''''ಕೋಟೆ'''' ಗೂ ವಕ್ರದೃಷ್ಟಿ; ಗ್ರಾಮ, ಮನೆಗಳೂ ''''ವಕ್ಫ್‌ ಪಾಲು''''

| Published : Nov 04 2024, 12:19 AM IST

''''ಕೋಟೆ'''' ಗೂ ವಕ್ರದೃಷ್ಟಿ; ಗ್ರಾಮ, ಮನೆಗಳೂ ''''ವಕ್ಫ್‌ ಪಾಲು''''
Share this Article
  • FB
  • TW
  • Linkdin
  • Email

ಸಾರಾಂಶ

"Fort " is also crooked; Village, houses also "Waqf share "

- ಬೀದರ್‌ ಕೋಟೆ, ಅಷ್ಟೂರ್‌ ಗುಂಬಜ್‌, ಸ್ಮಾರಕಗಳಿಗೂ ವಕ್ಫ್‌ ಆಸ್ತಿ । 2013-14ರಿಂದ ಈಚೆಗೆ ಆಸ್ತಿಯಲ್ಲಿ ವಕ್ಫ್‌ ಮಂಡಳಿ ಹೆಸರು ಸೇರ್ಪಡೆ

- ಧರ್ಮಾಪುರ ಗ್ರಾಮವೇ ರಾಜ್ಯ ವಕ್ಫ್ ಮಂಡಳಿಗೆ ಸೇರ್ಪಡೆ

ಅಪ್ಪಾರಾವ್‌ ಸೌದಿ

ಕನ್ನಡಪ್ರಭ ವಾರ್ತೆ, ಬೀದರ್‌

ಜಿಲ್ಲೆಯ ರೈತರ ನೂರಾರು ಎಕರೆ ಭೂಮಿಯನ್ನು ವಕ್ಫ್‌ ಮಂಡಳಿ ತನ್ನ ಆಸ್ತಿ ಎಂದು ಪಹಣಿಯಲ್ಲಿ ಇಂಡೀಕರಿಸಿಕೊಳ್ಳುವ ಪ್ರಕರಣದ ಬೆನ್ನಲ್ಲಿಯೇ ಇಡೀ ಗ್ರಾಮವನ್ನೇ ತನ್ನ ಆಸ್ತಿ ಎಂದು ನಮೂದಿಸಿದ್ದಷ್ಟೇ ಅಲ್ಲ ಐತಿಹಾಸಿಕ ಬೀದರ್‌ ಕೋಟೆಯ ಒಂದಷ್ಟು ಭಾಗ, ಅಷ್ಟೂರ ಗುಂಬಜಗಳ ಆಸ್ತಿಯನ್ನೂ ತನ್ನದೆಂದು ಮೊಹರು ಒತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ರಾಜ್ಯಾದ್ಯಂತ ಎದ್ದಿರುವ ವಕ್ಫ್‌ ರಾದ್ಧಾಂತ ಗಡಿ ಜಿಲ್ಲೆ ಬೀದರ್‌ನಲ್ಲಿ ಬಗೆದಷ್ಟು ಬಯಲಾಗ್ತಿದೆ. ರೈತರ ಜಮೀನಾಯ್ತು, ಇದೀಗ ಗ್ರಾಮಸ್ಥರ ಮನೆಗಳ ಮೇಲೆಯೂ ವಕ್ಫ್‌ ವಕ್ರದೃಷ್ಟಿ ಬೀರಿದ್ದು, ತಾಲೂಕಿನ ಧರ್ಮಾಪುರ ಇಡೀ ಗ್ರಾಮಕ್ಕೆ ಗ್ರಾಮವೇ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸುಪರ್ದಿಗೆ ಹೋದಂತೆ ಇತ್ತೀಚೆಗೆ ತೆಗೆಯಲಾದ ಪಹಣಿಗಳಿಂದ ಗೊತ್ತಾಗಿ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಧರ್ಮಾಪುರ ಗ್ರಾಮದ ಸರ್ಕಾರಿ ಜಮೀನಿನ ಸರ್ವೆ ನಂಬರ್‌ 87ರ 26 ಎಕರೆ ಜಾಗಕ್ಕೆ ವಕ್ಫ್‌ ಹೆಸರು ಸೇರ್ಪಡೆಯಾಗಿದ್ದು, ಗ್ರಾಮದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೇಳಲು ಕಾರಣವಾಗಿದೆ.

