ಆನ್‌ಲೈನ್‌ನಲ್ಲಿ ₹10.45 ಕೋಟಿ ಹೂಡಿಕೆ: ಮಹಿಳೆಗೆ ಪಂಗನಾಮ!

| Published : Nov 11 2024, 11:48 PM IST

ಆನ್‌ಲೈನ್‌ನಲ್ಲಿ ₹10.45 ಕೋಟಿ ಹೂಡಿಕೆ: ಮಹಿಳೆಗೆ ಪಂಗನಾಮ!
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ವಿಜಯಲಕ್ಷ್ಮೀ ವೀರಮಾಚಿನೇನಿ, ಹಿರಿಯ ಮಹಿಳಾ ಉದ್ಯಮಿ, ದಾವಣಗೆರೆ.

ವಿಶ್ವಚೇತನ ವಿದ್ಯಾ ಸಂಸ್ಥೆ ಮುಖ್ಯಸ್ಥೆ, ಮಹಿಳಾ ಉದ್ಯಮಿ ಡಾ.ವಿಜಯಲಕ್ಷ್ಮೀ ವೀರಮಾಚಿನೇನಿ ದೂರು

ಗೋಲ್ಡ್‌ ಮ್ಯಾನ್ ಸ್ನಾಚ್ ಕಂಪನಿ ಹೆಸರಿನ ಸಂಸ್ಥೆಗೆ ಹಂತ ಹಂತವಾಗಿ ₹10 ಕೋಟಿಗೂ ಅಧಿಕ ಹೂಡಿಕೆ

ಮೀನುಗಾರಿಕೆ ಇಲಾಖೆ ಉಪನಿರ್ದೇಶಕರ ಮಾತು ಕೇಳಿ ಹಣ ಹೂಡಿ, ಕಳೆದುಕೊಳ್ಳುವ ಸ್ಥಿತಿ

ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು । ತಡವಾಗಿ ಬೆಳಕಿಗೆ ಬಂದ ಪ್ರಕರಣ

ಕನ್ನಡಪ್ರಭ ವಾರ್ತೆ ದಾವಣಗೆರೆ

ಗೋಲ್ಡ್ ಮ್ಯಾನ್ ಸ್ನಾಚ್‌ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಹೆಚ್ಚು ಲಾಭ ಗಳಿಸಬಹುದು ಎಂದು ಸರ್ಕಾರಿ ಅಧಿಕಾರಿಯೊಬ್ಬ ಹೇಳಿದ್ದರಿಂದ ದಾವಣಗೆರೆಯ ಮಹಿಳಾ ಉದ್ಯಮಿ, ಶಿಕ್ಷಣ ಸಂಸ್ಥೆಯೊಂದರ ಮುಖ್ಯಸ್ಥೆ ಹಂತ ಹಂತವಾಗಿ ಸುಮಾರು ₹10,45,50,000 ಹೂಡಿಕೆ ಮಾಡಿ, ಕಳೆದುಕೊಂಡಿದ್ದಾರೆ. ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ನಗರದ ವಿಶ್ವಚೇತನ ವಿದ್ಯಾ ಸಂಸ್ಥೆ ಮುಖ್ಯಸ್ಥೆ, ಮಹಿಳಾ ಉದ್ಯಮಿ ಡಾ.ವಿಜಯಲಕ್ಷ್ಮೀ ವೀರಮಾಚಿನೇನಿ ₹10 ಕೋಟಿಗೂ ಅಧಿಕ ಹಣ ಕಳೆದುಕೊಂಡ ನತದೃಷ್ಟೆ. ದಾವಣಗೆರೆ ಮೀನುಗಾರಿ ಕೆ ಇಲಾಖೆ ಉಪ ನಿರ್ದೇಶಕ ಉಮೇಶ ಎಂಬುವರು ಡಾ.ವಿಜಯಲಕ್ಷ್ಮೀ ಅವರಿಗೆ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದರೆ ಹೆಚ್ಚು ಹೆಚ್ಚು ಲಾಭ ಬರುತ್ತದೆಂದು ಹೇಳಿದ್ದರು. ಈ ಅಧಿಕಾರಿ ಮಾತನ್ನು ಕೇಳಿ ಜೂನ್ 2024ರಿಂದ ಹಂತ ಹಂತವಾಗಿ ₹10.45 ಕೋಟಿಗೂ ಅಧಿಕ ಮೊತ್ತದ ಹಣವನ್ನು ಆನ್ ಲೈನ್ ಮೂಲಕ ಹೂಡಿಕೆ ಮಾಡಿ, ಈಗ ಕೈ ಸುಟ್ಟುಕೊಂಡಿದ್ದಾರೆ.

