ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ರ್‍ಯಾಂಕ್‌ಗೆ ಜಿಲ್ಲೆಯ ದಿಟ್ಟ ಹೆಜ್ಜೆ!

| Published : Mar 12 2025, 12:47 AM IST

ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ರ್‍ಯಾಂಕ್‌ಗೆ ಜಿಲ್ಲೆಯ ದಿಟ್ಟ ಹೆಜ್ಜೆ!
Share this Article
  • FB
  • TW
  • Linkdin
  • Email

ಸಾರಾಂಶ

ಈ ವರ್ಷ ಹೇಗಾದರೂ ಜಿಲ್ಲೆಯ ಫಲಿತಾಂಶ ಸುಧಾರಿಸಲೇ ಬೇಕು ಎಂಬ ಉದ್ದೇಶದಂದ ಮಿಷನ್‌ ವಿದ್ಯಾಕಾಶಿ ಎಂದು ಯೋಜನೆ ಮಾಡಿಕೊಂಡು ಹೆಜ್ಜೆ ಇಟ್ಟಿದ್ದು, ಇದೀಗ ಅಂತಿಮ ಹಂತಕ್ಕೆ ತಲುಪಿದೆ

ಶಿವಾನಂದ ಗೊಂಬಿ

ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಮಾಡುವುದಷ್ಟೇ ಅಲ್ಲ. ಜಿಲ್ಲೆಯ ವಿದ್ಯಾರ್ಥಿ ಟಾಪ್‌ ಒನ್‌ (ಪ್ರಥಮ ರ್‍ಯಾಂಕ್‌) ಅಂಕ ಪಡೆಯುವಂತೆ ಮಾಡುವ ಸದುದ್ದೇಶದಿಂದ ಜಿಲ್ಲಾಡಳಿತ ಟೊಂಕ ಕಟ್ಟಿ ನಿಂತಿದೆ. ಇದಕ್ಕಾಗಿಯೇ ಜಿಲ್ಲಾಧಿಕಾರಿ ದಿವ್ಯಪ್ರಭು ಕಾಲಿಗೆ ಚಕ್ರ ಕಟ್ಟಿಕೊಂಡು ಶಾಲೆ ಶಾಲೆ ಸುತ್ತುತ್ತಿದ್ದಾರೆ.

ಧಾರವಾಡ ಜಿಲ್ಲೆಗೆ ವಿದ್ಯಾಕಾಶಿ ಎಂಬ ಹೆಸರಿದೆ. ಆದರೆ, ಹೆಸರಿಗೆ ತಕ್ಕಂತೆ ಮಾತ್ರ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಬರುತ್ತಲೇ ಇಲ್ಲ. 20-22ರ ಆಸುಪಾಸಿನಲ್ಲೇ ಜಿಲ್ಲೆ ಸ್ಥಾನ ಪಡೆಯುತ್ತಿದೆ. ವಿದ್ಯಾಕಾಶಿ ಎಂಬ ಹೆಸರಿಗೆ ಧಕ್ಕೆ ಬರುವಂತೆ ಫಲಿತಾಂಶ ಬರುತ್ತಿದೆ ಎಂಬ ಕೊರಗು ಶಿಕ್ಷಣ ಪ್ರೇಮಿಗಳದ್ದಾಗಿತ್ತು. ಆದರೆ, ಈ ವರ್ಷ ಹೇಗಾದರೂ ಜಿಲ್ಲೆಯ ಫಲಿತಾಂಶ ಸುಧಾರಿಸಲೇ ಬೇಕು ಎಂಬ ಉದ್ದೇಶದಂದ ಮಿಷನ್‌ ವಿದ್ಯಾಕಾಶಿ ಎಂದು ಯೋಜನೆ ಮಾಡಿಕೊಂಡು ಹೆಜ್ಜೆ ಇಟ್ಟಿದ್ದು, ಇದೀಗ ಅಂತಿಮ ಹಂತಕ್ಕೆ ತಲುಪಿದೆ.