ಧರ್ಮಾಪೂರ ಗ್ರಾಮದಲ್ಲಿ ನೂರಾರು ಮನೆಗಳಿದ್ದು, 2001ರಲ್ಲಿ ವಕ್ಫ್‌ ಉಲ್ಲೇಖವಿಲ್ಲದ ಪಹಣಿ ಇತ್ತು. ಆದರೆ 2013ರಲ್ಲಿ ವಕ್ಫ್‌ ಹೆಸರು ಉಲ್ಲೇಖವಾಗಿದೆ. ಮನೆ ಕಟ್ಟಲಾಗಿರುತ್ತದೆ ಎಂದು 2001, 2013ರ ಪಹಣಿಗಳಲ್ಲಿ ಉಲ್ಲೇಖವಾಗಿದ್ದರೆ 2024ರ ಪಹಣಿಯಲ್ಲಿ ಮನೆಗಳ ಮಾಹಿತಿಯನ್ನೂ ನೀಡದೇ ವಕ್ಫ್‌ ಆಸ್ತಿ ಎಂದು ಉಲ್ಲೇಖಿಸಿ ಪರಭಾರೆ ನಿಷೇಧಿಸಿದೆ ಎಂಬ ಪದಬಳಕೆ ಮಾಡಿದ್ದು ಗ್ರಾಮಸ್ಥರನ್ನು ದಂಗಾಗಿಸಿದೆ.

ಮನೆ, ಸರ್ಕಾರಿ ಶಾಲೆ, ದೇವಸ್ಥಾನ, ಅಂಗನವಾಡಿಗಳ ಪಹಣಿಯಲ್ಲೂ ವಕ್ಫ ಬೋರ್ಡ್‌ ಹೆಸರು ನಮೂದಾಗಿದ್ದರಿಂದ ಬೀದರ್‌ ಜಿಲ್ಲೆಯ ಧರ್ಮಾಪೂರ ಗ್ರಾಮದ 200 ಕುಟುಂಬಗಳ 2ಸಾವಿರಕ್ಕೂ ಹೆಚ್ಚು ಜನರಿದ್ದು ವಕ್ಫ ವಿಷಯ ಕಾಡ್ಗಿಚ್ಚಿನಂತೆ ಹರಡಿ, ತಮ್ಮ ಬದುಕು ಬೀದಿಗೆ ಬರಲಿದೆ ಎಂದು ಆತಂಕ್ಕೀಡಾಗಿದ್ದಾರೆ. ಸರ್ಕಾರಕ್ಕೆ ಶಪಿಸುತ್ತ, ತಕ್ಷಣವೇ ಈ ಬಗ್ಗೆ ಕ್ರಮವಹಿಸಿ ವಕ್ಫ್‌ ಮಂಡಳಿ ಹೆಸರು ಪಹಣಿಯಿಂದ ತೆಗೆಸುವಂತೆ ಆಗ್ರಹಿಸಿದ್ದಾರೆ.

ಕರ್ನಾಟಕ ವಕ್ಫ್‌ ಮಂಡಳಿ ಎಂದು ಜಮೀನುಗಳ ಪಹಣಿಯಲ್ಲಿ ಸೇರ್ಪಡೆ ಮಾಡಿದ್ದರಿಂದ ರೈತರಿಗೆ ಭೂಮಿ ಮೇಲೆ ಸಾಲ, ಮಾರಾಟದ ಯಾವುದೇ ಹಕ್ಕು ಇಲ್ಲದಂತಾಗಿದೆ. ಇನ್ನು ಯಾವುದೇ ಕಾರಣಕ್ಕೂ ಮನೆ ಖಾಲಿ ಮಾಡಲ್ಲ, ಮನೆಗಾಗಿ ಉಗ್ರ ಹೋರಾಟ ಮಾಡ್ತೀವಿ ಅಂತಿರುವ ಗ್ರಾಮಸ್ಥರು ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

