ಸಂವಿಧಾನ ಜಾಗೃತಿ ಜಾಥಾಗೆ ಅದ್ಧೂರಿ ಸ್ವಾಗತ

| Published : Feb 03 2024, 01:50 AM IST

ಸಾರಾಂಶ

ಇಸ್ಲಾಂಪುರ ಗ್ರಾಮಕ್ಕೆ ಆಗಮಿಸಿದ ವಿಶೇಷ ವಾಹನದಲ್ಲಿ ನಿರ್ಮಿಸಿದ ಸಂವಿಧಾನ ಪೀಠಿಕೆಯುಳ್ಳ ಸ್ಥಬ್ದ ಚಿತ್ರದ ರಥವನ್ನು ಅದ್ಧೂರಿಯಾಗಿಸಕಲ ವಾದ್ಯಮೇಳದೊಂದಿಗೆ ಬರಮಾಡಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸಂವಿಧಾನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ದಿಸೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಮಾಜ ಕಲ್ಯಾಣ ಇಲಾಖೆ ರೂಪಿಸಿದ ಸಂವಿಧಾನ ಜಾಗೃತಿ ಜಾಥಾವನ್ನು ಹುಕ್ಕೇರಿ ತಾಲೂಕಿಗೆ ಗುರುವಾರ ಭವ್ಯ ಮತ್ತು ಸಡಗರ-ಸಂಭ್ರಮದಿಂದ ಸ್ವಾಗತಿಸಲಾಯಿತು.

ತಾಲೂಕಿನ ಇಸ್ಲಾಂಪುರ ಗ್ರಾಮಕ್ಕೆ ಆಗಮಿಸಿದ ವಿಶೇಷ ವಾಹನದಲ್ಲಿ ನಿರ್ಮಿಸಿದ ಸಂವಿಧಾನ ಪೀಠಿಕೆಯುಳ್ಳ ಸ್ಥಬ್ದ ಚಿತ್ರದ ರಥವನ್ನು ಅದ್ಧೂರಿಯಾಗಿಸಕಲ ವಾದ್ಯಮೇಳದೊಂದಿಗೆ ಬರಮಾಡಿಕೊಳ್ಳಲಾಯಿತು. ಮಹಿಳೆಯರು ಕುಂಭ ಹೊತ್ತು ಸಾಗಿದ್ದು, ಮೆರವಣಿಗೆ ಮತ್ತು ಐಕ್ಯತಾ ಸಮಾವೇಶಕ್ಕೆ ಮತ್ತಷ್ಟು ಮೆರಗು ತಂದಿತು.

ಶಾಲಾ - ಕಾಲೇಜು ವಿದ್ಯಾರ್ಥಿಗಳು ಲೇಜಿಮ್ ಬಾರಿಸಿ ಹರ್ಷ ವ್ಯಕ್ತಪಡಿಸಿದರು. ಆಶಾ - ಅಂಗನವಾಡಿ ಕಾರ್ಯಕರ್ತೆಯರು ಆರತಿ ಬೆಳಗಿ ಜಾಥಾಗೆ ಶುಭ ಹಾರೈಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಶಿಸ್ತು ಬದ್ಧ ನಡಿಗೆ ಗಮನ ಸೆಳೆಯಿತು. ಇದೇ ವೇಳೆ ವೈದ್ಯಕೀಯ ತಪಾಸಣಾ ಶಿಬಿರ, ರಂಗೋಲಿ ಚಿತ್ತಾರ ಬಿಡಿಸುವುದು, ಸೈಕಲ್ ಜಾಥಾ ಸಹ ನಡೆಸಲಾಯಿತು.

ಶಹಾಬಂದರ, ಬಸ್ಸಾಪುರ, ಯಲ್ಲಾಪುರ, ಕರಗುಪ್ಪಿ, ರುಸ್ತುಂಪುರ, ಪಾಶ್ಚಾಪುರ, ಹೊಸಪೇಟ, ಮಾವನೂರ, ಘೋಡಗೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಈ ಸಂವಿಧಾನ ಜಾಗೃತಿ ಜಾಥಾ ಸ್ಥಬ್ದ ಚಿತ್ರದ ಮೆರವಣಿಗೆ ಸಂಚರಿಸಿತು.

ತಹಸೀಲ್ದಾರ್‌ ಮಂಜುಳಾ ನಾಯಕ ಮಾತನಾಡಿ, ಸಂವಿಧಾನ ಪೀಠಿಕೆ ಮಹತ್ವ ಸಾರಲು ಈ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ. ಸ್ಥಬ್ದ ಚಿತ್ರದ ಮೆರವಣಿಗೆ ಆಯಾ ಗ್ರಾಪಂನಲ್ಲಿ ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು, ಸ್ವಯಂ ಸೇವಾ ಸಂಘಟನೆಗಳು ಸ್ವಾಗತಿಸಲಿದ್ದು ಗ್ರಾಮಗಳಲ್ಲಿ ಹಬ್ಬದ ವಾತಾವರಣ ನೆಲೆಯೂರಲಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎ.ಮಾಹುತ ಮಾತನಾಡಿ, ತಾಲೂಕಿನಲ್ಲಿ ಫೆ.6ರ ವರೆಗೆ ಸಂಚರಿಸಲಿರುವ ಈ ಜಾಥಾ 52 ಗ್ರಾಪಂ ಮತ್ತು ಹುಕ್ಕೇರಿ, ಸಂಕೇಶ್ವರ ಪಟ್ಟಣಗಳಲ್ಲಿ ಸುತ್ತಲಿದೆ. ಸ್ಥಬ್ದ ಚಿತ್ರ ಮೆರವಣಿಗೆ ಮತ್ತು ಐಕ್ಯತಾ ಸಮಾವೇಶ ಯಶಸ್ವಿಗೆ ಎಲ್ಲ ಪೂರ್ವ ಮುಂಜಾಗೃತಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಸಿದ್ದವ್ವ ಗೊರವ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಮು ಹುಬ್ಬನ್ನವರ, ಎಸ್ಸಿ, ಎಸ್ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾ ಸಮಿತಿ ಸದಸ್ಯ ಕರೆಪ್ಪ ಗುಡೆನ್ನವರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ಉದಯ ಕುಡಚಿ, ಬಿಸಿಯೂಟ ಸಹಾಯಕ ನಿರ್ದೇಶಕಿ ಸವಿತಾ ಹಲಕಿ, ಕಾರ್ಮಿಕ ನಿರೀಕ್ಷಕಿ ಜಾನ್ಹವಿ ತಳವಾರ, ಸಿಡಿಪಿಒ ಎಚ್.ಹೊಳೆಪ್ಪ, ಸಹಾಯಕ ಕೃಷಿ ನಿರ್ದೇಶಕ ಆರ್.ಬಿ.ನಾಯ್ಕರ, ಬಿಆರ್‌ಸಿ ಎ.ಎಸ್. ಪದ್ಮನ್ನವರ, ಮುಖಂಡ ಜಂಗ್ಲಿ ನಾಯಕ ಮತ್ತಿತರರು ಇದ್ದರು.

ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಎಂ.ಎಸ್.ಕೂಡವಕ್ಕಲಗಿ ಸ್ವಾಗತಿಸಿದರು. ಪಿಡಿಒ ರಾಜು ಬೆಡಸೂರಿ ನಿರೂಪಿಸಿದರು. ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಬೂಕನಟ್ಟಿ ವಂದಿಸಿದರು.