ಸಾರಾಂಶ
ಸಾಗರ: ಚಲನಚಿತ್ರ ಗೀತೆಗಳಲ್ಲಿ ಹೆಣ್ಣನ್ನು ದಾಸಿಯನ್ನಾಗಿ ಮೂಡಿಸಿದ ಉದಾಹರಣೆಗಳು ಸಾಕಷ್ಟಿವೆ ಎಂದು ಪತ್ರಕರ್ತ ಆರುಂಡಿ ಶ್ರೀನಿವಾಸ ಮೂರ್ತಿ ಹೇಳಿದರು.
ಸಾಗರ: ಚಲನಚಿತ್ರ ಗೀತೆಗಳಲ್ಲಿ ಹೆಣ್ಣನ್ನು ದಾಸಿಯನ್ನಾಗಿ ಮೂಡಿಸಿದ ಉದಾಹರಣೆಗಳು ಸಾಕಷ್ಟಿವೆ ಎಂದು ಪತ್ರಕರ್ತ ಆರುಂಡಿ ಶ್ರೀನಿವಾಸ ಮೂರ್ತಿ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಕನ್ನಡ ವೇದಿಕೆ ಮತ್ತು ಐಕ್ಯುಎಸಿ ಸೋಮವಾರ ಆಯೋಜಿಸಿದ್ದ ಭಾವ-ವಿಭಾವ-ಅನುಭಾವ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಕನ್ನಡ ಕಾವ್ಯ ಮತ್ತು ಚಲನಚಿತ್ರ ಗೀತೆಗಳ ಅನುಸಂಧಾನ ಕುರಿತು ಮಾತನಾಡಿದರು.ಈಗಿನ ಚಲನಚಿತ್ರಗಳಲ್ಲಿ ಅರ್ಥವಂತಿಕೆ ಇರುವ, ನೆನಪಿಟ್ಟುಕೊಳ್ಳಬಹುದಾದ ಹಾಡುಗಳು ಮೂಡಿಬರುತ್ತಿಲ್ಲ. ಪ್ರೀತಿ ಪ್ರೇಮದ ಗೀತೆಗಳೂ ಕೂಡಾ ಹಿಂದಿನಂತೆ ಧ್ವನಿಸಿ ಕಾಡುವುದಿಲ್ಲ ಎಂದರು.ಹಳೆಯ ಚಿತ್ರಗೀತೆಗಳನ್ನು ನಾವು ಗಮನಿಸಿದರೆ, ಯಾವ ಕಾವ್ಯಕ್ಕೂ ಕಡಿಮೆ ಇಲ್ಲದಂತೆ ಪ್ರೀತಿಗೆ ಅಂಟಿದ ಗೀತೆಗಳು, ದೇಶಭಕ್ತಿಗೀತೆಗಳು, ಪರಿಸರ-ಪ್ರಕೃತಿಗೆ ಸಂಬಂಧಿಸಿದ ಗೀತೆಗಳು ಮೂಡಿಬಂದವು. ಆದರೆ, ಹೆಣ್ಣನ್ನು ಚಿತ್ರಿಸುವಾಗ ದಾಸಿಯನ್ನಾಗಿ ಮೂಡಿಸಿರುವ ಸಾಕಷ್ಟು ಉದಾಹರಣೆಗಳಿವೆ. ಸೌಂದರ್ಯವನ್ನು ವರ್ಣಿಸುವಾಗ ಬಳಸಿರುವ ಉಪಮಾನ-ಉಪಮೇಯಗಳೂ ಕೂಡಾ ಒಳ್ಳೆಯ ಭಾಷೆಯಿಂದ ಕೂಡಿಲ್ಲ. ಹಾಗೆಂದ ಮಾತ್ರಕ್ಕೆ ಲೋಪಗಳನ್ನೇ ಪಟ್ಟಿ ಮಾಡಬೇಕಾಗಿಲ್ಲ. ಚಲನಚಿತ್ರ ಗೀತೆಗಳಲ್ಲಿ ಒಳ್ಳೆಯ ಮತ್ತು ಗಟ್ಟಿ ಪ್ರಯತ್ನಗಳೂ ಕೂಡಾ ನಡೆದಿವೆ. ಹುಣಸೂರು ಕೃಷ್ಣಮೂರ್ತಿ, ಚಿ.