣ್ಣವರ, ಸೋಮಲಿಂಗ ಪಾಟೀಲ, ಸಂಗೀತಾ ದಪ್ಪಾದೂಳಿ, ಶಿವಲೀಲಾ ಮಣಗುತ್ತಿ, ಮ್ಯಾನೇಜರ ದುರದುಂಡಿ ನಾಯಿಕ, ಕೆಪಿಟಿಸಿಎಲ್ ಅಧಿಕಾರಿ ಎಂ.ಪಿ.ಸುತಾರ, ಜೆ.ಡಿ.ಬಾಗವಾನ, ಚಂದ್ರಕಾಂತ ಜಾಡರ, ವಿಕ್ರಾಂತಗೌಡ ಪಾಟೀಲ, ಮುಖಂಡ ಶ್ರೀಶೈಲ ಮಗದುಮ್ಮ, ಬಸವರಾಜ ಮರಡಿ, ಸುರೇಶ ದೊಡ್ಡಲಿಂಗನವರ, ರಾಯಪ್ಪಾ ಡೂಗ, ಅಜ್ಜಪ್ಪಾ ಕಲ್ಲಟ್ಟಿ, ಗುರಪ್ಪಾ ತಳವಾರ, ಶ್ರೀಶೈಲ ಮಠಪತಿ, ಮಹಾದೇವ ಪಾಟೀಲ, ಬಸವರಾಜ ತಳವಾರ, ಶಿವನಪ್ಪ ಮದವಾಲ, ಬಾಳಪ್ಪಾ ಪಾಟೀಲ, ರಾಚಯ್ಯ ಹಿರೇಮಠ, ಬಾಳೇಶ ಕುರಬೇಟ, ಲಗಮಣ್ಣ ಕೆಂಪಮಲಕಾರಿ ಸೇರಿದಂತೆ ಮತ್ತಿತರರು ಇದ್ದರು.