ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ರೈತ ಸೇವಾ ಸಹಕಾರ ಸಂಘದಲ್ಲಿ ಅಧಿಕಾರಿಗಳೇ ಅವ್ಯವಹಾರ ನಡೆಸಿ ನಾವು ಅಡಮಾನವಿಟ್ಟಿದ್ದ ಚಿನ್ನಾಭರಣ ಮತ್ತು ಹಣವನ್ನು ದುರ್ಬಳಕೆ ಮಾಡಿಕೊಂಡಿ ದ್ದಾರೆ ನಾವು ಅಡಮಾನವಿಟ್ಟಿದ್ದ ಚಿನ್ನಾಭರಣ ಹಾಗೂ ಠೇವಣಿ ಹಣವನ್ನು ನಮಗೆ ವಾಪಸ್ ಕೊಡಿಸಿ ಎಂದು ಗ್ರಾಹಕರು ನಗರ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ನಗರದ ಸಂಗಮ ರಸ್ತೆಯಲ್ಲಿರುವ ರೈತ ಸೇವಾ ಸಹಕಾರ ಸಂಘದಲ್ಲಿ ನಡೆದಿರುವ ಅವ್ಯವಹಾರದಿಂದ ಠೇವಣಿ ಹಣ ಮತ್ತು ಒತ್ತೆ ಇಟ್ಟಿದ್ದ ಚಿನ್ನಾಭರಣ ಕಳೆದುಕೊಂಡ ಗ್ರಾಹಕರು ಮಂಗಳವಾರ ನಗರ ಠಾಣೆಯ ಮುಂದೆ ಜಮಾಯಿಸಿ ನಮ್ಮ ಹಣ ಮತ್ತು ಚಿನ್ನಾಭರಣವನ್ನು ನಮಗೆ ವಾಪಸ್ ಕೊಡಿಸಿ ಎಂದು ಅವಲತ್ತುಕೊಂಡಿದ್ದಾರೆ. ಈ ಸಂಬಂಧ ಬ್ಯಾಂಕಿನ ಆಡಳಿತ ಮಂಡಳಿ ಈಗಾಗಲೇ ನಗರ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದೆ.ಆಡಳಿತ ಮಂಡಳಿ ದೂರು ನೀಡಿ 6 ತಿಂಗಳು ಕಳೆಯುತ್ತಿದೆ ಆದರೂ ಈ ವರೆಗೆ ನಮ್ಮ ಚಿನ್ನಾಭರಣ ಹಾಗೂ ಠೇವಣಿ ಹಣ ಹಿಂತಿರುಗಿಸಿಲ್ಲ ದುರ್ಬಳಕೆಯಾಗಿರುವ ಚಿನ್ನಾಭರಣ ವನ್ನು ರಿಕವರಿ ಮಾಡಿ ಬ್ಯಾಂಕ್‌ನಲ್ಲಿ ಇಟ್ಟಿಕೊಂಡಿದ್ದಾರೆ. ಆದರೂ ಅವುಗಳನ್ನು ಈವರೆಗೂ ವಿಲೇವಾರಿ ಮಾಡಿಲ್ಲ. ರಿಕವರಿ ಮಾಡಿರುವ ಚಿನ್ನಾಭರಣಗಳು ಮತ್ತೆ ದುರ್ಬಳಕೆಯಾದರೆ ಹೊಣೆ ಯಾರು?.ಪೊಲೀಸರು ಶೀಘ್ರವಾಗಿ ತನಿಖೆ ಪೂರ್ಣಗೊಳಿಸಿ ಬ್ಯಾಂಕಿನಲ್ಲಿ ಇಟ್ಟಿರುವ ಠೇವಣಿ ಹಣ ಮತ್ತು ಒಡವೆಗಳನ್ನು ಕೊಡಿಸಬೇಕು ಎಂದು ಸರ್ಕಲ್ ಇನ್ಸ್ಪೆಕ್ಟರ್ ಮಿಥುನ್ ಶಿಲ್ಪಿ ಬಳಿ ಮನವಿ ಮಾಡಿಕೊಂಡರು. ಬ್ಯಾಂಕಿನಲ್ಲಿ ವಂಚನೆ ಮಾಡಿರುವ ಆರೋಪಿಗಳನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು, ಈಗ ಅವರುಗಳು ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ, ಆದರೆ ನಮ್ಮ ಹಣ ಮತ್ತು ಒಡವೆಗಳು ನಮ್ಮ ಕೈ ಸೇರಿಲ್ಲ, ನಮ್ಮ ಒಡವೆ ಮತ್ತು ಹಣವನ್ನು ಈಗಲೇ ವಾಪಸ್ ಕೊಡಿಸಿ ಎಂದು ಪಟ್ಟುಹಿಡಿದರು.
ಗ್ರಾಹಕರಾದ ನಾಗೇಶ್ ಮತ್ತು ಉಮೇಶ್ ಮಾತನಾಡಿ ಒಡವೆಗಳು ಬ್ಯಾಂಕಿನಲ್ಲಿ ಇವೆ, ಅವುಗಳನ್ನು ಪೊಲೀಸರು ಸುಪರ್ದಿಗೆ ಪಡೆದು ಟೆಜರಿಯಲ್ಲಿ ಇಟ್ಟು ಭದ್ರಪಡಿಸಬೇಕು. ಬ್ಯಾಂಕಿನ ಆಸ್ತಿಯನ್ನು ಮುಟ್ಟುಗೋಲು ಮಾಡಿ ಕೊಳ್ಳಬೇಕು. ಮೈಸೂರು ರಸ್ತೆಯಲ್ಲಿ ಅರ್ಧ ಎಕರೆ ಜಾಗವಿದ್ದು ಅದನ್ನು ಸ್ವಾದೀನ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.800 ಕ್ಕೂ ಹೆಚ್ಚು ರೈತರು ಇಲ್ಲಿ ಚಿನ್ನಾಭರಣಗಳನ್ನು ಹಾಗೂ ಠೇವಣಿ ಹಣವನ್ನು ಇಟ್ಟಿದ್ದಾರೆ. ಆದರೆ ನಮಗೆ ಮೋಸ ಆಗಿದೆ. ಬ್ಯಾಂಕಿನಲ್ಲಿ ವಂಚನೆ ಆಗಲು ಆಡಳಿತ ಮಂಡಳಿಯವರು ಕಾರಣರಾಗಿದ್ದು ಅವರ ವಿರುದ್ಧವು ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಶೀಘ್ರವಾಗಿ ಗ್ರಾಹಕರ ಒಡವೆ ಮತ್ತು ಠೇವಣಿ ಹಣವನ್ನು ಹಿಂತಿರುಗಿಸಬೇಕೆಂದು ಒತ್ತಾಯಿಸಿದರು.