ತಾವು ಹೂಡಿದ್ದ ಹಣ ₹10.45 ಕೋಟಿ ಆಗಿದ್ದರೂ, ₹23 ಕೋಟಿಗಳಾಗಿದೆ ಎಂದು ಆನ್ ಲೈನ್‌ನಲ್ಲಿ ತೋರಿಸುತ್ತಿತ್ತು. ಆಗ ತಾವು ಹೂಡಿದ್ದ ಹಣ, ಹೆಚ್ಚುವರಿಯಾಗಿ ಬಂದ ಹಣ ಸೇರಿದಂತೆ ಎಲ್ಲ ಹಣವನ್ನೂ ಬಿಡಿಸಿಕೊಳ್ಳಲು ಡಾ.ವಿಜಯಲಕ್ಷ್ಮೀ ವೀರಮಾಚಿನೇನಿ ಕೇಳಿದ್ದಾರೆ. ಆಗ ಕಂಪನಿಯವರು ಅರ್ಧಕ್ಕೆ ಹಣ ಡ್ರಾ ಮಾಡಿಕೊಳ್ಳಲು ಬರುವುದಿಲ್ಲ. ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆಗ ಡಾ.ವಿಜಯಲಕ್ಷ್ಮೀ ವೀರಮಾಚಿನೇನಿ ಅವರಿಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಕಂಪನಿ ಪ್ರತಿನಿಧಿಗಳೆನ್ನಲಾದ ಸಾಕ್ಷಿ, ಅಮಾನ್‌ ತಮ್ಮ ಕಂಪನಿಯಲ್ಲಿ ಹೂಡಿಕೆ ಬಗ್ಗೆ ವಾಟ್ಸಪ್ ಕರೆ ಮಾಡಿ ವಿವರಿಸಿದ್ದ ಹಿನ್ನೆಲೆ ಆ ಇಬ್ಬರ ವಿರುದ್ಧವೂ ದಾವಣಗೆರೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

₹10 ಕೋಟಿ ವಂಚನೆಯಾದ ಹಿನ್ನೆಲೆ ಪ್ರಕರಣವನ್ನು ಪೊಲೀಸ್‌ ಇಲಾಖೆ ಸಿಐಡಿಗೆ ವರ್ಗಾವಣೆ ಮಾಡಿದೆ. ಮೂರು ತಿಂಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಂಚನೆ ವಿಚಾರ ಗೊತ್ತಾಗಿದ್ದು ಹೇಗೆ?

