ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಾಟಕ ನೋಡುವ ಅಭಿರುಚಿ ಇರಬೇಕು. ಆದರೆ ಪ್ರಸ್ತುತದಲ್ಲಿ ಎಷ್ಟೇ ಟಿ,ವಿ ಚಾನೆಲ್‌ಗಳು, ಧಾರವಾಹಿಗಳು ಇದ್ದರೂ ಸಹ ಜನರಿಗೆ ನಾಟಕಗಳಿಂದ ಸಿಗುವ ಮನರಂಜನೆ, ಧಾರ್ಮಿಕ ಭಾವನೆ, ಸಾಂಸ್ಕೃತಿಕ, ಸಾಮಾಜಿಕ, ಚಿಂತನೆ ಮುಂತಾದ ಅನೇಕ ವಿಷಯಗಳ ಬಗ್ಗೆ ತಿಳಿಯಲು ಸಹಾಯಕಾರಿಯಾಗಿದೆ ಎಂದು ಹಾಸನ ಜವೇನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ ತಿಳಿಸಿದರು.ನಗರದ ಹೊಸಲೈನ್ ರಸ್ತೆ ಬಳಿ ಇರುವ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದ ದೇವಸ್ಥಾನದ ಆವರಣದಲ್ಲಿ ಡಿಸೆಂಬರ್ ೨೧ರಿಂದ ಡಿಸೆಂಬರ್ ೨೩ರ ವರೆಗೂ ಮೂರು ದಿನಗಳ ಕಾಲ ಶಿವಸಂಚಾರ ನಾಟಕಗಳ ಪ್ರದರ್ಶನದ ಮೊದಲ ದಿನದ ನಾಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನಿಂದ ನಾಟಕೋತ್ಸವ ಪ್ರದರ್ಶನವನ್ನು ತರಳಬಾಳು ಮಠದ ಸಾಣೇಹಳ್ಳಿ ಮಠದ ಶ್ರೀ ಶಿವಕುಮಾರ ಕಲಾ ತಂಡದವರು ಅತ್ಯುತ್ತಮ ಪ್ರದರ್ಶನವನ್ನು ನುರಿತ ಕಲಾವಿದರು ನಡೆಸಿಕೊಂಡು ಬರುತ್ತಿದ್ದಾರೆ. ಇಂದು ಬಂಗಾರದ ಮನುಷ್ಯ ಎಂಬ ನಾಟಕವನ್ನು ಮಾಡುತ್ತಿದ್ದಾರೆ. ಇನ್ನು ಎರಡು ದಿನ ನಡೆಯುವ ನಾಟಕ ಪ್ರದರ್ಶನದಲ್ಲಿ ಹೆಚ್ಚೀನ ಜನರು ಬಂದು ನಾಟಕ ನೋಡಿ ಎಂದು ಕೋರಿದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಸೀಗೆಗುಡ್ಡದ ಮಲ್ಲೇಶ್ವರ ದೇವಾಲಯ ಮಠದ ಮಠಾಧೀಶರಾದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತರಳಬಾಳು ಸಾಣೇಹಳ್ಳಿ ಮಠದ ಶಿವಸಂಚಾರ ನಾಟಕ ತಂಡದವರು ನಾಟಕೋತ್ಸವ ಮಾಡಿದರೆ ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಬಂದು ನಾಟಕ ನೋಡಿ ಸಂತೋಷ ಪಡುತ್ತಾರೆ ಎಂದು ತಿಳಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಹಾಸನದ ಚಲನಚಿತ್ರ ನಟರಾದ ಮನು, ಬಸವರಾಜ್ ಮಾತನಾಡಿ, ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾಟಕ ಇರಬಹುದು, ಚಲನಚಿತ್ರ ಇರಬಹುದು, ಕಲೆಯನ್ನು ನೋಡಿ ಆನಂದಿಸಬಹುದು ಎಂದು ತಿಳಿಸಿದರು. ಇಂದು ಮೊಬೈಲ್, ಟಿವಿಗಳ ನೋಡುವುದರ ಜೊತೆಗೆ ಸಿನಿಮಾಗಳು ಹಾಗೂ ನಾಟಕಗಳು ವಿಚಾರ ಹಾಗೂ ನಮ್ಮ ನೈಜ ಚಿತ್ರಣವನ್ನು ಸ್ಥೂಲವಾಗಿ ತಿಳಿಸುತ್ತವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಾಸನ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದ ನೈಜ ಚಿತ್ರಣ ತಿಳಿಸಿತ್ತವೆ. ಹಿಂದಿನ ತಲೆಮಾರಿನಲ್ಲಿ ನಡೆದ ಘಟನೆಗಳು ನಾಟಕದ ಮೂಲಕ ತಿಳಿಯಬಹುದು ಎಂದು ತಿಳಿಸಿದರು. ನಾಟಕವನ್ನು ನೋಡುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ತಿಳಿಸಿದರು. ಶ್ರೀ ತರಳಬಾಳು ಸಾಣೇಹಳ್ಳಿ ಮಠದ ಶಿವಸಂಚಾರ ನಾಟಕ ತಂಡದವರು ನಾಟಕೋತ್ಸವನ್ನು ಚೆನ್ನಾಗಿ ನಡೆಸಿಕೊಡಲಿದ್ದಾರೆ ಎಂದು ಹೇಳಿದರು.
ಮೊದಲ ದಿವಸದಂದು ಬಂಗಾರದ ಮನುಷ್ಯ ನಾಟಕ ಪ್ರದರ್ಶನಗೊಂಡು ವೀಕ್ಷಣೆ ಮಾಡುವವರ ಗಮನಸೆಳೆದು ಯಶಸ್ವಿಯಾಗಿ ಪ್ರದರ್ಶನಗೊಂಡಿತು.ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭದ ಉಪಾಧ್ಯಕ್ಷರಾದ ಎಚ್.ಪಿ. ಹೇಮೇಶ್ ಕುಮಾರ್, ಕಾರ್ಯದರ್ಶಿ ಶೆಟ್ಟಿಹಳ್ಳಿ ಧರ್ಮ, ನಿರ್ದೇಶಕರಾದ ಮದನ್, ಯುವ ಘಟಕದ ಅಧ್ಯಕ್ಷರಾದ ಪ್ರದೀಪ್, ಯುವಸೇನೆ ಕಾರ್ಯದರ್ಶಿ ಅವಿನಾಶ್, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಚನ್ನಬಸಪ್ಪ, ಬಸವ ಕೇಂದ್ರದ ಅಧ್ಯಕ್ಷ ಯು.ಎಸ್. ಬಸವರಾಜು, ವಿಷ್ಣು ವರ್ಧನ್ ಸಂಘದ ಅಧ್ಯಕ್ಷರಾದ ಮಹಂತೇಶ್, ಇತರರು ಪಾಲ್ಗೊಂಡಿದ್ದರು.