ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಜೀತ ಪದ್ಧತಿ ಎಂಬುದು ನಮ್ಮ ಸಮಾಜದಲ್ಲಿ ಪುರಾತನ ಕಾಲದಿಂದಲೂ ಬೇರುಬಿಟ್ಟಿರುವ ವ್ಯವಸ್ಥೆಯಾಗಿದೆ, ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಎಚ್ಚರವಹಿಸಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಕೆ ದಾಕ್ಷಾಯಿಣಿ ಅವರು ತಿಳಿಸಿದ್ದಾರೆ.ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಮಂಗಳವಾರ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತಾನಾಡಿದ ಅವರು, ಬಲಾಢ್ಯ ಮತ್ತು ಶ್ರೀಮಂತ ವರ್ಗದವರು ಸಾಲದ ರೂಪದಲ್ಲಿ ಹಣದ ಆಮಿಷ ಅಥವಾ ಮತ್ತಿತರ ರೀತಿಯ ಅನೇಕ ಆಮಿಷಗಳ ಒಡ್ಡಿ ಫಾರ್ಮ್ ಹೌಸ್‌ಗಳಲ್ಲಿ, ಗಣಿಗಾರಿಕೆ ಮತ್ತಿತರ ಕ್ಲಿಷ್ಟಕರ ಕೆಲಸಗಳಿಗೆ ಬಡತನದಲ್ಲಿರುವ ಜನರನ್ನು ನೇಮಿಸಿಕೊಂಡು ಜೀವನ ಪೂರ್ತಿ ಸಂಬಳ ರಹಿತವಾಗಿ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದರು, ಈ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ೧೯೭೬ರಲ್ಲಿ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದರು.
ನಿರ್ಮೂಲನೆಗೆ ಕಾರ್ಯಪ್ರವೃತ್ತರಾಗಿ:ಜಿಲ್ಲಾಧಿಕಾರಿ ಸತ್ಯಭಾಮ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀತ ಪದ್ಧತಿ ಎಂಬುದು ಒಂದು ಸಾಮಾಜಿಕ ಪಿಡುಗಾಗಿದೆ, ಇದು ಬೇರೆ ಬೇರೆ ರೂಪದಲ್ಲಿ ಎಲ್ಲೆಡೆ ಪಸರಿಸಿಕೊಂಡಿದೆ, ಇದನ್ನು ಸಮಾಜದಲ್ಲಿರುವ ಎಲ್ಲರೂ ಒಟ್ಟುಗೂಡಿ ನಿರ್ಮೂಲನೆ ಮಾಡಲು ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜೀತ ಪದ್ಧತಿಯಲ್ಲಿ ವೇತನವಿಲ್ಲದೆ ದುಡಿಯುವುದಲ್ಲದೆ ಜೊತೆಗೆ ಆ ಕಾರ್ಮಿಕನಿಗೆ ಯಾವುದೇ ರೀತಿಯ ಸ್ವಾತಂತ್ರ್ಯ, ಆತ್ಮಗೌರವವಿರುವುದಿಲ್ಲ ಮಾಲೀಕ ಹೇಳಿದ ಹಾಗೆ ಎಲ್ಲಾ ಕೆಲಸಗಳನ್ನು ಮಾಡಬೇಕು ಯಾವುದಕ್ಕೂ ಕೂಡ ಸ್ವಾತಂತ್ರ್ಯವಿರುವುದಿಲ್ಲ, ಈ ಜೀತ ಪದ್ಧತಿಗೆ ಒಳಪಟ್ಟಿರುವಂತಹವರನ್ನು ಗುರುತಿಸುವಿಕೆ, ರಕ್ಷಣೆ, ಬಿಡುಗಡೆಗೊಳಿಸುವುದು ಹಾಗೂ ಅವರಿಗೆ ಪುನರ್ವಸತಿ ಕಲ್ಪಿಸುವಂತಹ ಕೆಲಸಗಳಾಗಬೇಕು ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಅವರು ಮಾತನಾಡಿ, ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡುವ ಜವಾಬ್ದಾರಿ ಸಮಾಜದಲ್ಲಿರುವ ಪ್ರತಿಯೊಬ್ಬರದ್ದಾಗಿದೆ, ಮನುಷ್ಯರಿಗೆ ಮನುಷ್ಯರೇ ಬೆಲೆ ಕೊಡಬೇಕು, ಜೀತ ಪದ್ಧತಿ ಮಾಡುತ್ತಿರುವ ಕಾರ್ಮಿಕರ ಕುರಿತು ನಿಮ್ಮ ಗಮನಕ್ಕೆ ಬಂದರೆ ಅಂತಹ ಪ್ರಕರಣಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ಆ ಕೆಲಸವನ್ನು ಕಾರ್ಯರೂಪಕ್ಕೆ ತನ್ನಿ ಎಂದು ಹೇಳಿದರು.ಕಾನೂನಿನ ನಿಯಮಗಳನ್ನು ಜಾರಿಗೊಳಿಸಬೇಕು:
ಜಿಲ್ಲಾ ಹಿರಿಯ ವಕೀಲ ಬಿ ಚಂದ್ರಶೇಖರ್ ಅವರು ಮಾತನಾಡಿ, ಜೀತ ಪದ್ಧತಿ ಎಂಬ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ನಮ್ಮ ಸಂವಿಧಾನ ೨೩ನೇ ವಿಧಿಯಲ್ಲಿ ಬಲವಂತವಾಗಿ ದುಡಿಸಿಕೊಳ್ಳುವುದು ನಿಷೇಧ ಎಂದು ಮೂಲಭೂತ ಹಕ್ಕನ್ನು ಕೊಟ್ಟಿದೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದಾಗಿ ತಿಳಿಸಿದೆ. ಈ ಕಾನೂನನ್ನು ಜಾರಿಗೊಳಿಸಿದ ನಂತರ ಸಮಾಜದಲ್ಲಿ ಅನೇಕ ಬದಲಾವಣೆಗಳಾಗಿವೆ, ಈ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸ್ಥೈರ್ಯ, ಧೈರ್ಯವಿರಬೇಕು, ಕಾನೂನಿನ ನಿಯಮಗಳನ್ನು ಹೃದಯದಿಂದ ಪ್ರೀತಿಸಿ ಜಾರಿಗೊಳಿಸಬೇಕು. ಉದ್ದೇಶಪೂರ್ವಕವಾಗಿ ನಾವು ಮಾಡುವ ನಿರ್ಲಕ್ಷ್ಯ ಅಕ್ಷಮ್ಯವಾಗಿದೆ, ಹೃದಯದಿಂದ ಕೆಲಸ ಮಾಡಿ ಉತ್ತಮ ಫಲಿತಾಂಶ ಪಡೆಯೋಣ ಶೂನ್ಯ ಜೀತ ಪದ್ಧತಿಯಾಗಿ ನಮ್ಮ ಜಿಲ್ಲೆಯನ್ನು ಮಾಡೋಣ ಎಂದರು.ರಕ್ಷಣೆ ಮಾಡಿ:
