ಅರ್ಧಕ್ಕೆ ನಿಂತ ರಾಮನಾಥಪುರದ ಕಾವೇರಿ ನದಿ ಸೇತುವೆ ಕಾಮಗಾರಿ

| Published : May 09 2025, 12:31 AM IST

ಅರ್ಧಕ್ಕೆ ನಿಂತ ರಾಮನಾಥಪುರದ ಕಾವೇರಿ ನದಿ ಸೇತುವೆ ಕಾಮಗಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಅರಸರ ಕಾಲದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಳೆಯ ಸೇತುವೆ ಶತಮಾನ ಪೂರೈಸಿದೆ. ಹಳೆಯ ಸೇತುವೆ ಕಿರಿದಾಗಿದ್ದು, ಶಿಥಿಲಾವಸ್ಥೆಗೆ ತಲುಪಿದ ಕಾರಣ ಕಳೆದ 2017ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಹಾಗೂ ಶಾಸಕ ಎ. ಮಂಜು ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಹೊಸ ಸೇತುವೆ ನಿರ್ಮಾಣಕ್ಕಾಗಿ ಸರ್ಕಾರ 24 ಕೋಟಿ ರು. ವೆಚ್ಚದ ಅನುದಾನ ಬಿಡುಗಡೆ ಮಾಡಿತ್ತು. ದುರಾದೃಷ್ಟವಶಾತ್ ದೇವರು ಕೊಟ್ಟರೂ ಪೂಜಾರಿ ವರ ಕೊಡಲ್ಲ ಎನ್ನುವ ಗಾದೆ ಮಾತಿನಂತೆ ಸರ್ಕಾರ ದೊಡ್ಡ ಮೊತ್ತದ ಅನುದಾನ ನೀಡಿದರೂ ಕಾಮಗಾರಿ ಮುಗಿಯದೆ ನನೆಗುದಿಗೆ ಬಿದ್ದಿದೆ.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ರಾಮನಾಥಪುರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಹೊಸ ಸೇತುವೆಯ ಕಾಮಗಾರಿ ಹಲವು ವರ್ಷಗಳಿಂದಲೂ ಪೂರ್ಣಗೊಳ್ಳದೆ ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ.

ಮೈಸೂರು ಅರಸರ ಕಾಲದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಳೆಯ ಸೇತುವೆ ಶತಮಾನ ಪೂರೈಸಿದೆ. ಹಳೆಯ ಸೇತುವೆ ಕಿರಿದಾಗಿದ್ದು, ಶಿಥಿಲಾವಸ್ಥೆಗೆ ತಲುಪಿದ ಕಾರಣ ಕಳೆದ 2017ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಹಾಗೂ ಶಾಸಕ ಎ. ಮಂಜು ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಹೊಸ ಸೇತುವೆ ನಿರ್ಮಾಣಕ್ಕಾಗಿ ಸರ್ಕಾರ 24 ಕೋಟಿ ರು. ವೆಚ್ಚದ ಅನುದಾನ ಬಿಡುಗಡೆ ಮಾಡಿತ್ತು. ದುರಾದೃಷ್ಟವಶಾತ್ ದೇವರು ಕೊಟ್ಟರೂ ಪೂಜಾರಿ ವರ ಕೊಡಲ್ಲ ಎನ್ನುವ ಗಾದೆ ಮಾತಿನಂತೆ ಸರ್ಕಾರ ದೊಡ್ಡ ಮೊತ್ತದ ಅನುದಾನ ನೀಡಿದರೂ ಕಾಮಗಾರಿ ಮುಗಿಯದೆ ನನೆಗುದಿಗೆ ಬಿದ್ದಿದೆ.

ಹಾಸನ- ಪಿರಿಯಾಪಟ್ಟಣ ಮಾರ್ಗದ ರಸ್ತೆ ನಿರ್ಮಿಸಲು ಸರ್ಕಾರ 222 ಕೋಟಿ ರು. ಅನುದಾನ ನೀಡಿ ಕಾಮಗಾರಿ ಮುಗಿದಿದೆ. ಈ ಮಾರ್ಗದಲ್ಲಿ ಹಾದುಹೋಗಿರುವ ರಾಮನಾಥಪುರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಳೆಯ ಸೇತುವೆ ಪಕ್ಕ ಹೊಸ ಬದಲಿ ಸೇತುವೆ ನಿರ್ಮಿಸಬೇಕು ಎನ್ನುವ ಕೂಗು ಸಾರ್ವಜನಿಕರ ಹಲವಾರು ವರ್ಷಗಳ ಬೇಡಿಕೆಯಾಗಿತ್ತು. ಜನರ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ಹೊಸ ಸೇತುವೆ ಸ್ಥಾಪಿಸಲು ಅನುಮೋದನೆ ನೀಡಿತ್ತು. ಆದರೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಬಿಎಸ್‌ಆರ್‌ ಕಂಪನಿ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದೆ.

