ಮಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಹಾಲಿ ಇರುವ ಶಸ್ತ್ರಚಿಕಿತ್ಸಾ ಕೊಠಡಿಗಳು, ಶಸ್ತ್ರಚಿಕಿತ್ಸಾ ಉಪಕರಣಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸ್ವಚ್ಛ, ಸೋಂಕು ರಹಿತಗೊಳಿಸಿ, ಸುರಕ್ಷಿತವಾಗಿಡುವ ಆರೋಗ್ಯ ಕ್ರಿಮಿನಾಶಕ ಸಂಸ್ಕರಣಾ ವಿಭಾಗ ತುಂಬಾ ಹಳೆಯದಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಿಮ್ಸ್ ಬೋಧಕ ಆಸ್ಪತ್ರೆಗೆ ೫೦೦ ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ಮಾಣದ ಕುರಿತಾದ ಪ್ರಸ್ತಾವನೆ ಸರ್ಕಾರದ ಮುಂದೆ ಇರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ್‌ ತಿಳಿಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ಶಾಸಕ ಮಧು ಜಿ.ಮಾದೇಗೌಡರ ಪ್ರಶ್ನೆಗೆ ಉತ್ತರಿಸಿರುವ ಅವರು, ಮಿಮ್ಸ್ ಸಂಸ್ಥೆ ಆರಂಭದಲ್ಲಿ ೪೫೦ ಹಾಸಿಗೆಗಳಿಗೆ ಅನುಮೋದನೆ ಪಡೆದಿತ್ತು. ಕಳೆದ ಐದು ವರ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಆಸ್ಪತ್ರೆಯು ಈಗ ೮೫೦ ಹಾಸಿಗೆಗಳ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಆದರೆ, ರೋಗಿಗಳ ಒತ್ತಡಕ್ಕೆ ಅನುಗುಣವಾಗಿ ೫೦೦ ಹಾಸಿಗೆಗಳ ಹೊಸ ಆಸ್ಪತ್ರೆ ತೆರೆಯುವ ಕುರಿತಾದ ಪ್ರಸ್ತಾವನೆ ಸರ್ಕಾರ ಮುಂದೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಹಾಲಿ ಇರುವ ಶಸ್ತ್ರಚಿಕಿತ್ಸಾ ಕೊಠಡಿಗಳು, ಶಸ್ತ್ರಚಿಕಿತ್ಸಾ ಉಪಕರಣಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸ್ವಚ್ಛ, ಸೋಂಕು ರಹಿತಗೊಳಿಸಿ, ಸುರಕ್ಷಿತವಾಗಿಡುವ ಆರೋಗ್ಯ ಕ್ರಿಮಿನಾಶಕ ಸಂಸ್ಕರಣಾ ವಿಭಾಗ ತುಂಬಾ ಹಳೆಯದಾಗಿದೆ. ತುಂಬಾ ಕಿರಿದಾದ ಜಾಗದಲ್ಲಿ ಈ ಕೊಠಡಿಗಳಿರುವುದರಿಂದ ಅವುಗಳನ್ನು ತುರ್ತಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಪರಿಶೀಲನಾ ಹಂತದಲ್ಲಿದೆ ಎಂದು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಲಾಂಡ್ರಿಗೆ ಈ ಹಿಂದೆ ಅಳವಡಿಸಲಾಗಿದ್ದ ಉಪಕರಣಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ. ಸುಮಾರು ೫೦೦ ರಿಂದ ೧೦೦೦ ಕೆಜಿ ಬಟ್ಟೆಯನ್ನು ಸ್ವಚ್ಛಗೊಳಿಸುವುದಕ್ಕೆ ಚಾಲನೆಯಲ್ಲಿರುತ್ತವೆ. ಹೊಸ ಯಂತ್ರದ ಅವಶ್ಯಕತೆ ಬಂದಾಗ ಆರ್ಥಿಕ ಸಂಪನ್ಮೂಲದ ಲಭ್ಯತೆಗೆ ಒಳಪಟ್ಟು ಟೆಂಡರ್ ಮುಖಾಂತರ ಖರೀದಿಗೆ ಕ್ರಮ ವಹಿಸಲಾಗುವುದು ಎಂದಿದ್ದಾರೆ.

ಮಿಮ್ಸ್‌ನಲ್ಲಿ ಹೃದಯ ರೋಗ ಮತ್ತು ಮೂತ್ರಪಿಂಡ ರೋಗ ಚಿಕಿತ್ಸೆಗಳಿಗೆ ತಜ್ಞ ವೈದ್ಯರಿಲ್ಲ. ತಜ್ಞ ವೈದ್ಯರ ಹುದ್ದೆಗಳು ಸೃಜನೆಯಾಗದ ಕಾರಣ ಇದುವರೆಗೆ ಆ ಹುದ್ದೆಗಳನ್ನು ಭರ್ತಿಮಾಡಿಲ್ಲ. ಆದರೆ, ಹುದ್ದೆ ಸೃಜನೆಯಾಗುವವರೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.ಕ್ಯಾನ್ಸರ್ ಆಸ್ಪತ್ರೆಗೆ ೨೧೯ ಹುದ್ದೆಗಳಿಗೆ ಪ್ರಸ್ತಾವನೆ: ಡಾ.ಶರಣ ಪ್ರಕಾಶ

