ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮಹಿಳೆ ಅಡುಗೆ ಮನೆಯಿಂದ ಹಿಡಿದು ಎಲ್ಲಾ ಕ್ಷೇತ್ರದಲ್ಲೂ ಕಾಲಿಟ್ಟಿದ್ದು, ಮೊದಲು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವುದರ ಮೂಲಕ ಶಕ್ತಿ ತುಂಬಬೇಕು. ಮನೆಯಲ್ಲಿ ಹೆಣ್ಣು ಮಗು ಜನಿಸಿದರೇ ದುಃಖ ಪಡದೇ ಸಿಹಿ ಹಂಚಿ ಸಂಭ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಮಹಿಳೆಯರಿಗೆ ಧೈರ್ಯ ತುಂಬಿದರು. ನಗರದ ಹಾಸನಾಂಬ ಕಲಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಸನ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಸಮಾಜ ಕಲ್ಯಾಣ ಇಲಾಖೆ. ಹಾಗೂ ಶಿಕ್ಷಣ ಇಲಾಖೆ, ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ "ಬೇಟಿ ಬಚಾವೋ ಬೇಟಿ ಪಢಾವೋ "ಯೋಜನೆಯಡಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಜಾಗೃತಿ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಹೆಣ್ಣು ಒಂದು ಕಲಿತರೆ ಶಾಲೆಯೊಂದು ತೆರೆದಂತೆ ಸಮಾಜದಲ್ಲಿ ಹೆಣ್ಣು ಮಗುವಿಗೆ ದೊರೆಯಬೇಕಿರುವ ಗೌರವ ಮತ್ತು ಮೌಲ್ಯವನ್ನು ತಿಳಿಸಬೇಕು ಮನೆಯಲ್ಲಿ ತಾಯಿಂದಿರು ಮಕ್ಕಳಿಗೆ ಸಂಸ್ಕಾರ ನೀಡಬೇಕು. ಸಮಾಜದಲ್ಲಿ ಹೆಣ್ಣು ಮಗುವಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಹೆಣ್ಣು ಮಗುವಿನತ್ತ ಸಮಾಜದ ದೃಷ್ಟಿಕೋನ ಬದಲಿಸುವುದು. ಭಾರತೀಯ ಜನರಲ್ಲಿ ಲಿಂಗಸಮಾನತೆಯ ಜಾಗೃತಿ ಉಂಟು ಮಾಡುವುದು ಎಂದರು.ಪ್ರಸವಪೂರ್ವ ಲಿಂಗಪತ್ತೆ ನಿಷೇಧ, ಹೆಣ್ಣು ಮಕ್ಕಳ ಬಾಲ್ಯ ವಿವಾಹ ಪದ್ಧತಿಗೆ ನಿರ್ಬಂಧ, ಭ್ರೂಣ ಪತ್ತೆ, ದೌರ್ಜನ್ಯ, ಹೆಣ್ಣು ಮಕ್ಕಳ ವಿರುದ್ಧ ನಡೆಯುವ ಶೋಷಣೆ, ಲೈಗಿಂಕ ಕಿರುಕುಳ ಅಂತಹ ಕೃತ್ಯಗಳನ್ನು ತಡೆಗಟ್ಟಬೇಕು. ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿರುವ ವಿಚಾರದ ಕುರಿತಾಗಿ ಜಾಗೃತಿ ಮೂಡಿಸುವುದು. ಅಸಮಾನತೆ ಮತ್ತು ಲಿಂಗತಾರತಮ್ಯದಂತಹ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸುವುದು. ಹೆಣ್ಣು ಮಗು ಜನಿಸಿದರೆ ಸಂಭ್ರಮ ಮಾಡಬೇಕು, ಹೆಣ್ಣು ಮಕ್ಕಳನ್ನು ಓದಿಸಿ, ಒಳ್ಳೆಯ ಸಂಸ್ಕಾರ ನೀಡಬೇಕು, ಶಿಕ್ಷಣ ಕೊಡಬೇಕು ಹೆಣ್ಣು ಮಗು ಈ ದೇಶಕ್ಕೆ ಆಸ್ತಿ ಆಗುತ್ತಾರೆ ಎಂದು ಹೇಳಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಉಷಾರಾಣಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣಿನ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿದೆ, ಹೆಣ್ಣು ಮಕ್ಕಳನ್ನು ಸಂರಕ್ಷಣೆ ಮಾಡಬೇಕು ಭ್ರೂಣ ಹತ್ಯೆ, ಭ್ರೂಣ ಪತ್ತೆ ದೆಹಲಿ, ಕೋಲ್ಕತಾ, ಬೆಂಗಳೂರು, ಬಾಂಬೆ ಇಲ್ಲಿ ದೌರ್ಜನ್ಯಗಳು ನಡೆದಿವೆ. ಇವುಗಳನ್ನು ಹೋಗಲಾಡಿಸಲು ಕಾನೂನುಗಳು ಇವೆ. ತಾರತಮ್ಯ ಮತ್ತು ಹಿಂಸಾಚಾರದ ಚಕ್ರವನ್ನು ಮುರಿಯುವಲ್ಲಿ ಮತ್ತು ಅವರ ಮಾನವ ಹಕ್ಕುಗಳ ಸಂಪೂರ್ಣ ಮತ್ತು ಪರಿಣಾಮಕಾರಿ ಆನಂದವನ್ನು ಉತ್ತೇಜಿಸುವಲ್ಲಿ ಮತ್ತು ರಕ್ಷಿಸುವಲ್ಲಿ ಪ್ರಮುಖವಾಗಿದೆ.
