ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಡೇರಿ ವೃತ್ತ, ರಿಂಗ್ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ ಕರ್ನಾಟಕ (ಪ್ರಾಯೋಜಿತ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಭಾರತ ಸರ್ಕಾರ-ನವದೆಹಲಿ), ಭುವನೇಶ್ವರಿ ಮದ್ಯಪಾನ ಸೇವನಿಗಳ ಸಮಗ್ರ ಪುನರ್ವಸತಿ ಕೇಂದ್ರ, ಹಾಸನ ಇವರ ಸಹಯೋಗದಲ್ಲಿ ಮಾದಕ ವಸ್ತುವಿನ ನಿಯಂತ್ರಣ ಹಾಗೂ ಅರಿವು ಮೂಡಿಸುವ ಒಂದು ದಿನದ ಕಾರ್ಯಾಗಾರವನ್ನು ಕೆಎಸ್‌ಆರ್‌ಟಿಸಿ ಚಾಲಕ, ನಿರ್ವಾಹಕ, ಮೆಕ್ಯಾನಿಕ್ ಸಿಬ್ಬಂದಿಗೆ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಂಗವಿಕಲರ ಕಲ್ಯಾಣಾಧಿಕಾರಿ ಅನುಪಮಾ ಅವರು ಮಾತನಾಡಿ, ಬಸ್ಸಿನಲ್ಲಿ ಪ್ರಯಾಣಿಸುವ 40ರಿಂದ 50 ಜನರ ಪ್ರಾಣವೂ ಒಬ್ಬ ಬಸ್ಸಿನ ಚಾಲಕ ಮತ್ತು ನಿರ್ವಾಹಕರ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ಇವರು ಸಮಯ ಪ್ರಜ್ಞೆ, ಯಾವುದೇ ದುಶ್ಚಟಗಳಿಗೆ ದಾಸರಾಗದೆ ತಮ್ಮ ಕೆಲಸವನ್ನು ಜವಾಬ್ದಾರಿಯಿಂದ, ಕಾರ್ಯನಿಷ್ಠೆಯಿಂದ ನಿರ್ವಹಿಸಬೇಕೆಂದು ಸಭೆಯಲ್ಲಿ ನೆರೆದಿದ್ದ ಸಿಬ್ಬಂದಿಗೆ ಕಿವಿಮಾತು ಹೇಳಿದರು.
ಮಾದಕ ವಸ್ತುಗಳ ಮಾರಾಟವು ಮೊದಲು ಎಂಜಿನಿಯರ್ ಕಾಲೇಜುಗಳ ಸಮೀಪ ಮಾತ್ರ ಸೀಮಿತವಾಗಿತ್ತು. ಇದೀಗ ಪದವಿ ಪೂರ್ವ ಕಾಲೇಜುಗಳ ಹತ್ತಿರ ವ್ಯಾಪಿಸುತ್ತಿದೆ. ಇದು ಸಮಾಜಕ್ಕೆ ಒಳ್ಳೆಯ ಬೆಳವಣಿಗೆಯಲ್ಲ. ಹಾಗಾಗಿ ಕಾಲೇಜುಗಳ ಸಮೀಪ ಮಾರುವೇಷದಲ್ಲಿ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ ಮಾರಾಟಗಾರರು ಕಂಡು ಬಂದಲ್ಲಿ ಬಂಧಿಸಬೇಕೆಂದು ತಿಳಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಗೀತಾಂಜಲಿ ಅವರು ಮಾತನಾಡಿ, ಅತಿಯಾದ ಮದ್ಯವ್ಯಸನದಿಂದ ನಮ್ಮ ಸಿಬ್ಬಂದಿಯ ಇಡೀ ಕುಟುಂಬವೇ ಬೀದಿಗೆ ಬೀಳುವ ಸ್ಥಿತಿ ಬರುತ್ತದೆ. ಹಾಗಾಗಿ ಪ್ರಾರಂಭದಲ್ಲೇ ಇಂತಹ ದುಶ್ಚಟಗಳಿಗೆ ನೀವುಗಳು ಬಲಿಯಾಗಬಾರದೆಂದು ಹಾಗೂ ಕೆಲಸದ ಒತ್ತಡವನ್ನು ಮರೆಮಾಚಲು ಮಾದಕ ವಸ್ತುಗಳ ದಾಸರಾಗಬಾರದೆಂಬ ಕಾಳಜಿಯಿಂದ ಅರಿವು ಮೂಡಿಸುವ ಈ ಕಾರ್ಯಕ್ರಮವನ್ನು ನಿಮಗೆ ಸದುಪಯೋಗವಾಗುವ ದೃಷ್ಟಿಯಿಂದ ಆಯೋಜಿಸಲಾಗಿದೆ. ಮಾದಕ ವಸ್ತುಗಳಿಂದ ನೀವು ಮಾಡುವ ಕೆಲಸಗಳಲ್ಲಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗದೇ ಕೆಲಸದ ಕಾರ್ಯಕ್ಷಮತೆ ಕುಗ್ಗಿ ಅಸಮತೋಲನ ಉಂಟಾಗುತ್ತದೆ. ಇದರಿಂದ ಕೆಲಸ, ಕುಟುಂಬ, ಹಾಗೂ ಆರೋಗ್ಯವೂ ಹಾಳಾಗುತ್ತದೆ ಎಂದು ತಮ್ಮ ಸಿಬ್ಬಂದಿಗೆ ಎಚ್ಚರಿಕೆಯ ಹಿತನುಡಿಗಳನ್ನು ಹೇಳಿದರು.
ಆದಿಚುಂಚನಗಿರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾನಸಿಕ ರೋಗ ತಜ್ಞರಾದ ಡಾ.ಕಾರ್ತಿಕ್ ಜೆ. ಉಪನ್ಯಾಸ ನೀಡಿ, ಯೌವನದಲ್ಲಿ ಮಾದಕ ವಸ್ತುಗಳ ಚಟಗಳಿಗೆ ಬಲಿಯಾದರೆ ಬದುಕು ದುಸ್ತರವಾಗುವ ಜೊತೆಗೆ ಶಾರೀರಿಕ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ.ಮದ್ಯಪಾನ, ಬೀಡಿ, ಸಿಗರೇಟ್, ತಂಬಾಕು, ಗಾಂಜಾ, ಕೊಕೆನ್ ಸೇರಿದಂತೆ ಇನ್ನಿತರ ಚಟಗಳಿಗೆ ಒಮ್ಮೆ ಬಲಿಯಾದರೆ ಕೆಲವು ಕ್ಷಣಗಳಿಗೆ ಮಾತ್ರ ಅಮಲಿನ ನಶೆಯಲ್ಲಿ ತೇಲಿಸುತ್ತದೆ. ಇದು ಕ್ಷಣಿಕ ಸುಖವಾಗಿರುತ್ತದೆ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜೊತೆಗೆ ಕೆಲಸದ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚು ಗಮನ ಹರಿಸಲು ಬಿಡುವುದಿಲ್ಲ ಎಂದು ತಿಳಿಸಿದರು.
ಪ್ರಾದೇಶಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದ ಸಂಯೋಜಕ ಬಾಲಕೃಷ್ಣರಾಜ್ ಮಾತನಾಡಿ, ಎಸ್‌ಎಲ್‌ಸಿಎ (SLCA) ಬಗ್ಗೆ ಪರಿಚಯಿಸುತ್ತಾ, ಇಂದು ಕರ್ನಾಟಕದಲ್ಲಿ 37 ಸ್ವಯಂ ಸೇವಾ ಸಂಸ್ಥೆಗಳು ಮಾದಕ ವಸ್ತುಗಳ ವಿರುದ್ಧ ಕಾರ್ಯನಿರ್ವಹಿಸುತ್ತಿದೆ ಎಂದರು. ಶಾಲಾ-ಕಾಲೇಜು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕಮ್ಯುನಿಟಿಗಳಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದರು. ನಮ್ಮ ದೇಶದಲ್ಲಿ ಸಮೀಕ್ಷೆಯ ಪ್ರಕಾರ 16 ಕೋಟಿ ಜನ ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದರಲ್ಲಿ 7ರಿಂದ 21 ವಯಸ್ಸಿನ ಮಕ್ಕಳು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಕಾಲೇಜಿನ ಮಕ್ಕಳಿಗೂ ಹಾಗೂ ಪೋಷಕರಿಗೂ ಇದರ ಅರಿವು ತಿಳಿದುಕೊಳ್ಳುವುದು ಬಹಳ ಮಹತ್ವದಾಗಿದೆ. ತಂದೆ-ತಾಯಿಗಳು ತಮ್ಮ ಮಕ್ಕಳು ಚೆನ್ನಾಗಿರಲೆಂದು ಅವರ ಕೈಗೆ ಹಣವನ್ನು ಕೊಡುತ್ತಾರೆ. ಆದರೆ ಮಕ್ಕಳು ಈ ಹಣವನ್ನು ದುರುಪಯೋಗ ಮಾಡಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ಹೇಳುತ್ತಾ, ಇದನ್ನು ನಾಶಪಡಿಸಲು ಸಾಧ್ಯವಿಲ್ಲ ಆದರೆ ಇದನ್ನು ತಡೆಗಟ್ಟಲು ಸಾಧ್ಯ. ಇದರ ಸಲುವಾಗಿಯೇ ಭಾರತ ಸರ್ಕಾರ ಈ ಎಸ್‌ಎಲ್‌ಸಿಎ (SLCA) ಅನ್ನು ನೇಮಕ ಮಾಡಲಾಗಿದೆ ಎಂದರು.ಭುವನೇಶ್ವರಿ ಮದ್ಯಪಾನ ಸೇವನಿಗಳ ಸಮಗ್ರ ಪುನರ್ವಸತಿ ಕೇಂದ್ರದ ಯೋಜನಾ ನಿರ್ದೇಶಕರಾದ ಅಂಜಲಿ ಗೋವಿಂದ ರಾಜು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪ್ರಾದೇಶಿಕ ತರಬೇತಿ ಕೇಂದ್ರದ ಸಿಬ್ಬಂದಿ ವರ್ಗದವರು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿದರು.