ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ರೈತರ ಪ್ರಮುಖ ಆಹಾರಧಾನ್ಯದ ಬೆಳೆ ಜೋಳವನ್ನು ಹೆಚ್ಚು ಬೆಳೆಯಬೇಕು ಎಂದು ಧಾರವಾಡ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಎಸ್.ಎಸ್.ಅಂಗಡಿ ಹೇಳಿದರು.ತಾಲೂಕಿನ ಕಗ್ಗೋಡ ಗ್ರಾಮದ ಪ್ರಗತಿಪರ ರೈತ ಸಂಜೀವ ಬಂತನಾಳ ಅವರ ಹೊಲದಲ್ಲಿ ವಿಜಯಪುರ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಸುಧಾರಿತ ಸಿಎಸ್‌ವಿ-೨೯ಆರ್ ಜೋಳದ ತಳಿಯ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಹಿಂದೆ ಜೋಳ ಬೆಳೆಗೆ ರಾಸಾಯನಿಕ ಗೊಬ್ಬರ ಬಳಸದೇ ತಿಪ್ಪೆಗೊಬ್ಬರ ಹಾಕಿ ಬೆಳೆಯುತ್ತಿದ್ದರು. ಕಾಡಿಗೆ ರೋಗ ಬರದಂತೆ ಗಂಧಕದ ಪುಡಿಯಿಂದ ಉಪಚಾರ ಮಾಡುತ್ತಿದ್ದರು. ಇದರಿಂದ ಅಧಿಕ ಇಳುವರಿ ಪಡೆಯುತ್ತಿದ್ದರು. ಈಗ ಅದೇ ಮಾದರಿಯಲ್ಲಿ ರಾಸಾಯನಿಕಗಳನ್ನು ಬಳಸದೆ ಜೋಳ ಬೆಳೆಯಬೇಕು ಎಂದರು.ಹಿಂದೆ ಕಣಿಕೆ ಸಂಗ್ರಹಿಸಿ ಬಣಿವೆ ಹಾಕುತ್ತಿದ್ದರು. ಆದರೆ, ಇಂದು ಜಾನುವಾರುಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಬಣವೆಗಳು ಎಲ್ಲೂ ಕಾಣಸಿಗುತ್ತಿಲ್ಲ. ಜೋಳ ಬಿತ್ತಿದ ೪೫ ದಿನಗಳ ನಂತರ ಬಿಳಿಕಸ ಏಳುತಿತ್ತು. ಅದನ್ನು ೨-೪ಡಿ ಸೊಡಿಯಂ ಉಪ್ಪು ಬಳಸಿ ಹತೋಟಿ ಮಾಡುತ್ತಿದ್ದರು. ಆದರೆ, ಇಂದು ರೈತರು ಅಧಿಕ ರಾಸಾಯನಿಕಗೊಬ್ಬರ, ಕೀಟನಾಶಕ, ಕಳೆನಾಶಕ ಬಳಸುತ್ತಿದ್ದಾರೆ. ಆದಾಗ್ಯೂ ಇಳುವರಿ ಕಡಿಮೆಯಾಗುತ್ತಿದೆ. ಅದಕ್ಕಾಗಿ ರೈತರು ಸುಧಾರಿತ ತಳಿಯ ಜೋಳದ ಬೀಜ ಬಿತ್ತನೆಮಾಡಿ ಸಾವಯವ ಕ್ರಮ ಅಳವಡಿಸಿ ಅಧಿಕ ಲಾಭ ಪಡೆಯಬೇಕು ಎಂದು ಹೇಳಿದರು.
ಸಹ ಸಂಶೋಧನಾ ನಿರ್ದೇಶಕ ಡಾ.ಅಶೋಕ ಸಜ್ಜನ ಮಾತನಾಡಿ, ಹವಾಮಾನ ಬದಲಾವಣೆಯಿಂದ ಮಳೆ ಕಡಿಮೆಯಾಗಿದ್ದು, ಜೋಳ ಬೆಳೆದ ರೈತರಿಗೆ ಅಧಿಕ ಲಾಭ ದೊರೆಯುವುದು ಸಾದ್ಯವಾಗುತ್ತಿಲ್ಲ. ಹಿಟ್ನಳ್ಳಿ ಪ್ರಾದೇಶಿಕ ಸಂಶೋಧನಾ ಕೇಂದ್ರದಲ್ಲಿ ವಿವಿಧ ತಳಿಯ ಜೋಳದ ಬೀಜಗಳನ್ನು ಉತ್ಪಾದಿಸಲಾಗುತ್ತಿದ್ದು, ರೈತರು ಅದರ ಪ್ರಯೋಜನ ಪಡೆಯಬೇಕು ಎಂದರು.ಕೃಷಿ ವಿವಿ ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಕ್ಷೇತ್ರೋತ್ಸವದಂತಹ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಅಲ್ಲದೇ ಜ.೨೧ ರಿಂದ ೨೩ ರ ವರೆಗೆ ಹಿಟ್ನಳ್ಳಿ ಫಾರ್ಮನಲ್ಲಿ ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ ಕುರಿತಂತೆ ಕೃಷಿಮೇಳ ಆಯೋಜಿಸಲಾಗಿದ್ದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಲಾಭ ಪಡೆಯಬೇಕು ಎಂದರು.
ಜೋಳ ವಿಭಾಗದ ಪ್ರಧಾನ ವಿಜ್ಞಾನಿ ಡಾ.ಎಸ್.ಎಸ್.ಕರಭಂಟನಾಳ ಮಾತನಾಡಿದರು. ಹಿರಿಯ ವಿಜ್ಞಾನಿ ಡಾ.ಎಸ್.ಎಂ.ವಸ್ತ್ರದ, ಡಾ.ಪ್ರಕಾಶ ಎಚ್.ಟಿ, ಡಾ.ಮಹಾಂತೇಶ ಗುಬ್ಬೆವಾಡ, ಗಂಗಶೆಟ್ಟಿ, ಬಸಪ್ಪ ಬಳ್ಳಾರಿ, ಮಲ್ಲನಗೌಡ ಪಾಟೀಲ, ವಿಠ್ಠಲ ಇಬ್ರಾಹಿಮ್‌ಪೂರ, ಸಂಗಣ್ಣ ಹೊಸೂರ, ಸದಪ್ಪ ಅಲ್ಲಿಬಾದಿ, ರಾಮನಗೌಡ ಪಾಟೀಲ ಸೇರಿದಂತೆ ಮುಂತಾದವರು ಇದ್ದರು.