ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪ್ರಸ್ತುತ ಮಕ್ಕಳು ಮೊಬೈಲ್ ಗೀಳಿಗೆ ಹೆಚ್ಚು ಅಂಟಿಕೊಂಡಿರುವುದರಿಂದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.ಪಟ್ಟಣದ ಎಚ್.ಎನ್.ಆರ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ೨ನೇ ವರ್ಷದ ಅಪ್ಪು ಟ್ರೋಫಿ ಕರಾಟೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ಸಕ್ಕರೆ ಕಾಯಿಲೆ ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವುದರಿಂದ ಚಿಕ್ಕಂದಿನಲ್ಲಿಯೇ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಪ್ರತಿದಿನ ಒಂದು ಗಂಟೆಯಾದರೂ ಯೋಗ ವ್ಯಾಯಾಮ ಅಥವಾ ಕ್ರೀಡಾಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಕರಾಟೆ ಕಲಿಯುವುದರಿಂದ ಆತ್ಮರಕ್ಷಣೆಯ ಜೊತೆಗೆ ಚುರುಕು ಬುದ್ಧಿಯನ್ನು ಗಳಿಸುತ್ತಾರೆ ಎಂದರು.ನಮ್ಮ ದೇಶದ ಈಶಾನ್ಯ ರಾಜ್ಯಗಳಲ್ಲಿ ಕರಾಟೆ ಹೆಚ್ಚು ಪ್ರಚಲಿತದಲ್ಲಿತ್ತು. ಈಗ ನಮ್ಮ ರಾಜ್ಯದಲ್ಲೂ ಪ್ರಚಲಿತದಲ್ಲಿದೆ. ಇಡೀ ವಿಶ್ವವೇ ಕೋವಿಡ್‌ನಿಂದ ಬಳಲಿದರೂ ಕೂಡ ಜಫಾನ್ ದೇಶಕ್ಕೆ ಹೆಚ್ಚು ಪರಿಣಾಮ ಬೀರಲಿಲ್ಲ. ಆ ದೇಶದಲ್ಲಿ ಹಸ್ತಲಾಘವ ಮಾಡುವ ಪದ್ಧತಿಯನ್ನೇ ರೂಡಿಸಿಕೊಂಡಿಲ್ಲ ಬದಲಿಗೆ ಶಿರಬಾಗಿ ನಮಸ್ಕಾರ ಮಾಡುತ್ತಾರೆ. ಕುಂದಾಪುರ ಸೆನ್ಸಾಯಿ ಗಣೇಶ್ ಅವರ ತರಬೇತಿಯಲ್ಲಿ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದು, ಅವರ ಗುರುಗಳಾದ ಕಿರಣ್ ಹಾಗೂ ಸಂದೀಪ್‌ರವರ ತಂಡ ನಮ್ಮ ತಾಲೂಕಿಗೆ ಬಂದು ಕರಾಟೆ ಸ್ಪರ್ಧೆಯನ್ನು ಯುಶಸ್ವಿಗೊಳಿಸುತ್ತಿರುವುದಕ್ಕೆ ಧನ್ಯವಾದ ತಿಳಿಸಿದರು.
ರಾಧಾಕೃಷ್ಣ ಶಾಲೆಯಲ್ಲಿ ೮ ನೇ ತರಗತಿ ಓದುತ್ತಿರುವ ಎಚ್.ಪಿ.ಹನಿಯಾ (ಬ್ಲಾಕ್ ಬೆಲ್ಟ್ ) ಗ್ರಾಂಡ್ ಚಾಂಪಿಯನ್ ಆಗಿದ್ದಾಳೆ. ಜ್ಞಾನಸಾಗರ ಶಾಲೆಯ ೬ನೇ ತರಗತಿಯ ಎಸ್.ಹರ್ಷ (ಗ್ರೀನ್ ಬೆಲ್ಟ್), ೫ ನೇ ತರಗತಿಯ ಎಸ್.ವಿ.ಹಂಸಶ್ರೀ (ಪರ್ಪಲ್ ಬೆಲ್ಟ್) , ಆರ್.ರಿತಿನ್ (ವೈಟ್ ಬೆಲ್ಟ್), ಧನ್ವಿ ಪಿ ಗೌಡ (ಯೆಲ್ಲೋ ಬೆಲ್ಟ್) ವಿವಿಧ ವಿಭಾಗಗಳಲ್ಲಿ ಕಟಾ ಸ್ಫರ್ಧೇಯಲ್ಲಿ ಪ್ರಥಮ ಸ್ಥಾನಗಳಿಸಿ ಬೈಸಿಕಲ್ ಬಹುಮಾನ ಪಡೆದರು. ತಾಲೂಕಿನ ವಿವಿಧ ಶಾಲೆಗಳಿಂದ ಓಟ್ಟು ೨೩೭ ವಿದ್ಯಾರ್ಥಿಗಳು ಭಾಗವಹಿಸಿದ್ದು ಪ್ರಥಮ ಸುತ್ತಿನ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ತೂಕ, ಬೆಲ್ಟ್ ಹಾಗೂ ವಯಸ್ಸಿನ ಆಧಾರದಲ್ಲಿ ೮ ಜನರ ತಂಡ ಮಾಡಿ ಪ್ರಥಮ ದ್ವಿತೀಯ ತೃತೀಯ ಬಹುಮಾನ ನೀಡಿದರು. ಎರಡೂ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಕಟಾ ವಿಭಾಗದಲ್ಲಿ ಚಾಂಪಿಯನ್ ಬಹುಮಾನ ನೀಡಿದರು. ಹೆಚ್ಚು ವಿದ್ಯಾರ್ಥಿಗಳು ಬಹುಮಾನ ಪಡೆದ ಜ್ಞಾನಸಾಗರ ಶಾಲೆ ಚಾಂಪಿಯನ್ ಟ್ರೋಪಿ ಪಡೆದರೆ ೨ನೇ ಸ್ಥಾನವನ್ನು ಅಕ್ಷರ ಹಾಗೂ ಆಲ್ಪೋನ್ಷ ನಗರ ಪಡೆದವು, ಶೆಟ್ಟಿಹಳ್ಳಿಯ ಗಿರೀಶ್ ಶಾಲೆ ತೃತೀಯ ಹಾಗೂ ನಾಲ್ಕನೇ ಸ್ಥಾನವನ್ನು ಶಾಲಿನಿ ಶಾಲೆಯ ವಿದ್ಯಾರ್ಥಿಗಳು ಪಡೆದರು. ಪುರಸಭಾ ಮಾಜಿ ಅಧ್ಯಕ್ಷ ಸಿ.ಎನ್.ಶಶಿಧರ್, ಕಿರಣ್ ಡ್ರಾಗನ್ ಪಸ್ಟ್ ಮಾರ್ಷಲ್ ಆರ್ಟ್ಸ್ ಆಫ್ ಇಂಡಿಯಾ ಅಧ್ಯಕ್ಷ ಕಿಯೋಷಿ ಕಿರಣ್ ಕುಂದಾಪುರ, ಮುಖ್ಯ ಪರೀಕ್ಷಕ ಶಿಷನ್ ಸಂದೀಪ್ ವಿ ಕಿರಣ್, ಸಂಯೋಜಕ ಸೆನ್ಸಾಯಿ ಗಣೇಶ್ ಕುಂದಾಪುರ ಉಪಸ್ಥಿತರಿದ್ದರು.-----------------------------------------------------------------