ಗ್ರಾಮಸ್ಥರ, ರೈತರ ಗೋಳು ಒಂದೆಡೆಯಾದರೆ ಕೇಂದ್ರ ಸರ್ಕಾರದ ಆಧೀನದಲ್ಲಿ ಬರುವ ಐತಿಹಾಸಿಕ ಬೀದರ್‌ ಕೋಟೆಯ ಸೋಲಾಹ ಕಂಬ್‌ ಮಸೀದಿ ಸ್ಥಳ, ಅಷ್ಟೂರಿನ ಗುಂಬಜಗಳು, ಬರೀದ್‌ಶಾಹಿ ಉದ್ಯಾನವನದ ಗುಂಬ, ಅಲಿ ಬರೀದ್‌ ಸೇರಿದಂತೆ ಮತ್ತಿತರ ಭಾರತೀಯ ಪುರಾತತ್ವ ಇಲಾಖೆಯ (ಎಎಸ್‌ಐ) ಅಧೀನದಲ್ಲಿರುವ ಹಲವು ಕಟ್ಟಡಗಳು ಮತ್ತು ಅದರ ಆಸ್ತಿಯ ಮೇಲೂ ವಕ್ಫ್‌ ಮೊಹರು ಬಿದ್ದಿದೆ. ಅವುಗಳ ಮೇಲೆಯೂ ತನ್ನ ಹಕ್ಕನ್ನು ಹೊಂದಿರುವ ಕುರಿತಾಗಿ ಪಹಣಿಗಳಲ್ಲಿ ಕರ್ನಾಟಕ ವಕ್ಫ್‌ ಮಂಡಳಿ ಹೆಸರು ಸೇರಿಸಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

...ಬಾಕ್ಸ್‌......

ಅಧಿಸೂಚನೆ ಹೊರಡಿಸಿದಾಕ್ಷಣ ಮಾಲೀಕರಾಗಲ್ಲ, ಹೈಕೋರ್ಟ್‌ ತೀರ್ಪು

ಅಷ್ಟಕ್ಕೂ ಎಎಸ್‌ಐ ವ್ಯಾಪ್ತಿಗೆ ಬರುವ ಐತಿಹಾಸಿಕ ಸ್ಮಾರಕ ಸ್ಥಳಗಳು ಮತ್ತು ಜಮೀನನ್ನು ಸೂಕ್ತ ಸಾಕ್ಷಾಧಾರಗಳ ದಾಖಲಾತಿಗಳಿಲ್ಲದೆ ಇದಕ್ಕೂ ಮೊದಲು ದಾಖಲಾತಿಗಳನ್ನು ಹೊಂದಿರುವ ಮಾಲೀಕತ್ವವನ್ನು ನಿರ್ಲಕ್ಷಿಸಿ ಕೇವಲ ಒಂದು ಅಧಿಸೂಚನೆ ಹೊರಡಿಸುವ ಮೂಲಕ ವಕ್ಫ್‌ ಮಂಡಳಿಯು ಪಡೆಯುವಂತಿಲ್ಲ ಮತ್ತು ಅದರ ಆಸ್ತಿ ಎಂದು ಹಕ್ಕು ವ್ಯಕ್ತಪಡಿಸುವಂತಿಲ್ಲ ಎಂದು ಮಧ್ಯಪ್ರದೇಶದ ಜಬಲಪೂರ್‌ ಹೈಕೋರ್ಟ್ ಅಲ್ಲಿನ ವಕ್ಫ್‌ ಮಂಡಳಿ ಹಾಗೂ ಭಾರತೀಯ ಪುರಾತತ್ವ ಇಲಾಖೆಯ ಆಸ್ತಿಯೊಂದರ ಕುರಿತಾಗಿ ಇದೇ 20224ರ ಜುಲೈ 26ರಂದು ಹೊರಡಿಸಿದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಇದು ಕೇವಲ ಎಎಸ್‌ಐ ಸ್ಮಾರಕ ಸ್ಥಳಗಳಿಗಷ್ಟೇ ಅಲ್ಲ ಇತರೆ ಜನರ ಆಸ್ತಿಗಳಿಗೂ ಅನ್ವಯವಾಗಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

------

3ಬಿಡಿಆರ್‌555