- ಬೋಧಕ-೨೯, ಬೋಧಕೇತರ ೧೯೦ ಹುದ್ದೆಗಳ ಸೃಜನೆ ಬಗ್ಗೆ ಸರ್ಕಾರ ಪರಿಶೀಲನೆ

- ರೇಡಿಯೋ, ಕಿಮೋಥೆರಪಿ, ಶಸ್ತ್ರಚಿಕಿತ್ಸೆ, ಉಪಶಮನ ಚಿಕಿತ್ಸಾ ಸೌಲಭ್ಯಕ್ಕೆ ಕ್ರಮ

ಕನ್ನಡಪ್ರಭ ವಾರ್ತೆ ಮಂಡ್ಯ

ಮಿಮ್ಸ್ ಟರ್ಷಿಯರಿ ಕ್ಯಾನ್ಸರ್ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ೨೯ ಬೋಧಕ ಹಾಗೂ ೧೯೦ ಬೋಧಕ ಹುದ್ದೆಗಳು ಸೇರಿದಂತೆ ೨೧೯ ಹುದ್ದೆಗಳನ್ನು ಸೃಜಿಸುವ ಪ್ರಸ್ತಾವನೆ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ್‌ ತಿಳಿಸಿದ್ದಾರೆ.

ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದ ನಂತರ ರೋಗಿಗಳಿಗೆ ರೇಡಿಯೋಥೆರಪಿ, ಕಿಮೋಥೆರಪಿ, ಶಸ್ತ್ರಚಿಕಿತ್ಸೆಗಳು ಹಾಗೂ ಉಪಶಮನ ಚಿಕಿತ್ಸಾ ಸೌಲಭ್ಯಗಳು ದೊರಕಲಿವೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ೨೭ ಕೋಟಿ ರು. ಹಾಗೂ ರಾಜ್ಯ ಸರ್ಕಾರ ೧೮ ಕೋಟಿ ರು. ಸೇರಿದಂತೆ ೪೫ ಕೋಟಿ ರು. ವೆಚ್ಚದಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಕೇಂದ್ರಕ್ಕೆ ನಿಗದಿಗೊಳಿಸಿರುವ ಅನುದಾನದಲ್ಲಿ ಈವರೆಗೆ ೧೭.೨೫ ಕೋಟಿ ರು. ಹಾಗೂ ರಾಜ್ಯದ ಅನುದಾನದಲ್ಲಿ ೧೨.೭೬ ಕೋಟಿ ರು. ಸೇರಿ ೩೦.೦೨ ಕೋಟಿ ರು. ಮಾತ್ರ ಬಿಡುಗಡೆಯಾಗಿದೆ. ಉಳಿದಂತೆ ಕೇಂದ್ರ ೯.೭೪ ಕೋಟಿ ರು., ರಾಜ್ಯ ೫.೨೩ ಕೋಟಿ ರು. ಸೇರಿ ೧೪.೯೮ ಕೋಟಿ ರು. ಅನುದಾನ ಬಿಡುಗಡೆಯಾಗಬೇಕಿದೆ ಎಂದಿದ್ದಾರೆ.

ಆಸ್ಪತ್ರೆಗೆ ಬಿಡುಗಡೆಯಾಗಿರುವ ೩೦.೦೨ ಕೋಟಿ ರು. ಅನುದಾನದಲ್ಲಿ ಸಿವಿಲ್ ಕಾಮಗಾರಿಗೆ ೧೧.೫೫ ಕೋಟಿ ರು. ಮತ್ತು ಉಪಕರಣಗಳ ಖರೀದಿಗೆ ೧೮.೩೯ ಕೋಟಿ ರು. ವೆಚ್ಚ ಮಾಡಿದ್ದು, ಬಾಕಿ ೭.೭೬ ಲಕ್ಷ ರು. ಸಿಂಗಲ್ ನೋಡಲ್ ಏಜೆನ್ಸಿ ಖಾತೆಯಲ್ಲಿ ಉಳಿಸಲಾಗಿದೆ. ಸಿವಿಲ್ ಕಾಮಗಾರಿ ಶೇ.೮೦ರಷ್ಟು ಪೂರ್ಣಗೊಂಡಿದೆ. ಬಂಕರ್ ಕೆಲಸದ ಕಾಮಗಾರಿ ಶೇ.೨೦ರಷ್ಟು ಬಾಕಿ ಇದ್ದು, ಮುಂದಿನ ಮೂರು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಸಿವಿಲ್ ಕಾಮಗಾರಿಗೆ ಉದ್ದೇಶಿಸಿದ್ದ ೧೧.೫೫ ಕೋಟಿ ರು. ಉದ್ದೇಶಿತ ಅಂದಾಜು ಎಚ್ಚ ಇದೀಗ ಪರಿಷ್ಕೃತಗೊಂಡು ೧೭.೪೦ ಕೋಟಿ ರು. ಮೊತ್ತಕ್ಕೆ ಪರಿಷ್ಕೃತಗೊಂಡು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಹೆಚ್ಚುವರಿ ೫.೬೫ ಕೋಟಿ ರು. ಹಣವನ್ನು ರಾಜ್ಯಸರ್ಕಾರದಿಂದ ಒದಗಿಸಲಾಗಿದೆ ಎಂದು ವಿವರಿಸಿದ್ದಾರೆ.

ಲೈನಿಯರ್ ಆಕ್ಸಿಲೇಟರ್, ದೋಸಿ ಮೀಟರ್ ಉಪಕರಣವನ್ನು ಇ-ಟೆಂಡರ್ ಮೂಲಕ ಖರೀದಿ ಸರಬರಾಜು ಮಾಡಲಾಗಿದೆ. ಬಂಕರ್ ಕೆಲಸ ಪೂರ್ಣಗೊಂಡ ಕೂಡಲೇ ಬಾಕಿ ಉಪಕರಣಗಳನ್ನು ಅಳವಡಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.