ಸಾರಾಂಶ
ಮೈಸೂರಿನ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಪತ್ರಿಕಾ ದಿನಾಚರಣೆ, 5ನೇ ರಾಜ್ಯ ಪತ್ರಿಕಾ ವಿತರಕರ ಸಮ್ಮೇಳನವನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಪತ್ರಿಕಾ ವಿತರಕರು ಪತ್ರಿಕೆಗಳನ್ನು ವಿತರಿಸುವ ಜೊತೆಗೆ ಚಂದಾ ಹಣ ಸಂಗ್ರಹಿಸುವ ಕೆಲಸವನ್ನು ಮಾಡುತ್ತಾ ತಮ್ಮ ಆದಾಯದ ಜೊತೆಗೆ ಸಂಸ್ಥೆಗೂ ಆದಾಯ ತಂದುಕೊಡುವ ಮೂಲಕ ರಾಜ್ಯದ ಆರ್ಥಿಕತೆಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದರು.ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ಮೈಸೂರಿನ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ವಿಶ್ವ ಪತ್ರಿಕಾ ದಿನಾಚರಣೆ, 5ನೇ ರಾಜ್ಯ ಪತ್ರಿಕಾ ವಿತರಕರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಕೊಳಚೆ ಪ್ರದೇಶಗಳಿಂದ ವಿಧಾನಸೌಧದವರೆಗೂ ವ್ಯಾಪಿಸಿರುವ ಪತ್ರಿಕಾ ವಿತರಕರು ಮುದ್ರಣ ಮಾಧ್ಯಮದ ಬೆನ್ನುಮೂಳೆ ಮತ್ತು ಪತ್ರಿಕಾ ಸಂಸ್ಥೆಗಳ ನರಮಂಡಲ ಆಗಿ ಕಲಸ ಮಾಡುತ್ತಾರೆ. ಪತ್ರಿಕೆಯ ಚಂದಾ ಹಣ ಸಂಗ್ರಹಿಸುವ ಜೊತೆಗೆ ಸಣ್ಣ ಜಾಹೀರಾತುದಾರರನ್ನು ಸಂಸ್ಥೆಯ ಜೊತೆ ಬೆಸೆಯುತ್ತಾರೆ ಎಂದರು.ಪತ್ರಿಕಾ ವಿತರಕರಿಗೆ ಸರ್ಕಾರದ ಸವಲತ್ತುಗಳು ಸಿಗಬೇಕು ಎನ್ನುವುದು ಒಂದು ಕಡೆ ಇರಲಿ. ಜೊತೆಗೆ ಪತ್ರಿಕಾ ಸಂಸ್ಥೆಗಳೂ ಇನ್ನಿತರೆ ಉದ್ಯಮಿಗಳ ಮೂಲಕ ಸಿಎಸ್ಆರ್ ನಿಧಿಯಿಂದ ಈ ಸಮುದಾಯಕ್ಕೆ ಅನುಕೂಲ ಕಲ್ಪಿಸುವ ಅವಕಾಶಗಳೂ ಇವೆ. ಈ ದಿಕ್ಕಿನಲ್ಲೂ ಗಮನ ಹರಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಕೆ. ಶಂಭುಲಿಂಗ ಮೊದಲಾದವರು ಇದ್ದರು.