ಬಾಲ್ಯ ವಿವಾಹ ಮುಕ್ತ ದೇಶವನ್ನಾಗಿಸಲು ಸಹಕರಿಸಿ

| Published : Feb 14 2025, 12:35 AM IST

ಸಾರಾಂಶ

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷ ತುಂಬಿದ ನಂತರ ಮದುವೆ ಮಾಡಿಕೊಳ್ಳಬೇಕು, ಯಾರಾದರೂ ಕಾನೂನು ಮೀರಿ ಮದುವೆ ಮಾಡಿದರೆ ಕುಟುಂಬ ಸಮೇತ ಹಾಗೂ ಮದುವೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಶಿಕ್ಷೆಯಾಗುತ್ತದೆ. ಬಾಲ್ಯ ವಿವಾಗ ತಡೆಗಟ್ಟಲು ಎಲ್ಲರೂ ಸಹಕರಿಸಬೇಕು

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ದೇಶವನ್ನು ಬಾಲ್ಯವಿವಾಹ ಮುಕ್ತವನ್ನಾಗಿ ಮಾಡುವಲ್ಲಿ ಇಲಾಖೆಯ ಅಧಿಕಾರಿಗಳ ಜೊತೆಗೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ ಹೇಳಿದರು.ತಾಲೂಕಿನ ಇಡಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜು ವಿದ್ಯಾರ್ಥಿಗಳಿಂದ, ಬಾಲ್ಯ ವಿವಾಹ ನಿಷೇಧ ಅರಿವು ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣರಿಗೆ ಅರಿವು ಮೂಡಿಸಿ

ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಸೇರಿದಂತೆ ಸಂಬಂಧಪಟ್ಟ ಇಲಾಖೆಯ ನೌಕರರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ಬಾಲ್ಯ ವಿವಾಹದಿಂದಾಗುವ ತೊಂದರೆಗಳು, ನಿಷೇಧ ಕಾಯ್ದೆಯ ಕುರಿತು ಅರಿವು ಮೂಡಿಸಬೇಕು. ಅಂದಾಗ ಮಾತ್ರ ಬಾಲ್ಯ ವಿವಾಹ ಕಡಿಮೆಯಾಗುತ್ತವೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ, ಜಿ.ಸೋಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಮೊದಲು ಶಿಕ್ಷಣದ ಕಡೆ ಹೆಚ್ಚಿನ ಗಮನ ನೀಡಬೇಕು, ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷ ತುಂಬಿದ ನಂತರ ಮದುವೆ ಮಾಡಿಕೊಳ್ಳಬೇಕು, ಯಾರಾದರೂ ಕಾನೂನು ಮೀರಿ ಮದುವೆ ಮಾಡಿದರೆ ಕುಟುಂಬ ಸಮೇತ ಹಾಗೂ ಮದುವೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಶಿಕ್ಷೆಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಬಾಲ್ಯವಿವಾಹ ತಡೆಗಟ್ಟಿ

ವಕೀಲ ಸಂತೋಷ್ ಮಾತನಾಡಿ, ಬಾಲ್ಯ ವಿವಾಹ ಅಥವಾ ಬಾಲಕಾರ್ಮಿಕರು ಸಮಾಜದ ಪಿಡಗುಗಳು, ಸಮಾಜದಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬಂದರೆ ಮಕ್ಕಳ ಸಹಾಯವಾಣಿ ಅಥವಾ ಸಮೀಪದ ಪೊಲೀಸ್‌ಠಾಣೆ, ಅಂಗನವಾಡಿ ಅಥವಾ ಶಾಲೆಯ ಶಿಕ್ಷಕರಿಗೆ ತಿಳಿಸುವ ಮೂಲಕ ಅಥವಾ ಸಂಬಂದ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡುವ ಮೂಲಕ ಬಾಲ್ಯವಿವಾಹ ತಡೆಗಟ್ಟಬಹುದಾಗಿದೆ ಎಂದರು.ವಕೀಲ ರವಿಕುಮಾರ್ ಮಾತನಾಡಿ, ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕರ ಬಗ್ಗೆ ವಿವರವಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ, ಪಂಚಾಯಿತಿ ಅಧ್ಯಕ್ಷೆ ಮಂಜುಳಾಭೀಮರಾಜ್, ಎಸ್ ಡಿ ಎಂ ಸಿ ಅಧ್ಯಕ್ಷ ಪ್ರಸನ್ನ ಕುಮಾರ್ ಮತ್ತು ಶಾಲಾ ಶಿಕ್ಷಕರು ಹಾಗೂ ಕೊಂಗಾಡಿಯಪ್ಪ ಮತ್ತು ಇಡಗೂರು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.