ಉದಯಶಂಕರ್ ಇಂಥವರನ್ನು ನಾವು ನೆನಪಿಸಿಕೊಳ್ಳಲೇಬೇಕು ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ದೊಡ್ಡರಂಗೇಗೌಡ, ಹಂಸಲೇಖರಂಥವರು ಕನ್ನಡ ಚಲನಚಿತ್ರ ಗೀತೆಗಳಿಗೆ ಹೊಸ ಭಾಷ್ಯವನ್ನೇ ಬರೆದರು. ಇಂದಿಗೂ ನಾವು ಚಲನಚಿತ್ರ ಗೀತೆಗಳನ್ನು ಕಾವ್ಯದ ಒಂದು ನೆಲೆಯಲ್ಲಿ ನೋಡುವ, ಅನುಸಂಧಾನ ಮಾಡುವ ಚಿಂತನಾ ಕ್ರಮವನ್ನು ಕಂಡುಬರುತ್ತಿಲ್ಲ. ಹಾಗಾಗಿ ಚಲನಚಿತ್ರ ಗೀತೆಗಳ ಸಾಹಿತ್ಯದ ಘಟ್ಟಿತನ ಪ್ರದರ್ಶನಗೊಳ್ಳದೇ ಮರೆಯಾಗುತ್ತಿದೆ. ಇಂತಹ ಚರ್ಚೆ ಮತ್ತು ಸಂವಾದದ ಮೂಲಕ ಅವುಗಳನ್ನು ಸ್ಥಾಯಿಗೊಳಿಸುವ ಕೆಲಸ ಆಗಬೇಕಾಗಿದೆ ಎಂದರು.ಕವಿ, ಪತ್ರಕರ್ತ ಎನ್.ರವಿಕುಮಾರ್ ಕನ್ನಡ ಕಾವ್ಯ ಮತ್ತು ವರ್ತಮಾನ ಕುರಿತು ಮಾತನಾಡಿ, ವರ್ತಮಾನದ ತಲ್ಲಣಗಳಿಗೆ ಮುಖಾಮುಖಿಯಾದಾಗ ಮಾತ್ರ ಕಾವ್ಯ ಸಾರ್ಥಕತೆ ಪಡೆಯುತ್ತದೆ. ಕವಿ, ಸಾಹಿತಿ ಎಲ್ಲ ಕಾಲಕ್ಕೂ ಪ್ರಭುತ್ವದ್ಧ ಜನ ವಿರೋಧಿ ಧೋರಣೆಯನ್ನು ಖಂಡಿಸುವ, ಅದರ ವಿರುದ್ಧ ಸಾಹಿತ್ಯ ಮಾಧ್ಯಮದ ಮೂಲಕ ಅಭಿವ್ಯಕ್ತಿಸಬೇಕು, ಸಾಹಿತ್ಯ ಎಲ್ಲ ಅನುಭವ ಲೋಕಗಳನ್ನು ಒಳಗೊಳ್ಳಬೇಕು ಎಂದರು.ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎ.ಬಿ.ಉಮೇಶ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಸಣ್ಣಹನುಮಪ್ಪ.ಜಿ ವಹಿಸಿದ್ದರು.ಕನ್ನಡ ವೇದಿಕೆಯ ಸಂಚಾಲಕ ಪ್ರೊ.ಸುರೇಶ್.ಜೆ.ಎಚ್, ಡಾ.ಮಮತಾ ವಿ.ಹೆಗಡೆ, ಕೃಷ್ಣಮೂರ್ತಿ ಮನೆಘಟ್ಟ, ಚಂದ್ರಕಲಾ.ವಿ, ನಂದಿನಿ.ಎನ್ ಇತರರು ಹಾಜರಿದ್ದರು.