ಸಾರಾಂಶ
ಸಿಂಧನೂರಿನ ಸಾರಿಗೆ ಘಟಕದಲ್ಲಿ ನಡೆದ ರಸ್ತೆ ಸುರಕ್ಷತಾ ಹಾಗೂ ಅಪಘಾತ ನಿಯಂತ್ರಣ ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಲಕ್ಷ್ಮಿಕಾಂತ ಜೆ.ಮಿಸ್ಕಿನ್ ಮಾತನಾಡಿದರು.
ಸಿಂಧನೂರು: ಚಾಲಕರು ಅತ್ಯಂತ ಜಾಗ್ರತೆಯಿಂದ ವಾಹನ ಚಾಲಾಯಿಸಬೇಕೆಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಲಕ್ಷ್ಮಿಕಾಂತ ಜೆ.ಮಿಸ್ಕಿನ್ ಹೇಳಿದರು.
ನಗರದ ಸಾರಿಗೆ ಘಟಕದಲ್ಲಿ ಈಚೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ರಾಯಚೂರು ವಿಭಾಗದಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಹಾಗೂ ಅಪಘಾತ ನಿಯಂತ್ರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಚಾಲಕರ ಮನಸ್ಸು ಸದಾ ಶಾಂತಿಯಿಂದ ಕೂಡಿರಬೇಕು. ವಾಹನ ಚಾಲನೆ ಮಾಡುವಾಗ ಅಕ್ಕಪಕ್ಕದವರ ಜೊತೆ ಮತ್ತು ಮೊಬೈಲ್‌ನಲ್ಲಿ ಮಾತನಾಡುವುದು ಮಾಡಬಾರದು. ವಾಹನದಲ್ಲಿ ಹಲವು ಜನರ ಜೀವ ತಮ್ಮ ಕೈಯಲ್ಲಿ ಇರುತ್ತದೆ. ಹಾಗಾಗೀ ಅತಿವೇಗ ಮತ್ತು ಅಲಕ್ಷ್ಯತನದಿಂದ ವಾಹನ ಚಾಲನೆ ಮಾಡಬಾರದು ಎಂದು ಕಿವಿಮಾತು ಹೇಳಿದರು.
ವಿಭಾಗೀಯ ಸಂಚಾರ ಅಧಿಕಾರಿ ಚಂದ್ರಶೇಖರ ಮಾತನಾಡಿ, ಚಾಲಕರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ನಿತ್ಯ ಬೆಳಗ್ಗೆ ಯೋಗ, ಧ್ಯಾನ, ವ್ಯಾಯಾಮ ಕಡ್ಡಾಯವಾಗಿ ಮಾಡಬೇಕು ಎಂದು ಸಲಹೆ ನೀಡಿದರು.ಕಾನೂನು ಸಲಹೆಗಾರ ಬಸವರಾಜ ಮಾತನಾಡಿ, ವಾಹನ ಅಪಘಾತದಿಂದ ಘಟಕಕ್ಕೆ ಆರ್ಥಿಕ ನಷ್ಟ ಉಂಟಾಗುತ್ತದೆ. ಚಾಲಕರು ಅಪಘಾತ ರಹಿತ ಚಾಲನೆ ಮಾಡಬೇಕು ಎಂದು ತಿಳಿಸಿದರು.
ಬಸ್ ಡಿಪೋ ವ್ಯವಸ್ಥಾಪಕ ಪ್ರಕಾಶ ದೊಡ್ಡಮನಿ ಸೇರಿದಂತೆ ಚಾಲಕರು, ನಿರ್ವಾಹಕರು ಉಪಸ್ಥಿತರಿದ್ದರು.