ಹೊಸ ಸೇತುವೆಯ ಕಾಮಗಾರಿ ಆಗಿರುವ ಎರಡು ಬದಿ ಕೂಡು ರಸ್ತೆ ನಿರ್ಮಿಸಿಲ್ಲ. ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಅಡ್ಡಿಯಾಗಿದ್ದು ಸಮಸ್ಯೆ ಬಗೆಹರಿಸಲು ಕೆಆರ್‌ಡಿಸಿಎಲ್ ಕಿಂಚಿತ್ತೂ ತಲೆಕೆಡಿಸಿಕೊಳ್ಳುತ್ತಿಲ್ಲ. ಹೊಸ ಸೇತುವೆ ಕಾಮಗಾರಿ ನಡೆದಿರುವ ಪಕ್ಕದಲ್ಲಿ ಮೀನುಗಾರಿಕೆ ಇಲಾಖೆಗೆ ಸೇರಿದ ಜಾಗವಿದ್ದು ಮೂರು ಕಟ್ಟಡಗಳಿವೆ. ಈ ಕಟ್ಟಡಗಳ ತೆರವಿಗೆ ಹಾಗೂ ಭೂ ಸ್ವಾಧೀನಕ್ಕೆ ಕೆಆರ್‌ಡಿಸಿಎಲ್ ಅಗತ್ಯವಿರುವ ಅನುದಾನ ಒದಗಿಸಿಲ್ಲ ಎನ್ನುವ ಕಾರಣದಿಂದಾಗಿ ಕೂಡು ರಸ್ತೆ ನಿರ್ಮಾಣವಾಗಿಲ್ಲ. ಕೆಎಆರ್‌ಡಿಸಿಎಲ್ ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯ ಧೋರಣೆಯಿಂದಾಗಿ ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಶತಮಾನಗಳಿಂದಲೂ ಹಳೆಯ ಸೇತುವೆ ಮೇಲೆ ಪ್ರತಿನಿತ್ಯ ಬಿಡುವಿಲ್ಲದೆ ಸಂಚರಿಸುವ ಅಧಿಕ ಭಾರ ಹೊತ್ತ ಲಾರಿಗಳು, ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ಸಾವಿರಾರು ವಾಹನಗಳು ಓಡಾಡುತ್ತವೆ. ಲೋಕೋಪಯೋಗಿ ಇಲಾಖೆ ಇತ್ತ ಹಳೆಯ ಸೇತುವೆಯನ್ನೂ ಕೂಡ ನಿರ್ವಹಣೆ ಮಾಡದೆ ಕೈಚೆಲ್ಲಿದೆ. ಹಳೆಯ ಸೇತುವೆ ಆಗಿನ ಕಾಲಕ್ಕೆ ತಕ್ಕಂತೆ ಕಿರಿದಾಗಿ ನಿರ್ಮಿಸಿದ್ದರೂ ಇಂದಿಗೂ ಸುಭದ್ರವಾಗಿದೆ. ಆದರೆ ಸೇತುವೆ ನಿರ್ವಹಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಹಳೆಯ ಸೇತುವೆಯ ಎರಡೂ ಕಡೆಗಳಲ್ಲಿ ಗಿಡಗಂಟಿಗಳು ಮರದ ಗಾತ್ರವಾಗಿ ಬೆಳೆದಿವೆ. ಗಿಡಗಂಟಿಗಳಿಂದ ಆವರಿಸಿ ಸೇತುವೆ ಸಡಿಲಗೊಳ್ಳುತ್ತಿದ್ದು ಭದ್ರತೆಗೆ ಅಪಾಯ ತಂದೊಡ್ಡಿದೆ. ಅವಸಾನದತ್ತ ಸಾಗಿರುವ ಹಳೆಯ ಸೇತುವೆ ದುಸ್ಥಿತಿ ಹೇಳತೀರದಾಗಿದೆ. ಪಕ್ಕದಲ್ಲಿ ಹೊಸ ಸೇತುವೆ ಕಾಮಗಾರಿ ಪೂರ್ಣಗೊಂಡು ಕೂಡು ರಸ್ತೆ ನಿರ್ಮಿಸಿದ್ದರೆ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿರಲಿಲ್ಲ.ಇಷ್ಟಲ್ಲದೇ ಹಾಸನ- ಪಿರಿಯಾಪಟ್ಟಣ ಮಾರ್ಗದ ರಸ್ತೆ ನಿರ್ಮಾಣವಾದ ನಂತರ ಈ ಮಾರ್ಗದಲ್ಲಿ ಓಡಾಡುವ ವಾಹನಗಳ ಸಂಖ್ಯೆಯೂ ದುಪ್ಪಟ್ಟಾಗಿದೆ. ನೆರೆಯ ಕೇರಳ ರಾಜ್ಯದ ಲಾರಿಗಳು, ವಾಹನಗಳು ಇದೇ ರಸ್ತೆಯಲ್ಲಿ ಸೇತುವೆ ಮೇಲೆ ಸಂಚರಿಸುತ್ತವೆ. ಸೇತುವೆ ಮೇಲಿನ ರಸ್ತೆ ಕೂಡ ಗುಂಡಿ ಬಿದ್ದು ಹಾಳಾಗಿದೆ. ಎರಡು ವಾಹನಗಳು ಎದುರು ಬದುರಾದರೆ ವಾಹನ ಸವಾರರು ಮುಂದೆ ಚಲಿಸಲು ಹರಸಾಹಸ ಪಡಬೇಕು. ಕಾವೇರಿ ನದಿ ಪ್ರವಾಹದ ಹೊಡೆತಕ್ಕೆ ಸಿಲುಕಿ ನಲುಗುತ್ತಿದ್ದು, ನೂರು ವರ್ಷ ಪೂರೈಸಿರುವ ಕಿಷ್ಕಿಂದೆಯಂತಿರುವ ಹಾಳಾದ ಸೇತುವೆ ರಸ್ತೆ ಮೇಲೆ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡು ದುಸ್ಥಿತಿ ಎದುರಾಗಿದೆ.