ಜಿಲ್ಲಾಧಿಕಾರಿ ದಿವ್ಯಪ್ರಭು ಅವರೇ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಕಾಲಿಗೆ ಚಕ್ರಕಟ್ಟಿಕೊಂಡು ಜಿಲ್ಲೆಯ ಎಲ್ಲ ತಾಲೂಕುಗಳ ಶಾಲೆಗಳಿಗೆ ತೆರಳಿ ಮಕ್ಕಳನ್ನು ಹುರಿದುಂಬಿಸುತ್ತಿದ್ದಾರೆ. ಜತೆಗೆ ಶಿಕ್ಷಕರಲ್ಲಿ ಹೊಸ ಹುಮ್ಮಸ್ಸು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ, ರೂಢಿ ಪರೀಕ್ಷೆ, ಪಾಸಿಂಗ್‌ ಪ್ಯಾಕೇಜ್‌, ನಿತ್ಯ ಪರೀಕ್ಷೆ ಕಾರ್ಯಾಗಾರ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದೆ. ಜಿಲ್ಲಾಧಿಕಾರಿಗಳ, ಶಿಕ್ಷಣ ಇಲಾಖೆ ಕಾರ್ಯಕ್ಕೆ ಜಿಲ್ಲಾ ಪಂಚಾಯಿತಿ ಸೇರಿದಂತೆ ಎಲ್ಲ ಇಲಾಖೆಗಳು, ಜತೆಗೆ ಖಾಸಗಿ ಸಂಘ ಸಂಸ್ಥೆಗಳು ಸಹ ಸಾಥ್‌ ನೀಡುತ್ತಿವೆ. ಮಕ್ಕಳಲ್ಲಿ ಕಾಡುವ ಪರೀಕ್ಷೆಯೆಂಬ ಭಯ ಹೋಗಲಾಡಿಸಲು ಹಲವು ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ. ಇದು ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗುವಂತೆ ಮಾಡಿ ಜಿಲ್ಲೆಯ ಫಲಿತಾಂಶ ಹೆಚ್ಚಿಸಲು ಕೈಕೊಂಡಂತಹ ಕ್ರಮವಾಗಿದೆ.

ರ್‍ಯಾಂಕ್‌ಗಾಗಿ ನಿತ್ಯ ನಿರಂತರ

ಇತ್ತ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯ ಸ್ಥಾನವನ್ನು ಟಾಪ್‌ 10ರೊಳಗೆ ತೆಗೆದುಕೊಂಡು ಬರುವ ಗುರಿ ಒಂದೆಡೆಯಾದರೆ, ಇನ್ನೊಂದೆಡೆ ಜಿಲ್ಲೆಯ ವಿದ್ಯಾರ್ಥಿಯೊಬ್ಬರನ್ನಾದರೂ ಟಾಪ್‌ ಒನ್‌ (ಪ್ರಥಮ ರ್‍ಯಾಂಕ್‌) ಪಡೆಯುವಂತೆ ಮಾಡಲು ಮತ್ತೊಂದು ಗುರಿ ಇಟ್ಟುಕೊಂಡು ನುಗ್ಗುತ್ತಿದೆ.

ಇದಕ್ಕಾಗಿ ಪ್ರತಿ ತಾಲೂಕಿನಲ್ಲಿ 20 ವಿದ್ಯಾರ್ಥಿಗಳಂತೆ ಜಿಲ್ಲೆಯಲ್ಲಿ 140 ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಈ 140 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲೂ 100ಕ್ಕೆ ನೂರರಷ್ಟು ಅಂಕ ಪಡೆಯುವ ಸಾಮರ್ಥ್ಯ ಹೊಂದಿದ ವಿದ್ಯಾರ್ಥಿಗಳು. ಇವರಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ, ಈ ವಿದ್ಯಾರ್ಥಿಗಳಲ್ಲಿ ಯಾರಾದರೂ ಟಾಪ್‌ ಒನ್‌ ಬರಬಹುದು. ಅಥವಾ ಟಾಪ್‌ ಟೆನ್‌ನಲ್ಲಿ ಯಾರಾದರೂ ಫಲಿತಾಂಶ ಪಡೆದು ಜಿಲ್ಲೆಯ ಹೆಮ್ಮೆಯ ವಿದ್ಯಾರ್ಥಿಗಳಾಗಬಹುದು ಎಂಬ ಉದ್ದೇಶ ಇಲಾಖೆಯದ್ದು. ಅದಕ್ಕಾಗಿ ಒಂದೇ ಒಂದು ಅಂಕ ತಪ್ಪದೇ ಉತ್ತರಗಳನ್ನು ಹೇಗೆ ಬರೆಯಬೇಕು. ಯಾವ್ಯಾವ ವಿಷಯಗಳಲ್ಲಿ ಯಾವ ರೀತಿ ಉತ್ತರ ಬರೆಯಬೇಕು. ಕಳೆದ ಪರೀಕ್ಷೆಗಳಲ್ಲಿ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳು ಯಾವ ರೀತಿ ಉತ್ತರ ಬರೆದಿದ್ದರು ಎಂಬ ಬಗ್ಗೆಯೆಲ್ಲ ಮಾಹಿತಿಯನ್ನು ಕಾರ್ಯಾಗಾರಗಳ ಮೂಲ ನೀಡಲಾಗುತ್ತಿದೆ.

