ಅಮೆರಿಕ ಮೂಲದ ಸ್ಯಾನ್ಸನ್ ಗೂಪ್ ಕಂಪನಿ ಸ್ಥಾಪಿಸಲುದ್ದೇಶಿಸಿರುವ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಸ್ಥಾಪನೆಗೆ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಸರ್ಕಾರಿ ಭೂಮಿ ಲಭ್ಯವಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಅಮೆರಿಕ ಮೂಲದ ಸ್ಯಾನ್ಸನ್ ಗೂಪ್ ಕಂಪನಿ ಸ್ಥಾಪಿಸಲುದ್ದೇಶಿಸಿರುವ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಸ್ಥಾಪನೆಗೆ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಸರ್ಕಾರಿ ಭೂಮಿ ಲಭ್ಯವಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.ಮಂಡ್ಯ ತಾಲೂಕು ಕೊತ್ತತ್ತಿ ಹೋಬಳಿ ರಾಗಿಮುದ್ದನಹಳ್ಳಿ ಗ್ರಾಮದ ಸರ್ವೇ ನಂ.೮೧ರಲ್ಲಿ ೭೨.೩೧ ಎಕರೆ ಹಾಗೂ ಶ್ರೀರಂಗಪಟ್ಟಣ ತಾಲೂಕು ಸಿದ್ದಾಪುರ ಗ್ರಾಮದ ಸರ್ವೇ ನಂ. ೯೩ರಲ್ಲಿ ೨೧.೨೨ ಎಕರೆ ಹುಲ್ಲುಬನ್ನಿ ಜಾಗ ಸೇರಿದಂತೆ ೯೪.೧೩ ಎಕರೆ ಜಾಗವನ್ನು ಗುರುತಿಸಿ ಎರಡೂ ತಾಲೂಕಿನ ತಹಸೀಲ್ದಾರ್‌ಗಳು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮಾಹಿತಿ ರವಾನಿಸಿದ್ದಾರೆ.
ರಾಗಿಮುದ್ದನಹಳ್ಳಿ ಗ್ರಾಮದ ಸರ್ವೇ ನಂ.೮೧ರಲ್ಲಿ ಆಕಾರ್‌ಬಂದ್ ಮತ್ತು ಆರ್‌ಟಿಸಿಯಂತೆ ೧೧೮.೩೧ ಎಕರೆ ಜಮೀನು ಇದೆ. ಅದರಲ್ಲಿ ಖಾಸಗಿ ವ್ಯಕ್ತಿಗಳಿಗೆ ೨೫.೧೮ ಎಕರೆ, ಗಣಿ ಗುತ್ತಿಗೆಗೆ ೨೦.೨೨ ಎಕರೆ, ಇತರೆ ಉದ್ದೇಶಕ್ಕೆ ೧ ಎಕರೆ ಜಮೀನು ನೀಡಿದ್ದು ಉಳಿಕೆ ಗೋಮಾಳ ೭೧.೩೧ ಎಕರೆ ಇದೆ ಎಂದು ಮಾಹಿತಿ ನೀಡಲಾಗಿದೆ.ಸಿದ್ದಾಫುರ ಗ್ರಾಮದ ಸರ್ವೇ ನಂ. ೯೩ರಲ್ಲಿ ಆಕಾರ್ ಬಂದ್‌ನಂತೆ ೩೩.೨೮ ಎಕರೆ ಜಮೀನಿದ್ದರೆ, ಆರ್‌ಟಿಸಿಯಲ್ಲಿ ೩೦.೩೧ ಎಕರೆ ಲಭ್ಯವಿದೆ. ಇದರಲ್ಲಿ ಖಾಸಗಿ ವ್ಯಕ್ತಿಗಳ ಹಿಡುವಳಿ ಜಮೀನು ೧೧.೦೭ಎಕರೆ ಇದೆ. ವಿವಿಧ ಯೋಜನೆಗಳಿಗೆ ೪.೩೦ ಎಕರೆ ಮಂಜೂರಾಗಿದೆ. ಗೋಮಾಳದ ಜಮೀನು ಆರ್‌ಟಿಸಿಯಂತೆ ೨೧.೨೨ ಎಕರೆ ಉಳಿದುಕೊಂಡಿರುವುದಾಗಿ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ವಿವರದಲ್ಲಿ ದಾಖಲಿಸಲಾಗಿದೆ.
ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರು ಕಳೆದ ಡಿ.೧೩ರಂದು ರಾಗಿಮುದ್ದನಹಳ್ಳಿ ಸರ್ವೇ ನಂ.೮೧ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಸಿದ್ದಾಪುರ ಸರ್ವೇ ನಂ.೯೩ರಲ್ಲಿ ಸರ್ಕಾರಿ ಗೋಮಾಳ ಜಾಗವಿರುವ ಮಾಹಿತಿಯನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹಾಗೂ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಪತ್ರ ಬರೆದು ಗಮನಸೆಳೆದಿದ್ದರು.ಕೆ.ಆರ್.ರವೀಂದ್ರ ಅವರು ಗುರುತಿಸಿದ ಸರ್ವೇ ನಂಬರ್‌ಗಳನ್ನೇ ಆಧರಿಸಿ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುವ ಮೂಲಕ ಸೆಮಿಕಂಡಕ್ಟರ್ ಯೋಜನೆ ಸ್ಥಾಪನೆಗೆ ಉಪಯುಕ್ತ ಜಾಗವೆಂದು ಕಂಡುಬಂದ ಹಿನ್ನೆಲೆಯಲ್ಲಿ ಇದೀಗ ಅದೇ ಜಾಗಗಳನ್ನು ಯೋಜನೆಗೆ ಗುರುತಿಸಿ ಎರಡೂ ತಾಲೂಕಿನ ತಹಸೀಲ್ದಾರ್‌ರವರು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಇನ್ನು ರಾಗಿಮುದ್ದನಹಳ್ಳಿ ಸರ್ವೇ ನಂ. ೯೩ರಲ್ಲಿ ಗಣಿ ಗುತ್ತಿಗೆ ನಡೆಸುತ್ತಿರುವವರು ನಿಯಮಬಾಹಿರವಾಗಿ ಗಣಿ ನಡೆಸುತ್ತಿದ್ದು, ಅವರ ಪರವಾನಗಿಗಳನ್ನು ರದ್ದುಪಡಿಸಿದರೆ ೨೦.೨೨ ಎಕರೆ ಹಾಗೂ ಸ್ಮಶಾನಕ್ಕೆ ನೀಡಲಾಗಿದೆ ಎಂದು ಹೇಳುತ್ತಿರುವ ೧ ಎಕರೆ ಭೂಮಿಯನ್ನೂ ಸೇರಿಸಿಕೊಂಡರೆ ಹೆಚ್ಚುವರಿ ಜಮೀನು ಲಭ್ಯವಾಗುತ್ತದೆ. ಇನ್ನು ಸಿದ್ದಾಪುರ ಸರ್ವೇ ನಂ.೯೩ರಲ್ಲಿ ತಾಲೂಕು ಪಂಚಾಯ್ತಿಗೆ ೩ ಎಕರೆ, ಪೊಲೀಸ್ ಇಲಾಖೆಗೆ ೧ ಎಕರೆ ಜಾಗ ನೀಡಿರುವುದನ್ನು ಪಡೆದುಕೊಂಡರೆ ೧೧೫ ರಿಂದ ೧೨೦ ಎಕರೆಯವರೆಗೂ ಜಮೀನು ಸಿಗುವುದಕ್ಕೆ ಪೂರಕ ಅವಕಾಶಗಳಿವೆ. ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ತರುವುದೇ ಆದಲ್ಲಿ ಈ ಭಾಗದಲ್ಲಿ ವಿದ್ಯುತ್ ಮತ್ತು ನೀರಿಗೂ ಯಾವುದೇ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.ರಾಜಕೀಯ ಕೆಸರೆರಚಾಟ ನಿಲ್ಲುವುದೇ?ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಸೆಮಿಕಂಡಕ್ಟರ್ ಯೋಜನೆಗೆ ಪೂರಕವಾದ ಸರ್ಕಾರಿ ಜಮೀನು ಇರುವ ಮಾಹಿತಿ ಕಂದಾಯ ಇಲಾಖೆಯಿಂದಲೇ ದೊರಕಿರುವುದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಜಾಗಕ್ಕಾಗಿ ನಡೆಸುತ್ತಿರುವ ರಾಜಕೀಯ ಮೇಲಾಟಗಳು ಕೊನೆಗೊಳ್ಳಬೇಕಿದೆ.
ಕಂದಾಯ ಇಲಾಖೆಯವರು ಸೆಮಿಕಂಡಕ್ಟರ್ ಯೋಜನೆಗೆ ಜಾಗ ಲಭ್ಯವಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಇದೀಗ ಅಮೆರಿಕ ಮೂಲದ ಸ್ಯಾನ್ಸನ್ ಗೂಪ್ ಕಂಪನಿಯಿಂದ ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಸ್ಥಾಪನೆ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇನ್ನು ಮುಂದೆ ಜವಾಬ್ದಾರಿಯುತ ರಾಜಕಾರಣ ಮಾಡುವುದು ಈಗ ಅನಿವಾರ್ಯವಾಗಿದೆ. ಜಿಲ್ಲೆಯ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಯೂನಿಟ್ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.ಸೆಮಿಕಂಡಕ್ಟರ್ ಯೋಜನೆಗೆ ಪೂರಕವಾದ ಜಾಗ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಇದೆ. ಎರಡೂ ಸರ್ವೇ ನಂಬರ್‌ಗಳು ಹೊಂದಿಕೊಂಡಿರುವುದರಿಂದ ಮತ್ತು ಗಣಿ ಗುತ್ತಿಗೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಮಂಜೂರು ಮಾಡಿರುವ ಜಾಗವನ್ನು ಮರು ವಶಕ್ಕೆ ಪಡೆದರೆ 115 ಎಕರೆವರೆಗೆ ಜಾಗ ಸಿಗಲಿದೆ. ಕಂದಾಯಾಧಿಕಾರಿಗಳು ಸರ್ಕಾರಿ ಜಮೀನನ್ನು ಗುರುತಿಸಿ ಯೋಜನೆಗೆ ಮಂಜೂರು ಮಾಡಬಹುದೆಂದು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದಾರೆ. ಜೆಡಿಎಸ್-ಕಾಂಗ್ರೆಸ್‌ನವರು ದ್ವೇಷದ ರಾಜಕಾರಣ ಬಿಟ್ಟು ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲಿ.- ಕೆ.ಆರ್.ರವೀಂದ್ರ, ಸಾಮಾಜಿಕ ಹೋರಾಟಗಾರ