ಬಡತನ, ಅನಕ್ಷರತೆ, ನಿರುದ್ಯೋಗ ಎಲ್ಲಾ ಪಿಡುಗುಗಳು ಸೇರಿ ವ್ಯಕ್ತಿಯನ್ನ ಜೀತ ಪದ್ಧತಿಗೆ ನೂಕಿವೆ. ಪೂರ್ವಿಕರು, ವಂಶಸ್ಥರು ಮಾಡಿದ ಸಾಲವನ್ನು ತೀರಿಸಲು ವೇತನ ರಹಿತವಾಗಿ ಕೆಲಸ ಮಾಡುತ್ತಿರುತ್ತಾರೆ, ಅಂಥವರನ್ನು ಗುರುತಿಸಿ ವರದಿ ಮಾಡಿಕೊಂಡು ಅವರನ್ನು ರಕ್ಷಣೆ ಮಾಡಬೇಕು, ಈ ಪದ್ಧತಿಯ ನಿರ್ಮೂಲನೆಗೆ ಸಮನ್ವಯತೆ ಅತ್ಯಗತ್ಯವಾಗಿದೆ ಎಂದು ಜೀತ ಪದ್ಧತಿ ನಿರ್ಮೂಲನೆಯ ಕುರಿತು ಸವಿವರವಾಗಿ ಉಪನ್ಯಾಸ ನೀಡಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಡಿ.ಟಿ ಪ್ರಸನ್ನ ಮಾತನಾಡಿ, ಜೀತ ಪದ್ಧತಿಯನ್ನು ಜಿಲ್ಲೆಯಲ್ಲಿ ಬುಡಸಮೇತ ಕಿತ್ತು ಹಾಕುವ ನಿಟ್ಟಿನಲ್ಲಿ ಎಲ್ಲರೂ ಪ್ರಮಾಣಿಕವಾಗಿ ಪ್ರಯತ್ನಿಸೋಣ ಎಂದರು.
ಬೇಲೂರಿನ ತಹಶೀಲ್ದಾರರಾದ ಮಮತಾ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಸಕಲೇಶಪುರ ತಾಲೂಕಿನ ಹಾನ್‌ಬಾಳಿನ ರಾಮೇಶ್ವರ ಎಸ್ಟೇಟ್‌ನಲ್ಲಿ ಜೀತ ಪದ್ಧತಿಗೆ ಒಳಪಟ್ಟಿದ್ದವರನ್ನು ರಕ್ಷಣೆ ಮಾಡಲು ಹೋದಂತಹ ಸಂದರ್ಭದಲ್ಲಿ ಆದ ಅನುಭವವನ್ನು ವಿವರಿಸಿದರು. ಸಂವಿಧಾನದಡಿ ಪ್ರತಿಯೊಬ್ಬರೂ ಸಮಾನತೆಯಿಂದ ಬದುಕಲು ಅವಕಾಶವಿದೆ, ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ, ಸಮಯ ಮತ್ತು ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡುವ ಮೂಲಕ ನಾಗರಿಕರ ಉಜ್ವಲ ಭವಿಷ್ಯ ರೂಪಿಸಲು ಪ್ರಯತ್ನಿಸೋಣ ಎಂದರು.ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಜೀತ ಪದ್ಧತಿ ನಿರ್ಮೂಲನೆಯ ಕುರಿತ ಪ್ರತಿಜ್ಞಾವಿಧಿಯನ್ನು ಬೋಧಿಸಿದರು ಹಾಗೂ ಜಿಲ್ಲೆಯಲ್ಲಿ ಜೀತ ಪದ್ಧತಿ ಗುರುತಿಸುವಿಕೆ, ರಕ್ಷಣೆ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯದಲ್ಲಿ ಗಮನಾರ್ಹ, ಗಣನೀಯ ಸೇವೆ ಸಲ್ಲಿಸಿರುವ ಇಬ್ಬರು ಅಧಿಕಾರಿಗಳಾದ ಬೇಲೂರಿನ ತಹಸೀಲ್ದಾರರಾದ ಮಮತಾ ಹಾಗೂ ಹಾಸನದ ಉಪ ವಿಭಾಗಾಧಿಕಾರಿ ಮಾರುತಿ ಜೆ.ಬಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ, ಯೋಜನಾ ನಿರ್ದೇಶಕರಾದ ಚಂದ್ರಮೌಳಿ, ಸಕಲೇಶಪುರದ ಉಪ ವಿಭಾಗಾಧಿಕಾರಿ ಶೃತಿ ಹಾಗೂ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.