ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಕಾಂತರಾಜ ವರದಿ ಸ್ವೀಕರಿಸುವಂತೆ ಆಗ್ರಹಿಸಿ ಜ.28 ರಂದು ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಹೊರವಲಯದ ಬಸವಮೂರ್ತಿ ಮಾದಾರ ಚನ್ನಯ್ಯ ಪೀಠದ ಸಮೀಪದ ಮೈದಾನದಲ್ಲಿ ನಡೆಯುವ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಸಂವಿಧಾನ, ಸಾಮಾಜಿಕ ನ್ಯಾಯ, ಸಹಬಾಳ್ವೆ ಮತ್ತು ಸ್ವಾಭಿಮಾನದ ಸಂರಕ್ಷಣೆಗಾಗಿ ಶೋಷಿತ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದರು.ಕಾಂತರಾಜ ವರದಿ ಸ್ವೀಕರಿಸಿ ಅದರಲ್ಲಿನ ಅಂಶಗಳನ್ನು ಅನುಷ್ಠಾನ ಮಾಡಬೇಕು. ಕೇಂದ್ರ ಸರ್ಕಾರ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಮಾಡಬೇಕು. ಆರ್ಥಿಕ ದುರ್ಬಲ ವರ್ಗಗಳಿಗಿರುವ (ಇಡಬ್ಲ್ಯುಎಸ್) ಶೇ 10ರಷ್ಟು ಮೀಸಲಾತಿ ರದ್ದು ಮಾಡಬೇಕು. ಶೋಷಿತ ಸಮುದಾಯಗಳಿಗೆ ಮೀಸಲಾತಿ ಹಂಚಿಕೆ ಮಾಡಬೇಕು. ಲೋಕಸಭೆ, ವಿಧಾಸಭೆ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಬೇಕು. ಮಹಿಳಾ ರಾಜಕೀಯ ಒಳ ಮೀಸಲಾತಿ ಜಾರಿ ಮಾಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಶೇಕಡವಾರು ಪ್ರಮಾಣದಲ್ಲಿ ಮೀಸಲಾತಿ ಹೆಚ್ಚಿಸಬೇಕು. ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀಡಬೇಕು ಸೇರಿದಂತೆ ಹಲವಾರು ವಿಷಯದ ಬೇಡಿಕೆಗೆ ಸಮಾವೇಶದಲ್ಲಿ ಹಕ್ಕೋತ್ತಾಯ ಮಾಡಲಾಗುವುದು ಎಂದರು.
ಶೋಷಿತ ಸಮುದಾಯಗಳ ಏಳಿಗೆಗೆ ಬಿ.ಆರ್. ಅಂಬೇಡ್ಕರ್ ಸಂವಿಧಾನಿಕ ಅವಕಾಶಗಳನ್ನು ಕಲ್ಪಿಸಿದ್ದಾರೆ. ಇದನ್ನು ಸಹಿಸದ ಬಲಾಢ್ಯರು ತಳ ಸಮುದಾಯದ ವಿರುದ್ಧ ಹಲವು ನೀತಿಗಳನ್ನು ಜಾರಿಗೊಳಿಸಲು ಹವಣಿಸುತ್ತಿದ್ದಾರೆ. ಮುಸ್ಲಿಮರೆಂಬ ಬೆದರುಗೊಂಬೆಯ ಭಯ ಸೃಷ್ಟಿಸಿ ಸ್ವಾರ್ಥ ಸಾಧನೆಗೆ ಮುಂದಾಗಿದ್ದಾರೆ. ಶೋಷಿತ ಸಮುದಾಯದ ಯುವಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನದ ಉಳಿವು, ಸಾಮಾಜಿಕ ನ್ಯಾಯ, ಸಹಬಾಳ್ವೆಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.ಈ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ರಾಜ್ಯಪದಾಧಿಕಾರಿ ಮಾವಳ್ಳಿ ಶಂಕರ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಎಸ್.ಎಂ.ಪಾಟೀಲ ಗಣಿಯಾರ, ನಾಗರಾಜ ಲಂಬು ಸೇರಿದಂತೆ ಮುಂತಾದವರು ಇದ್ದರು.
ಕೋಟ್
ಕಾಂತರಾಜ ವರದಿ ಸ್ವೀಕರಿಸಿ ಅದರಲ್ಲಿನ ಅಂಶಗಳನ್ನು ಅನುಷ್ಠಾನ ಮಾಡಬೇಕು. ಕೇಂದ್ರ ಸರ್ಕಾರ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಮಾಡಬೇಕು. ಆರ್ಥಿಕ ದುರ್ಬಲ ವರ್ಗಗಳಿಗಿರುವ (ಇಡಬ್ಲ್ಯುಎಸ್) ಶೇ 10ರಷ್ಟು ಮೀಸಲಾತಿ ರದ್ದು ಮಾಡಬೇಕು. ಶೋಷಿತ ಸಮುದಾಯಗಳಿಗೆ ಮೀಸಲಾತಿ ಹಂಚಿಕೆ ಮಾಡಬೇಕು. ಲೋಕಸಭೆ, ವಿಧಾಸಭೆ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಬೇಕು.ಕೆ.ಎಂ.ರಾಮಚಂದ್ರಪ್ಪ. ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