ಹೊಸ ಕಾನೂನು ಜಾರಿಗೊಳಿಸದಂತೆ ಚಾಲಕರ ಆಗ್ರಹ

| Published : Jan 18 2024, 02:03 AM IST

ಸಾರಾಂಶ

ಹೊಸ ಕಾಯ್ದೆ ಅವೈಜ್ಞಾನಿಕವಾಗಿದ್ದು, ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಬೇಕು.ಈ ಕಾನೂನು ಚಾಲಕರಿಗೆ ಮರಣ ಶಾಸನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಹೊಸ ಕಾನೂನು ಚಾಲಕರಿಗೆ ಮರಣ ಶಾಸನವಾಗಿದೆ. ಆದ್ದರಿಂದ ಜಾರಿಗೆ ತರಲು ಮುಂದಾಗಿರುವ ಹೊಸ ಕಾನೂನು ಹಿಂಪಡೆಯಬೇಕು ಎಂದು ಆಗ್ರಹಿಸಿ ಬುಧವಾರ ಕರುನಾಡು ಸಾರಥಿಗಳ ಸೈನ್ಯ ಟ್ರೇಡ್‌ ಯೂನಿಯನ್‌ ನೇತೃತ್ವದಲ್ಲಿ ಚಾಲಕರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಅಜಾಗರೂಕ ಚಾಲನೆಯಿಂದ ಡಿಕ್ಕಿ ಹೊಡೆದು ಪೊಲೀಸ್ ಅಥವಾ ಸ್ಥಳೀಯ ಆಡಳಿತಕ್ಕೆ ತಿಳಿಸದೇ ಸ್ಥಳದಿಂದ ಪರಾರಿಯಾಗುವ ಚಾಲಕರಿಗೆ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ ₹ 7 ಲಕ್ಷ ದಂಡ ವಿಧಿಸುವ ಹೊಸ ಕಾಯ್ದೆ ಅವೈಜ್ಞಾನಿಕವಾಗಿದ್ದು, ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಬೇಕು.ಈ ಕಾನೂನು ಚಾಲಕರಿಗೆ ಮರಣ ಶಾಸನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ದೇಶದಲ್ಲಿ ರಸ್ತೆ, ಟ್ರಾಫಿಕ್‌ ಮತ್ತು ಹೊಸದಾಗಿ ಬರುತ್ತಿರುವ ವಾಹನಗಳ ಸ್ಥಿತಿ ಮತ್ತು ರಸ್ತೆ ನಿಯಮಗಳ ಹಾಗೂ ಚಾಲಕರ ಬಗ್ಗೆ ಇರುವ ಮಾಹಿತಿ ಸ್ಥಿತಿ ಅಧ್ಯಯನ ಮಾಡುವ ಒಂದು ಸಮಿತಿ ನೇಮಿಸಿ ಅದು ನೀಡುವ ಸಲಹೆ ಪಡೆದು ಕಾನೂನು ಜಾರಿ ತಂದರೆ ಕೋವಿಡ್‌-19 ಹೊಡೆತದ ಬಳಿಕ ಸ್ವಲ್ಪ ಚೇತರಿಸಿಕೊಳ್ಳುವ ಸಮಯದಲ್ಲಿ ಈ ಕಾನೂನು ಅವಶ್ಯಕತೆ ಬಗ್ಗೆ ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ವಿನಂತಿಸಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷ ಲಕ್ಷ್ಮಣ ನಾಯಿಕ, ರಾಜಶೇಖರ ಹೊಸಮನಿ, ಮಲ್ಲಿಕಾರ್ಜುನ ಬಜೆ, ರವಿ ಕಾಳಿನಟ್ಟಿ, ಶಿವಾನಂದ ಸೊಲಬನ್ನವರ ಸೇರಿದಂತೆ ಮೊದಲಾದವರು ಇದ್ದರು.