ಹಾಸನ : ಅಗ್ನಿಶಾಮಕ ದಳದ ವತಿಯಿಂದ ಅಗ್ನಿ ಅವಘಡಗಳ ಸುರಕ್ಷತೆ ಬಗ್ಗೆ ಪ್ರಾತ್ಯಕ್ಷಿಕೆ

| Published : Dec 23 2024, 01:03 AM IST / Updated: Dec 23 2024, 01:14 PM IST

ಹಾಸನ : ಅಗ್ನಿಶಾಮಕ ದಳದ ವತಿಯಿಂದ ಅಗ್ನಿ ಅವಘಡಗಳ ಸುರಕ್ಷತೆ ಬಗ್ಗೆ ಪ್ರಾತ್ಯಕ್ಷಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಮ್ಸ್ ಭದ್ರತಾ ಸಿಬ್ಬಂದಿ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಅಗ್ನಿ ಅವಘಡಗಳಾದಾಗ ಅನುಸರಿಸಬೇಕಾಗಿರುವ ಸುರಕ್ಷತಾ ಕ್ರಮಗಳು ಹಾಗೂ ಅಗ್ನಿಶಾಮಕ ದಳದ ಕರ್ತವ್ಯಗಳ ಬಗ್ಗೆ ವಿವರಿಸಿದರು. 

 ಹಾಸನ : ನಗರದ ಹಾಸನ ವೈದ್ಯಕೀಯ ಮಹಾ ವಿದ್ಯಾಲಯದ ಆವರಣದಲ್ಲಿ ಅಂತಾರಾಷ್ಟ್ರೀಯ ವಿಕೋಪ ತಗ್ಗಿಸುವ ದಿನದ ಅಂಗವಾಗಿ ಜಿಲ್ಲಾ ಪಂಚಾಯತ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಕಚೇರಿ ಹಾಗೂ ಅಗ್ನಿಶಾಮಕ ದಳದ ವತಿಯಿಂದ ಅಗ್ನಿ ಅವಘಡಗಳ ಸುರಕ್ಷತೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.

ಈ ವೇಳೆ ಹಾಸನದ ಅಗ್ನಿಶಾಮಕ ಠಾಣಾಧಿಕಾರಿ ಆರ್‌.ಕೆ. ಗಿಡ್ಡೆಗೌಡ ಮಾತನಾಡಿ, ಹಿಮ್ಸ್ ಭದ್ರತಾ ಸಿಬ್ಬಂದಿ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಅಗ್ನಿ ಅವಘಡಗಳಾದಾಗ ಅನುಸರಿಸಬೇಕಾಗಿರುವ ಸುರಕ್ಷತಾ ಕ್ರಮಗಳು ಹಾಗೂ ಅಗ್ನಿಶಾಮಕ ದಳದ ಕರ್ತವ್ಯಗಳ ಬಗ್ಗೆ ವಿವರಿಸಿದರು. ಯಾವುದೇ ಸಂದರ್ಭದಲ್ಲಿ ಅಗ್ನಿ ಅವಘಡಗಳಾದಾಗ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಜೊತೆಗೆ ಇತರರನ್ನು ರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ. ಈ ಸಂದರ್ಭದಲ್ಲಿ ತಮಗೂ ಯಾವುದೇ ರೀತಿ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸುವುದು ಬಹಳ ಅಗತ್ಯ. ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಾಗ ಮೊದಲಿಗೆ ಅಲ್ಲಿರುವ ಬೆಂಕಿ ನಂದಿಸುವ ಸಿಲಿಂಡರ್‌ಗಳನ್ನು ಬಳಸಿಕೊಂಡು ಬೆಂಕಿ ಹಾರಿಸುವ ಕೆಲಸ ಮಾಡಬೇಕು, ಬೆಂಕಿ ನಂದಿಸುವ ಸಿಲಿಂಡರ್‌ಗಳಲ್ಲಿ ವಿವಿಧ ಮಾದರಿಯ ಸಿಲಿಂಡರ್‌ಗಳು ಇವೆ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವುದು ಅಗತ್ಯ ಎಂದರು.

ಸಣ್ಣ ಮಟ್ಟದ ಅಗ್ನಿ ಅವಘಡಗಳಾದಾಗ ಸಿಲಿಂಡರ್ ಬಳಕೆ ಮಾಡಬೇಕು ಆದರೆ ಅರಣ್ಯ ಪ್ರದೇಶ ಸೇರಿದಂತೆ ಇನ್ನಿತರ ದೊಡ್ಡ ಪ್ರಮಾಣದಲ್ಲಿ ಅಗ್ನಿ ಅವಘಡಗಳಾದಾಗ ತಕ್ಷಣ ಅಗ್ನಿಶಾಮಕ ಠಾಣೆಗೆ ಕರೆ ಮಾಡಬೇಕು. ತಾವಾಗಿಯೇ ಮುಂದೆ ಹೋಗಿ ಬೆಂಕಿ ನಂದಿಸಲು ಮುಂದಾಗಬಾರದು. ತುರ್ತು ಸಂಖ್ಯೆಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿರಬೇಕು ಹಾಗಿದ್ದಾಗ ಮಾತ್ರ ಅವಘಡಗಳ ಸಂದರ್ಭದಲ್ಲಿ ಅವುಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ನೀರಿನಲ್ಲಿ ಯಾರಾದರೂ ಮುಳುಗಿದಾಗ ಅಥವಾ ಇನ್ನಿತರ ಅವಗಡಗಳಾದಾಗಲೂ ಅಗ್ನಿಶಾಮಕ ಠಾಣೆಗೆ ಕರೆ ಮಾಡಬೇಕು. ತಾವಾಗಿ ಇತರರನ್ನು ರಕ್ಷಣೆ ಮಾಡುವಾಗ ಮುಂಜಾಗ್ರತ ಕ್ರಮಗಳ ಅಗತ್ಯ ವಿದೆ. ಇನ್ನೊಬ್ಬರನ್ನು ರಕ್ಷಣೆ ಮಾಡುವ ಭರದಲ್ಲಿ ತಮ್ಮ ಜೀವಕ್ಕೆ ಆಪತ್ತು ಉಂಟಾಗಬಹುದು. ಆದುದರಿಂದ ಬಹಳ ಎಚ್ಚರಿಕೆಯಿಂದ ಸಹಾಯ ಮಾಡಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಹಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದ ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ ಹೇಗೆ ಸುರಕ್ಷತೆಯಿಂದ ಇರಬೇಕು ಎನ್ನುವುದರ ಬಗ್ಗೆ ನೋಡುಗರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಎಚ್‌ಎಸ್. ನಾಗಪ್ಪ, ಕೀಲು ಮತ್ತು ಮೂಳೆ ತಜ್ಞ ಡಾ.ಕ ಕಿರಣ್, ಡಾ. ಮಧು, ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಮುರುಳೀಧರ ಸೇರಿದಂತೆ ಇತರರು ಉಪಸ್ಥಿತರಿದ್ದರು.