ಕನ್ನಡಪ್ರಭ ವಾರ್ತೆ ಅರಸೀಕೆರೆ
ಕನ್ನಡ ಸಾಹಿತ್ಯ, ಜಾನಪದ ಕಲೆ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಬೆಳವಣಿಗೆಗೆ ಸಾಹಿತ್ಯ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ. ಇಂತಹ ಸಂದರ್ಭದಲ್ಲಿ ಸಾಹಿತಿಗಳು, ಲೇಖಕರು ಮತ್ತು ಕಲಾವಿದರಿಗೆ ವೇದಿಕೆ ಕಲ್ಪಿಸುವ ಕಾರ್ಯವನ್ನು ಜಿಲ್ಲಾ ಬರಹಗಾರರ ಸಂಘ ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಚೈತನ್ಯ ಮೂಡಿಸುತ್ತಿದೆ ಎಂದು ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷ ಸುಂದರೇಶ್ ಡಿ. ಉಡುವರೆ ಹೇಳಿದರು.ನಗರದ ರೋಟರಿ ಭವನದಲ್ಲಿ ತಾಲೂಕು ಬರಹಗಾರರ ಸಂಘ, ಕರ್ನಾಟಕ ಜಾನಪದ ಪರಿಷತ್ ಹಾಗೂ ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಹಕಾರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಸಾಹಿತಿ ದಿಬ್ಬೂರು ರಮೇಶ್ ಅವರ ‘ಆತ್ಮಗತ’ ಹಾಗೂ ‘ವೈಚಾರಿಕ ಪ್ರಜ್ಞೆ ಮತ್ತು ಮನೋಧರ್ಮ’ ಕೃತಿಗಳ ಲೋಕಾರ್ಪಣೆ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಳ್ಳಬೇಕಾದ ಹಲವಾರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಇಂದು ಬರಹಗಾರರ ಸಂಘ ನಡೆಸುತ್ತಿದೆ. ಕನ್ನಡ ಲೇಖಕರ ಕೃತಿಗಳ ಬಿಡುಗಡೆ, ಸಾಹಿತ್ಯಿಕ ಕಾರ್ಯಕ್ರಮಗಳ ಆಯೋಜನೆ, ಜಾನಪದ ಕಲಾವಿದರ ಪ್ರೋತ್ಸಾಹ ಹಾಗೂ ಕನ್ನಡ ಶಾಲೆಗಳ ಉಳಿವಿನ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಸಂಘ ನಿರಂತರವಾಗಿ ತೊಡಗಿಸಿಕೊಂಡಿದೆ. ಸಾಹಿತ್ಯ ಮತ್ತು ಕಲೆಯ ಬೆಳವಣಿಗೆಗೆ ಅಗತ್ಯವಾದ ವೇದಿಕೆಗಳನ್ನು ನಿರ್ಮಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಡಿ. ಎಸ್. ರಾಮಸ್ವಾಮಿ, ಸಾಹಿತ್ಯ ರಚನೆ ಮತ್ತು ಕೃತಿ ಪ್ರಕಟಣೆ ಎನ್ನುವುದು ಸೃಜನಶೀಲತೆಯ ಮಹತ್ವದ ಘಟ್ಟವಾಗಿದೆ. ಕೃತಿಯ ಮೌಲ್ಯವನ್ನು ಓದುಗರು ಸ್ವೀಕರಿಸುವ ರೀತಿಯೇ ನಿರ್ಧರಿಸುತ್ತದೆ. ದಿಬ್ಬೂರು ರಮೇಶ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ತೋರಿರುವ ಆಸಕ್ತಿ, ಬದ್ಧತೆ ಮತ್ತು ನಿರಂತರ ಪರಿಶ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಪರಮೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಹಿರಿಯ ಸಾಹಿತಿ ಕೆ.