ಹೊಸ ಸೇತುವೆ ಕೂಡು ರಸ್ತೆ ನಿರ್ಮಾಣವಾಗದ ಪರಿಣಾಮ ರಾಮನಾಥಪುರ- ಮೈಸೂರು ಮಾರ್ಗದ ತಿರುವು ರಸ್ತೆ ಸಹ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಹಳೆಯ ಸೇತುವೆ ಮಾರ್ಗದ ಕಿರು ರಸ್ತೆಯಲ್ಲಿ ಓಡಾಡುವ ವಾಹನಗಳು ಸಂಚರಿಸುವ ತಿರುವು ರಸ್ತೆ ಅಭಿವೃದ್ಧಿ ಪಡಿಸಿಲ್ಲ. ಹೀಗಾಗಿ ರಾಮನಾಥಪುರ ಹಾಗೂ ಪಿರಿಯಾಪಟ್ಟಣ ಕಡೆಯಿಂದ ಬರುವ ವಾಹನಗಳು ಮೈಸೂರು ಮಾರ್ಗದ ಹದಗೆಟ್ಟಿರುವ ತಿರುವಿನಲ್ಲಿ ಎತ್ತ ಸಾಗಬೇಕೆಂಬದೇ ತೋಚದಾಗಿ ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿದೆ.

------------------------------------------------------------ಫೋಟೋ 1

ಅರಕಲಗೂಡು ತಾಲೂಕು ರಾಮನಾಥಪುರದಲ್ಲಿ ಹೊಸ ಸೇತುವೆಯ ಕೂಡು ರಸ್ತೆ ಕಾಮಗಾರಿ ನಡೆಯದೆ ಸ್ಥಗಿತಗೊಂಡಿದೆ.

ಫೋಟೋ 2

ಅರಕಲಗೂಡು ತಾಲೂಕು ರಾಮನಾಥಪುರದಲ್ಲಿ ಸೇತುವೆ ತಿರುವಿನಲ್ಲಿ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳು.ಫೋಟೋ 3

ರಾಮನಾಥಪುರದಲ್ಲಿ ಅವಸಾನದತ್ತ ಸಾಗಿರುವ ಹಳೆಯ ಸೇತುವೆ ನಿರ್ವಹಣೆ ಇಲ್ಲದೆ ಗಿಡಗಂಟಿಗಳಿಂದ ಆವರಿಸಿದೆ.