ಬೇಲೂರು ತಾಲೂಕಲ್ಲಿ ಬಿಡದೇ ಸುರಿದ ಮಲೆ

| Published : Oct 21 2025, 01:00 AM IST

ಬೇಲೂರು ತಾಲೂಕಲ್ಲಿ ಬಿಡದೇ ಸುರಿದ ಮಲೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವಾರದಿಂದ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಹೆಬ್ಬಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಪಶು ಆಸ್ಪತ್ರೆ ಆವರಣ ಜಲಾವೃತವಾಗಿದ್ದು ವಿದ್ಯಾರ್ಥಿಗಳು ಹಾಗೂ ಪಶುಪಾಲಕರು ಗ್ರಾಮ ಪಂಚಾಯತಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕಟ್ಟಡ ಜೀರ್ಣಾವಸ್ಥೆಯಲ್ಲಿದ್ದು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮ ಪಂಚಾಯಿತಿಯವರು ಕುಂಟುನೆಪ ಹೇಳಿ ಕೈತೊಳೆದುಕೊಳ್ಳುತ್ತಿದ್ದಾರೆ ಹೊರತು ಶಾಶ್ವತ ಪರಿಹಾರಕ್ಕೆ ಸಂಬಂಧ ಪಟ್ಟ ಇಲಾಖೆ ಮತ್ತು ಜನಪ್ರತಿನಿಧಿಗಳು ಮುಂದಾಗಿಲ್ಲ ಎಂದು ಪೋಷಕರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಕಳೆದ ವಾರದಿಂದ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಹೆಬ್ಬಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಪಶು ಆಸ್ಪತ್ರೆ ಆವರಣ ಜಲಾವೃತವಾಗಿದ್ದು ವಿದ್ಯಾರ್ಥಿಗಳು ಹಾಗೂ ಪಶುಪಾಲಕರು ಗ್ರಾಮ ಪಂಚಾಯತಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಮೂರು ದಶಕಗಳ ಹಿಂದೆ ಪ್ರೌಢಶಾಲೆ ಕಟ್ಟಡವನ್ನು ಚಿಕ್ಕಕೆರೆ ಅಂಗಳದಲ್ಲಿ ನಿರ್ಮಿಸಲಾಗಿತ್ತು. ಮಳೆ ಬಂದಾಗ ಕೆರೆಗೆ ಹರಿದು ಬರುವ ನೀರು ಪ್ರೌಢಶಾಲೆ ಮತ್ತು ಪಶು ಚಿಕಿತ್ಸಾಲಯ ಕಟ್ಟಡದ ಆವರಣದೊಳಗೆ ಬರುವುದರಿಂದ ಜನರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಶಾಲಾ ಎಸ್‌ಡಿಎಂಸಿ ಮತ್ತು ಆಡಳಿತ ಮಂಡಳಿ ಶಾಲೆಗೆ ಮೂಲ ದಾಖಲಾತಿ ಪಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರೌಢಶಾಲೆ ಮತ್ತು ಪಶು ಚಿಕಿತ್ಸಾಲಯವನ್ನು ಸ್ಥಳಾಂತರಿಸಬೇಕು ಎಂದು ನಿರ್ಧರಿಸಿದ್ದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಾಧ್ಯವಾಗಿಲ್ಲ. ೮೫ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಹೆಬ್ಬಾಳು ಹೈಸ್ಕೂಲ್‌ ಉತ್ತಮವಾಗಿ ನಡೆಯುತ್ತಿದೆ. ಆದರೆ ಮೂಲಭೂತ ಸೌಲಭ್ಯ ಕೊರತೆ ಎದ್ದು ಕಾಣುತ್ತಿದೆ. ಕಟ್ಟಡ ಜೀರ್ಣಾವಸ್ಥೆಯಲ್ಲಿದ್ದು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮ ಪಂಚಾಯಿತಿಯವರು ಕುಂಟುನೆಪ ಹೇಳಿ ಕೈತೊಳೆದುಕೊಳ್ಳುತ್ತಿದ್ದಾರೆ ಹೊರತು ಶಾಶ್ವತ ಪರಿಹಾರಕ್ಕೆ ಸಂಬಂಧ ಪಟ್ಟ ಇಲಾಖೆ ಮತ್ತು ಜನಪ್ರತಿನಿಧಿಗಳು ಮುಂದಾಗಿಲ್ಲ ಎಂದು ಪೋಷಕರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಗ್ರಾಮಸ್ಥ ಹೆಬ್ಬಾಳು ಹಾಲಪ್ಪ ಮಾತನಾಡಿ, ಕಳೆದ ಮೂರು ದಶಕದ ಹಿಂದೆ ಪುರಾತನ ಕೆರೆ ಅಂಗಳಲ್ಲಿ ಹೈಸ್ಕೂಲ್ ಕಟ್ಟಡದ ನಿರ್ಮಾಣ ಮಾಡಲಾಗಿತ್ತು. ಆದರೆ ಈಗ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಇಂತಹ ದುಸ್ಥಿತಿಗೆ ಕಾರಣವಾಗಿದೆ. ಇಲ್ಲಿನ ಎಎಸ್‌ಡಿಎಂಸಿ ಶಾಲೆ ಹೆಸರಿಗೆ ಯಾವುದೇ ದಾಖಲೆ ಮಾಡಿಕೊಂಡಿಲ್ಲ, ಅಲ್ಲದೆ ಗ್ರಾಮ ಪಂಚಾಯಿತಿ ಕೂಡ ಗಮನ ಹರಿಸುತ್ತಿಲ್ಲ, ಶಾಲೆ ಸ್ಥಳಾಂತರವಾಗಬೇಕು ಇಲ್ಲವಾದರೆ ಮುಂದಿನ ದಿನದಲ್ಲಿ ಅನಾಹುತ ಖಚಿತ, ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಆಗ್ರಹಿಸಿದರು.

* ಹೇಳಿಕೆಹೆಬ್ಬಾಳು ಹೈಸ್ಕೂಲ್ ಮತ್ತು ಪಶುಚಿಕಿತ್ಸಾಲ ಕಟ್ಟಡ ಸಂಪೂರ್ಣ ಜಲಾವೃತದ ಬಗ್ಗೆ ಮಾಹಿತಿ ತಿಳಿದಿದ್ದು, ಸಂಬಂಧಪಟ್ಟವರು ಈಗಾಗಲೇ ಸ್ಥಳಕ್ಕೆ ಧಾವಿಸಲು ಸೂಚನೆ ನೀಡಲಾಗಿದೆ. ನಾನು ಶೀಘ್ರವೇ ಶಾಲೆ ಮತ್ತು ಪಶುಚಿಕಿತ್ಸಾಲಯ ಸ್ಥಳಾಂತರದ ಬಗ್ಗೆ ಗ್ರಾಮಸ್ಥರನ್ನು ಒಳಗೊಂಡ ಸಭೆಯನ್ನು ನಡೆಸಲಾಗುತ್ತದೆ.

- ಎಚ್.ಕೆ. ಸುರೇಶ್ ಶಾಸಕ