ಸಾರಾಂಶ
ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಸಮಯ ಸನ್ನಿಹಿತವಾಗಿದೆ.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ನೆರವೇರುವ ಹಿನ್ನೆಲೆಯಲ್ಲಿ ಮನೆ ಮನೆಗೆ ಶ್ರೀರಾಮ ಮಂತ್ರಾಕ್ಷತೆ ವಿತರಣೆ ಕಾರ್ಯ ಪ್ರಾರಂಭವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಕಾರ್ಯವಾಹ ಗುರುರಾಜ ದೇಸಾಯಿ ಹೇಳಿದರು.ಪಟ್ಟಣದ ಅವುಗೇಶ್ವರ ತಪೋಧಾಮ ಮಠದಲ್ಲಿ ಸೋಮವಾರ ಮಾತನಾಡಿದ ಅವರು, ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಸಮಯ ಸನ್ನಿಹಿತವಾಗಿದೆ. ಕೋಟ್ಯಂತರ ಭಕ್ತರು ರಾಮಮಂದಿರ ನಿರ್ಮಾಣಕ್ಕೆ ಈಗಾಗಲೇ ನಾನಾ ರೀತಿಯ ಕೊಡುಗೆ ನೀಡಿದ್ದಾರೆ ಎಂದು ಶ್ರೀ ರಾಮನ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಂತರ ಜ.22ರಂದು ಪ್ರತಿ ಗ್ರಾಮದಲ್ಲಿ ಹರೇರಾಮ್, ಭಜನೆ ಹಾಡುಗಳನ್ನು ಹಾಡಬೇಕು. ಸಂಜೆ 5 ಗಂಟೆಗೆ ಜ್ಯೋತಿ ಬೆಳಗಿ ಉತ್ತರ ದಿಕ್ಕಿಗೆ ಆರತಿ ಬೆಳಗುವ ಮೂಲಕ ಇದನ್ನು ಅವಿಸ್ಮರಣೀಯ ದಿನವಾಗಬೇಕು. ಈ ನಿಟ್ಟಿನಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಗ್ರಾಮ ಸಮಿತಿ, ವಾರ್ಡ್ ಸಮಿತಿ, ರಾಮಭಕ್ತರ ಸಮಿತಿ ರಚಿಸಲಾಗಿದೆ. ಈ ಎಲ್ಲ ಸಮಿತಿಯ ಸದಸ್ಯರು ಮತ್ತು ಕಾರ್ಯಕರ್ತರು ಪ್ರತಿ ಮನೆಗೂ ಮಂತ್ರಾಕ್ಷತೆ ನೀಡಲಾಗುತ್ತಿದೆ ಎಂದರು.
ಅಕ್ಕಪಕ್ಕದ ಗ್ರಾಮಗಳಿಗೂ ಮಂತ್ರಾಕ್ಷತೆ ನೀಡಲಾಗುತ್ತಿದೆ. ಶ್ರೀರಾಮ ಪ್ರಾಣ ಪ್ರತಿಷ್ಠಾನ ದಿನದಂದು ಪ್ರತಿಯೊಬ್ಬರೂ ಸ್ವೀಕರಿಸಿದ ಮಂತ್ರಾಕ್ಷತೆಯನ್ನು ತಮ್ಮ ಮನೆಯಲ್ಲಿ ಪಾಯಸ ಮಾಡಿ ಸ್ವೀಕರಿಸಬೇಕು. ಭಕ್ತರು ತಮ್ಮ ನೆರೆಹೊರೆಯಲ್ಲಿರುವ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಯಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಸ್ಥಳೀಯ ಮಠದ ಶ್ರೀ ಶಿವಯೋಗಿ ಮಹಾಸ್ವಾಮಿಗಳು ಶ್ರೀ ರಾಮನ ಕುರಿತು ಆಶೀರ್ವಚನ ನೀಡಿದರು.