ಸಿ. ನಟರಾಜ್ ಅವರು ಕೃತಿಕಾರ ದಿಬ್ಬೂರು ರಮೇಶ್ ಅವರ ಸಾಹಿತ್ಯ ಪಯಣವನ್ನು ಪರಿಚಯಿಸಿದರು. ‘ಆತ್ಮಗತ’ ಕೃತಿಯನ್ನು ಜಿ.ಎಸ್. ಪ್ರಕಾಶ್ ಲೋಕಾರ್ಪಣೆಗೊಳಿಸಿದ್ದು, ನಿವೃತ್ತ ಉಪನ್ಯಾಸಕ ಡಾ. ಬಿ. ಡಿ. ಕುಮಾರ್ ಕೃತಿಯ ವಿಮರ್ಶೆ ನಡೆಸಿದರು. ‘ವೈಚಾರಿಕ ಪ್ರಜ್ಞೆ ಮತ್ತು ಮನೋಧರ್ಮ’ ಕೃತಿಯನ್ನು ನಿವೃತ್ತ ಪ್ರಾಂಶುಪಾಲ ವೈ. ಎಂ. ಚೆನ್ನಯ್ಯ ಬಿಡುಗಡೆಗೊಳಿಸಿದ್ದು, ನಿವೃತ್ತ ಉಪನ್ಯಾಸಕ ಡಾ. ಹರಶಿವಮೂರ್ತಿ ಕೃತಿಯ ವೈಚಾರಿಕ ಅಂಶಗಳನ್ನು ವಿಶ್ಲೇಷಿಸಿದರು.ಕೃತಿಕಾರ ಹಾಗೂ ಜಿಲ್ಲಾ ಬರಹಗಾರರ ಸಂಘದ ಕಾರ್ಯದರ್ಶಿ ದಿಬ್ಬೂರು ರಮೇಶ್ ಮಾತನಾಡಿ, ತಮ್ಮ ಸಾಹಿತ್ಯ ಪಯಣಕ್ಕೆ ಬೆಂಬಲ ನೀಡಿದ ಹಿರಿಯರು, ಸ್ನೇಹಿತರು ಹಾಗೂ ಸಾಹಿತ್ಯಾಸಕ್ತರನ್ನು ಸ್ಮರಿಸಿದರು. ಕೃತಿಗಳ ರಚನೆ ಮತ್ತು ಲೋಕಾರ್ಪಣೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್. ಬಸವರಾಜ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಿರಣ್ ಕುಮಾರ್, ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಶಿಲ್ಪಾ ಚಂದ್ರು, ಅರಕಲಗೂಡು ಯೋಗೀಶ್ ಕಾರ್ಗಿಲ್, ತಾಲೂಕು ಬರಹಗಾರರ ಸಂಘದ ಕಾರ್ಯದರ್ಶಿ ಡಾ. ಹರೀಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸುವ ಮೂಲಕ ಸಾಹಿತ್ಯಿಕ ವಾತಾವರಣವನ್ನು ಮತ್ತಷ್ಟು ಸಮೃದ್ಧಗೊಳಿಸಿದರು.ಸಾಹಿತ್ಯ ಚಟುವಟಿಕೆಗಳಲ್ಲಿ ಜಿಲ್ಲಾ ಬರಹಗಾರರ ಸಂಘ ಮುಂಚೂಣಿ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಳ್ಳಬೇಕಾದ ಹಲವಾರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಇಂದು ಬರಹಗಾರರ ಸಂಘ ನಡೆಸುತ್ತಿದೆ. ಕನ್ನಡ ಲೇಖಕರ ಕೃತಿಗಳ ಬಿಡುಗಡೆ, ಸಾಹಿತ್ಯಿಕ ಕಾರ್ಯಕ್ರಮಗಳ ಆಯೋಜನೆ, ಜಾನಪದ ಕಲಾವಿದರ ಪ್ರೋತ್ಸಾಹ ಹಾಗೂ ಕನ್ನಡ ಶಾಲೆಗಳ ಉಳಿವಿನ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಸಂಘ ನಿರಂತರವಾಗಿ ತೊಡಗಿಸಿಕೊಂಡಿದೆ. ಸಾಹಿತ್ಯ ಮತ್ತು ಕಲೆಯ ಬೆಳವಣಿಗೆಗೆ ಅಗತ್ಯವಾದ ವೇದಿಕೆಗಳನ್ನು ನಿರ್ಮಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.