ಕಂಪನಿಯಲ್ಲಿ ವಿತ್‌ ಡ್ರಾಗೆ ಅವಕಾಶ ಇಲ್ಲವೆಂದು ಕಂಪನಿ ಹೇಳಿದಾಗ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಉಮೇಶ್ ಹಾಗೂ ಡಾ.ವಿಜಯಲಕ್ಷ್ಮೀ ವೀರಮಾಚಿನೇನಿ ಅವರು ಕಂಪನಿಯ ಷೇರು ವ್ಯವಹಾರ ಬಗ್ಗೆ ವಿಚಾರಿಸಿದ್ದಾರೆ. ಆಗ ಅದು ಅಂತರ ರಾಷ್ಟ್ರೀಯ ಮಟ್ಟದ್ದಾಗಿದ್ದು, ಹಣ ವಾಪಸ್‌ ಕೊಡಲು ಯಾವುದೇ ತೊಂದರೆ ಮಾಡುವುದಿಲ್ಲ ಎಂಬುದು ತಿಳಿದುಬಂದಿದೆ. ಅನಂತರ ಷೇರು ಮಾರುಕಟ್ಟೆ ಜ್ಞಾನವುಳ್ಳ ವ್ಯಕ್ತಿಗಳನ್ನು ಡಾ.ವಿಜಯಲಕ್ಷ್ಮೀ ಅವರು ಸಂಪರ್ಕಿಸಿದ್ದಾರೆ. ಆಗ ಗೋಲ್ಡ್ ಮ್ಯಾನ್ ಸಾಚ್ಸ್ ಕಂಪನಿ ಹೆಸರಿನಲ್ಲಿ ನಿಮಗೆ ಯಾರೋ ವಂಚಿಸಿರಬಹುದು ಎಂಬುದು ಗೊತ್ತಾಗಿದೆ.

ತಕ್ಷಣ ಡಾ.ವಿಜಯಲಕ್ಷ್ಮೀ, ಡಾ.ಉಮೇಶ ಅವರು ದಾವಣಗೆರೆ ಸೈಬರ್ (ಸಿಇಎನ್) ಪೊಲೀಸ್ ಠಾಣೆಗೆ ದೂರು ನೀಡಿ, ವಿಚಾರಿಸಿದ್ದಾರೆ. ಆಗ ನ್ಯಾಷನಲ್ ಸೈಬರ್ ಕ್ರೈಮ್ ಪೋರ್ಟಲ್‌ಗೆ ಕರೆ ಮಾಡಿ, ಆನ್ ಲೈನ್ ಮೂಲಕ ದೂರು ನೀಡುವಂತೆ ಸೂಚನೆ ವ್ಯಕ್ತವಾಗಿದೆ. ಅನಂತರ ಮುಂಬೈನ ಕಂಪನಿ ಕಚೇರಿಗೆ ಹೋದರೆ ಅಲ್ಲಿನ ಸೆಕ್ಯೂರಿಟಿ ಕಂಪನಿಯಲ್ಲಿ ಯಾರನ್ನೇ ಭೇಟಿ ಮಾಡಬೇಕಾದರೆ ಮುಂಗಡವಾಗಿ ಅಪಾಯಿಂಟ್‌ಮೆಂಟ್ ಪಡೆದಿರಬೇಕು. ಹಾಗಿದ್ದರೆ ಮಾತ್ರ ಭೇಟಿಗೆ ಅವಕಾಶವೆಂದು ತಿಳಿಸಿ, ವಾಪಸ್‌ ಕಳಿಸಿದ್ದನು.

ಯಾರೋ ಅಪರಿಚಿತರು ವ್ಯಕ್ತಿಗಳು ಗೋಲ್ಡ್‌ಮನ್‌ ಸಾಚ್ಲ್‌ ಕಂಪನಿ ಹೆಸರಿನಲ್ಲಿ ಅಮಾನ್‌ ಎಂಬವರು ಕಾರ್ಯನಿರ್ವಾಹಕ ನಿರ್ದೇಶಕರು, ಉಪಾಧ್ಯಕ್ಷರು, ಸಾಕ್ಷಿ ಗೋಯಲ್ ಎಂಬವರನ್ನು ಕಾರ್ಯನಿರ್ವಾಹಕ ನಿರ್ದೇಶಕರು, ಉಪಾಧ್ಯಕ್ಷರು, ವೆಲ್ತ್ ಮ್ಯಾನೇಜ್‌ಮೆಂಟ್, ಬೆಂಗಳೂರು ಅಂತಾ ಪರಿಚಯ ಮಾಡಿಕೊಂಡವರ ವಿರುದ್ಧವೂ ದೂರು ದಾಖಲಿಸಿದ್ದಾರೆ.