ಹೀಗೆ ಜಿಲ್ಲೆಯ ಫಲಿತಾಂಶವನ್ನು ಹೆಚ್ಚಿಸಿ ಟಾಪ್‌ ಟೆನ್‌ನಲ್ಲಿ ಸ್ಥಾನ ಪಡೆಯುವುದು. ಜತೆಗೆ ಟಾಪರ್ಸ್‌ಗೆ ಇನ್ನಷ್ಟು ಬೂಸ್ಟ್‌ ಮಾಡಿ ಜಿಲ್ಲೆ ವಿದ್ಯಾರ್ಥಿಗಳು ರ್‍ಯಾಂಕ್‌ ಪಡೆಯುವಂತೆ ಮಾಡಲು ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಟೊಂಕ ಕಟ್ಟಿ ನಿಂತಿರುವುದಂತೂ ಸತ್ಯ. ಇದರಲ್ಲಿ ಯಶಸ್ಸಾಗಲಿ ಎಂಬುದು ಶಿಕ್ಷಣ ಪ್ರೇಮಿಗಳ ಆಶಯ.ಫೇಲ್‌ ಆಗುವಂತಹ ವಿದ್ಯಾರ್ಥಿಗಳು

ಜಿಲ್ಲೆಯಲ್ಲಿ 28666 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುಳಿತುಕೊಳ್ಳಲಿದ್ದಾರೆ. ಇದರಲ್ಲಿ 7721 ವಿದ್ಯಾರ್ಥಿಗಳು ಫೇಲ್‌ ಆಗಬಹುದು ಎಂದು ಅಂದಾಜಿಸಲಾಗಿತ್ತು. ಇದರಲ್ಲಿ 2857 ವಿದ್ಯಾರ್ಥಿಗಳು ಒಂದು ಅಥವಾ ಎರಡು ವಿಷಯಗಳಲ್ಲಿ ಫೇಲ್‌ ಆಗುವ ಸಾಧ್ಯತೆ ಇದೆ ಎಂದು ಲೆಕ್ಕ ಹಾಕಲಾಗಿತ್ತು. ಈ ವಿದ್ಯಾರ್ಥಿಗಳಿಗೆ ಯಾವ ವಿಷಯಗಳಲ್ಲಿ ಸಮಸ್ಯೆಯಾಗುತ್ತಿದೆ. ಇವರನ್ನು ಕನಿಷ್ಠ ಪಕ್ಷ ಪಾಸ್‌ ಆಗುವಂತೆ ಮಾಡಲು ಏನು ಮಾಡಬೇಕೆಂದು ನಿರ್ಧರಿಸಿ, ನಾಲ್ಕೈದು ಬಾರಿ ಪರೀಕ್ಷೆ ತೆಗೆದುಕೊಂಡು ಅಂತೀಮ ಪರೀಕ್ಷೆಗೆ ಸಿದ್ಧಪಡಿಸಲಾಗಿದೆ. ಶಿಕ್ಷಕರು ನಿರಂತರ ಶ್ರಮಿಸುತ್ತಿರುವುದರಿಂದ ವಿದ್ಯಾರ್ಥಿಗಳಲ್ಲೂ ಹುಮ್ಮಸ್ಸು ಮೂಡಿದ್ದು, ಅವರೂ ಇದೀಗ ಪರೀಕ್ಷೆಯತ್ತ ಗಮನ ಹರಿಸಿ ಭಯ ಮುಕ್ತರಾಗುತ್ತಿದ್ದಾರೆ ಎಂಬುದು ಶಿಕ್ಷಣ ಇಲಾಖೆ ಅಂಬೋಣ.ರ್‍ಯಾಂಕ್

ಫಲಿತಾಂಶ ಸುಧಾರಣೆಗೆ ಮಿಷನ್‌ ವಿದ್ಯಾಕಾಶಿ ಯೋಜನೆ ಭಾರಿ ಪರಿಣಾಮ ಬೀರುತ್ತಿದೆ. ಈ ಸಲ ಜಿಲ್ಲೆಯ ಫಲಿತಾಂಶವೂ ಉತ್ತಮವಾಗಲಿದೆ. ಜತೆಗೆ ವಿದ್ಯಾರ್ಥಿಗಳಲ್ಲಿ ಕೆಲವರು ಟಾಪ್‌ನಲ್ಲೇ ಉತ್ತೀರ್ಣರಾಗಿ ರ್‍ಯಾಂಕ್ ಪಡೆಯುವ ಸಾಧ್ಯತೆಯೂ ಇದೆ.

ಎಸ್‌.ಎಸ್‌. ಕೆಳದಿಮಠ, ಡಿಡಿಪಿಐ