ಅಂತೆಯೇ ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸಲು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆ ಮುಖ್ಯವಾಗಿದೆ. ಅವರ ಪೋಷಕರು, ಕಾನೂನು ಪಾಲಕರು ಕುಟುಂಬಗಳು ಮತ್ತು ಆರೈಕೆ ಪೂರೈಕೆದಾರರು ಭಾರತೀಯ ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುವ ಎಲ್ಲ ತಾರತಮ್ಯವನ್ನು ತೊಡೆದು ಹಾಕುವುದು. ಮತ್ತು ಹೆಣ್ಣುಮಕ್ಕಳನ್ನು ಬೇಡ ಎಂದು ತಿರಸ್ಕರಿಸುವುದು, ಹೆಣ್ಣು ಮಕ್ಕಳ ರಕ್ಷಣೆ ಮಾಡದೇ ಇರುವುದು ಬಹಳ ತಪ್ಪು ಇದು ದೇಶಕ್ಕೆ ಮಾಡುವ ದ್ರೋಹ, ಹೆಣ್ಣು ಮಕ್ಕಳ ರಕ್ಷಣೆಗೆ ಸಾಕಷ್ಟು ಯೋಜನೆಗಳನ್ನು ಸರ್ಕಾರ ಮಾಡಿದೆ. ಈ ಕಾನೂನುಗಳನ್ನು ಹೆಣ್ಣು ಮಕ್ಕಳ ಸಂರಕ್ಷಣೆಗೆ ಬಳಸುವ ಅವರನ್ನು ದೇಶದ ಹೆಮ್ಮೆಯ ವ್ಯಕ್ತಿಯಾಗಿ ಮಾಡುತ್ತೇವೆ, ಎಲ್ಲರಿಗೂ ಸಮಸ್ಯೆ ಇದ್ದೇ ಇರುತ್ತದೆ ಅದನ್ನು ಮುನ್ನುಗಿ ಯಶಸ್ಸನ್ನು ಕಾಣುವ ಆದಿಯನ್ನು ಹುಡುಕಬೇಕು. ಕಾನೂನುನ್ನು ತಿಳಿದುಕೊಳ್ಳಿ, ತೊಂದರೆ ಆಗುವಾಗ ಕಾನೂನನ್ನು ಬಳಸಿಕೊಳ್ಳಿ, ಬೇರೆಯವರಿಗೂ ಸಹಾಯ ಆಗುವಂತೆ ಕಾನೂನುನ್ನು ಉಪಯೋಗಿಸಿ, ಆದರೆ ಅದನ್ನು ಬೇರೆಯವರ ದೌರ್ಜನ್ಯಕ್ಕೆ ಬಳಸಬಾರದು ಎಂದು ತಿಳಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಜಿ.ಕೆ. ದಾಕ್ಷಾಯಿಣಿ ಮಾತನಾಡಿ, ಹೆಣ್ಣು ಮಕ್ಕಳು ಎಲ್ಲಾ ರಂಗದಲ್ಲಿಯೂ ಛಾಪು ಮೂಡಿಸಿದ್ದಾರೆ. ಹೆಣ್ಣು ಮಕ್ಕಳ ದೌರ್ಜನ್ಯ ದಿನೇ ದಿನೇ ಹೆಚ್ಚು ಪ್ರಕರಣಗಳು ಕಂಡು ಬರುತ್ತಿವೆ. ಸಂವಿಧಾನದಲ್ಲಿ ಅನುಚ್ಛೇದ ೧೪ರಲ್ಲಿ ಸಮಾನತೆ ಹಕ್ಕು ಹೆಣ್ಣು ಮಕ್ಕಳು ಗಂಡು ಮಕ್ಕಳಂತೆ ಸಮಾನತೆ ನೀಡಬೇಕು, ಆಸ್ತಿ ಹಕ್ಕು, ವಿದ್ಯಾಭ್ಯಾಸ ಹಕ್ಕು, ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳು ಕಾನೂನು ಅವರಿಗೇ ಇದೆ. ಕಾನೂನು ಮೂಲಭೂತ ಕರ್ತವ್ಯಗಳನ್ನು ಒದಗಿಸಿದೆ. ವರದಕ್ಷಿಣೆ ಕಿರುಕುಳ, ಭೇದಭಾವ ಮತ್ತು ಬಾಲ್ಯವಿವಾಹ ಅಂತಹ ಹಲವಾರು ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದರೊಂದಿಗೆ, ಸಾಮಾಜಿಕ ಪಿಡುಗು ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಸನ್ನ ಅವರು ಮಾತನಾಡಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹೆಣ್ಣು ಮಕ್ಕಳು ಸಬಲೀಕರಣ ಆಗಬೇಕು. ಹೆಣ್ಣಿಗೆ ಸಮಾಜದಲ್ಲಿ ಗೌರವ ಸಿಗುವಂತಾಗಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಹಾಗೂ ರಂಗೋಲಿ, ಇತರೆ ಸ್ಪರ್ಧೆಯಲ್ಲಿ ಗೆಲುವು ಪಡೆದವರಿಗೆ ಇದೇ ವೇಳೆ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಡಿ.ಟಿ ಪ್ರಸನ್ನ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ದೂದ್ ಫೀರ್, ಸರಕಾರಿ ಪ್ರೌಢಶಾಲೆ ಶಿಕ್ಷಕರು ಹಾಗೂ ಸಾಹಿತಿ ಬಿ.ಎಸ್. ವನಜಾಕ್ಷಿ ಹಾಗೂ ಆಶಾ ಕಾರ್ತೆಯರು, ಅಂಗನವಾಡಿ ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.