ವಿದ್ಯಾರ್ಥಿ ಜೀವನ ಉತ್ತಮ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲು ಸಾಧ್ಯ ಎಂದು ತುಮಕೂರು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪಂಡಿತ್ ಗಂಗಾಧರ ತಿಳಿಸಿದರು.
ಕನ್ನಡಪ್ರಭ ವಾರ್ತೆ ಪಾವಗಡ
ವಿದ್ಯಾರ್ಥಿ ಜೀವನ ಉತ್ತಮ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲು ಸಾಧ್ಯ ಎಂದು ತುಮಕೂರು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪಂಡಿತ್ ಗಂಗಾಧರ ತಿಳಿಸಿದರು.ತಾಲೂಕಿನ ದೊಡ್ಡಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 1998-2000 ಸಾಲಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಗುರುವಂದನೆ ಸ್ವೀಕರಿಸಿ ಮಾತನಾಡಿದ ಅವರು, ಮೊದಲ ಬಾರಿ ಶಿಕ್ಷಕನಾಗಿ ಇದೇ ಶಾಲೆ ಬಂದೆ. ಇಲ್ಲಿನ ವಿದ್ಯಾರ್ಥಿಗಳು ನನ್ನ ಅನ್ನದಾತರು. ಇಲ್ಲಿನ ಪೋಷಕರು ಸಹಕಾರ ಹಾಗೂ ಯಾವುದೇ ಮೂಲಭೂತ ಸೌಕರ್ಯಗಳು, ಶಾಲಾ ಕೊಠಡಿಗಳಿಲ್ಲದೆ ಮರಗಳ ಕೆಳಗೆ ನಾವು ಮಾಡಿದ ಪಾಠಪ್ರವಚನಗಳು ಗುರಿ ಮುಟ್ಟಿವೆ ಎನ್ನುವ ತೃಪ್ತಿ ನಿಮ್ಮಿಂದ ಸಾಬೀತಾಗಿದೆ ಎಂದರು.ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ಎಚ್.ವಿ.ಗೋವಿಂದರಾಜು ಶೆಟ್ಟಿ ಮಾತನಾಡಿ, ಸರಕಾರಿ ಪ್ರೌಢಶಾಲೆ ನೂತನವಾಗಿ ಆರಂಭವಾದಾಗ 1994ರಲ್ಲಿ ಶಿಕ್ಷಕ ವೃತ್ತಿ ಆರಂಬಿಸಿ ಮೊದಲ ಭಾರಿಗೆ ಶಿಕ್ಷಕನಾಗಿ ಇಲ್ಲಿಗೆ ಬಂದಿದ್ದೆ. ನಂತರ ಸರಕಾರಿ ಶಾಲೆಯ ದಾಖಲಾತಿ ಹೆಚ್ಚಳದ ಜತೆಗೆ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳ ಉತ್ತಮ ಬದುಕನ್ನು ಕಟ್ಟಿಕೊಳ್ಳುವ ಶಕ್ತಿ ಶಿಕ್ಷಕರಾಗಿ ನಾವು ಮಾಡಿರುವ ಬಾವನೆ ನನಗಿದೆ.ಉನ್ನತ ಶಿಕ್ಷಣ ಪಡೆದು ವಿವಿಧ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದರು. ಕೊರಟಗೆಗೆ ತಾಲೂಕು ತಿಮ್ಮಸಂದ್ರ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶೇಷಗಿರಿ ಮಾತನಾಡಿ, ಸುಮಾರು 26 ವರ್ಷಗಳ ನಂತರ ನನ್ನ ನೆಚ್ಚಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮ ಸಾರ್ಥಕ ಕ್ಷಣವಾಗಿದೆ. ಗುರು ಪರಂಪರೆ ಮುಂದುವರೆಯಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ಗುರುವಂದನೆಯ ಜತೆಗೆ ಓದಿರುವ ಶಾಲೆಗಳ ಅಭಿವೃದ್ದಿಯತ್ತ ಹೆಚ್ಚು ಗಮನಹರಿಸುವುದು ಉತ್ತಮ ಬೆಳವಣೆಗೆ ಎಂದರು. ಇದೇ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ಡಿ.ಆರ್.ಅಶೋಕ್, ನಿವೃತ್ತ ಶಿಕ್ಷಕ ಗೋವಿಂದಪ್ಪ, ಬಿ.ನಾಗರಾಜು, ತಿಪಟೂರು ತಾಲೂಕು ನೆಲ್ಲಿಕೆರೆ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಹನುಮಂತರಾವ್, ಎಂ.ಆರ್.ಮಲ್ಲಿಕಾರ್ಜುನ ಸ್ವಾಮಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಹನುಮಂತರಾಯಪ್ಪ,ಚಿಕ್ಕಹಳ್ಳಿ ಗ್ರಾಪಂ ಅಧ್ಯಕ್ಷ ಗೋಪಿ, ಎ.ರಾಮಾಂಜಿನಮ್ಮ, ರಾಮಪುರ ನಾಗೇಶ್, ವಂಶಿ,ಮಾರಪ್ಪ ಇತರರಿದ್ದರು.