ಹಿಂದುಳಿದ ವರ್ಗಗಳ ಆರ್ಥಿಕ ಸಬಲೀಕರಣಕ್ಕಾಗಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಜಾರಿಗೆ ತಂದ ಗಂಗಾ ಕಲ್ಯಾಣ ಯೋಜನೆ ಇಂದಿಗೂ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಈ ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿಟ್ಟಿರುವುದು ರೈತರ ಬದುಕಿಗೆ ಹೊಸ ಚೈತನ್ಯ ತಂದಿದೆ ಎಂದು ಹೇಳಿದರು. ರೈತರಿಗೆ ಕೃಷಿ ಚಟುವಟಿಕೆಗಳಿಗೆ ಶಾಶ್ವತ ನೆರವಾಗುತ್ತಿರುವ ಗಂಗಾ ಕಲ್ಯಾಣ ಯೋಜನೆ ರೈತರ ಆರ್ಥಿಕ ಬದುಕಿಗೆ ದೊಡ್ಡ ಬಲ ನೀಡುತ್ತಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಬಡ ಹಾಗೂ ಮಧ್ಯಮ ವರ್ಗದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಶಾಶ್ವತ ನೆರವಾಗುತ್ತಿರುವ ಗಂಗಾ ಕಲ್ಯಾಣ ಯೋಜನೆ ರೈತರ ಆರ್ಥಿಕ ಬದುಕಿಗೆ ದೊಡ್ಡ ಬಲ ನೀಡುತ್ತಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.ನಗರದ ಶ್ರೀ ವೆಂಕಟೇಶ್ವರ ಕಲಾಭವನದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಸಣ್ಣ ನೀರಾವರಿ ಇಲಾಖೆ, ಅಂತರ್ಜಲ ಅಭಿವೃದ್ಧಿ ಇಲಾಖೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮಗಳ ಸಂಯುಕ್ತ ಆಶ್ರಯದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದುಳಿದ ವರ್ಗಗಳ ಆರ್ಥಿಕ ಸಬಲೀಕರಣಕ್ಕಾಗಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಜಾರಿಗೆ ತಂದ ಗಂಗಾ ಕಲ್ಯಾಣ ಯೋಜನೆ ಇಂದಿಗೂ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಈ ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿಟ್ಟಿರುವುದು ರೈತರ ಬದುಕಿಗೆ ಹೊಸ ಚೈತನ್ಯ ತಂದಿದೆ ಎಂದು ಹೇಳಿದರು.2023–24 ಹಾಗೂ 2024–25 ಸಾಲಿನಲ್ಲಿ ವಿವಿಧ ಇಲಾಖೆಗಳಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ 200ಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೊಳವೆಬಾವಿ ಮಂಜೂರಾತಿ ಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಇದುವರೆಗೂ 1.10 ಲಕ್ಷ ಕೋಟಿ ರು. ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಿಡುಗಡೆ ಮಾಡಿದ್ದು, ಜೊತೆಗೆ ಸಾವಿರಾರು ಕೋಟಿ ರು.ಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದೆ. ಸತ್ಯ ತಿಳಿಯದೆ ಆರೋಪಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.ಕ್ಷೇತ್ರದಲ್ಲಿ ಐದು ಸೋಲಾರ್ ಘಟಕಗಳನ್ನು ಸ್ಥಾಪಿಸಿ, 10 ವಿದ್ಯುತ್ ಉಪಕೇಂದ್ರಗಳನ್ನು ನಿರ್ಮಿಸುವ ಮೂಲಕ ರೈತರಿಗೆ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಿರಂತರ ವಿದ್ಯುತ್ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಇನ್ನಷ್ಟು ಫಲಾನುಭವಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗಲಿದೆ ಎಂದರು.ಕೆರೆಗಳಿಗೆ ನೀರು ತುಂಬಿಸುವುದು, ವಿದ್ಯುತ್ ವ್ಯವಸ್ಥೆ ಬಲಪಡಿಸುವುದು ಸೇರಿದಂತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಜನಪರ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್, ಜಿಪಂ ಮಾಜಿ ಉಪಾಧ್ಯಕ್ಷ ಬಿಳಿ ಚೌಡಯ್ಯ, ಜಿಪಂ ಮಾಜಿ ಸದಸ್ಯ ಸುಲೋಚನಾಬಾಯಿ, ತಾಪಂ ಮಾಜಿ ಅಧ್ಯಕ್ಷರಾದ ಎಚ್.ಟಿ. ಶಿವಮೂರ್ತಿ, ಮಂಜುಳಾಬಾಯಿ, ಹರತನಹಳ್ಳಿ ಜಯಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.