ಹಾಸನದಲ್ಲಿ ಬೃಹತ್ ತಿರಂಗಾ ಯಾತ್ರೆ

| Published : May 21 2025, 12:10 AM IST

ಸಾರಾಂಶ

ಭಾರತದ ಸೇನೆಯೊಂದಿಗೆ ರಾಷ್ಟ್ರ ರಕ್ಷಣೆಗಾಗಿ ಘೋಷಣೆಯೊಂದಿಗೆ ನಗರದ ಸಾಲಗಾಮೆ ರಸ್ತೆ, ಜಿಲ್ಲಾ ಕ್ರೀಡಾಂಗಣದಿಂದ ಹೊರಟ ಬೃಹತ್ ಆಪರೇಷನ್ ಸಿಂದೂರ ತಿರಂಗಾ ಯಾತ್ರೆಯ ವೇಳೆ ತಡೆ ರಹಿತ ಮಳೆ ಬರುತ್ತಿದ್ದರೂ ಯಾವುದನ್ನು ಲೆಕ್ಕಿಸದೇ ಮಳೆಯಲ್ಲಿಯೇ ಸೈನಿಕರು, ಮಾಜಿ ಸೈನಿಕರು, ವೀರ ನಾರಿಯರು, ವಿದ್ಯಾರ್ಥಿಗಳು, ನಾಗರಿಕರು ಪಾಲ್ಗೊಂಡು ದೇಶದ ಧ್ವಜದೊಂದಿಗೆ ಘೋಷಣೆ ಕೂಗಿ ಹೊರಟರು.

ಕನ್ನಡಪ್ರಭ ವಾರ್ತೆ ಹಾಸನ

"ಆಪರೇಷನ್ ಸಿಂದೂರ " ಹೆಸರಿನಲ್ಲಿ ಭಯೋತ್ಪಾದನೆ ವಿರುದ್ಧ ಭಾರತೀಯ ಸೇನೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ಸಂಹಾರ ಮಾಡಿದ ಕಾರ್ಯಾಚರಣೆ ನಡೆಸಿದ ಭಾರತೀಯ ಸೈನಿಕರಿಗೆ ಬಲ ಮತ್ತು ಮಾನಸಿಕ ಸ್ಥೈರ್ಯ ತುಂಬಲು ನಗರದಲ್ಲಿ ಮಂಗಳವಾರ ಒಂದು ಸಾವಿರ ಅಡಿ ಉದ್ದದ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಭಾರತದ ಸೇನೆಯೊಂದಿಗೆ ರಾಷ್ಟ್ರ ರಕ್ಷಣೆಗಾಗಿ ಘೋಷಣೆಯೊಂದಿಗೆ ನಗರದ ಸಾಲಗಾಮೆ ರಸ್ತೆ, ಜಿಲ್ಲಾ ಕ್ರೀಡಾಂಗಣದಿಂದ ಹೊರಟ ಬೃಹತ್ ಆಪರೇಷನ್ ಸಿಂದೂರ ತಿರಂಗಾ ಯಾತ್ರೆಯ ವೇಳೆ ತಡೆ ರಹಿತ ಮಳೆ ಬರುತ್ತಿದ್ದರೂ ಯಾವುದನ್ನು ಲೆಕ್ಕಿಸದೇ ಮಳೆಯಲ್ಲಿಯೇ ಸೈನಿಕರು, ಮಾಜಿ ಸೈನಿಕರು, ವೀರ ನಾರಿಯರು, ವಿದ್ಯಾರ್ಥಿಗಳು, ನಾಗರಿಕರು ಪಾಲ್ಗೊಂಡು ದೇಶದ ಧ್ವಜದೊಂದಿಗೆ ಘೋಷಣೆ ಕೂಗಿ ಹೊರಟರು. ಇದೇ ವೇಳೆ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಮಾಧ್ಯಮದೊಂದಿಗೆ ಮಾತನಾಡಿ, ಯೋಧರಿಗೆ ನೈತಿಕ ಸ್ಥೈರ್ಯ ತುಂಬಲು ಹಾಸನದ ನಾಗರಿಕರು, ವಿದ್ಯಾರ್ಥಿಗಳೂ, ಸಂಘ, ಸಂಸ್ಥೆಗಳು ಸೇರಿ ನಾವು ತಿರಂಗ ಯಾತ್ರೆಯನ್ನು ಆಯೋಜಿಸಲಾಗಿದ್ದು, ನಾವು ಕೈಜೋಡಿಸುವ ಕೆಲಸ ಮಾಡಿದ್ದೇವೆ. ಮಳೆಯ ನಡುವೆಯೂ ಕೂಡ ಯುವ ಸಮೂಹ ರಸ್ತೆಗಳಿದು ದೇಶ ಕಾಯುವ ಸೈನಿಕರ ಬಲ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಬೆಂಬಲ ಕೊಡಲು ಯಾತ್ರೆ ಮಾಡಲಾಗುತ್ತಿದೆ ಎಂದರು. ದೇಶದ ಯುವಕರಲ್ಲಿ ಹೆಚ್ಚಿನ ರಾಷ್ಟ್ರಭಕ್ತಿ, ಪ್ರೇಮ ಬರಲಿ, ಅದರ ಕಡೆ ಹೆಚ್ಚು ಕಾಳಜಿವಹಿಸುವುದು ಎಲ್ಲಾ ನಾಗರಿಕರಲ್ಲೂ ಇದೆ. ಈ ಸಂದರ್ಭದಲ್ಲಿ ರಾಜಕಾರಣ ಮಾಡನಾಡುವುದಿಲ್ಲ ಇದು ಸಂದರ್ಭವಲ್ಲ. ಜವಾಬ್ದಾರಿಯುತ ನಾಗರಿಕನಾಗಿ ಹಾಸನದ ಯುವ ಸಮೂಹದೊಂದಿಗೆ ಹೆಜ್ಜೆ ಹಾಕುತ್ತಿದ್ದೇವೆ. ಕದನ ವಿರಾಮ ಎಲ್ಲಾ ಅಂತಾರಾಷ್ಟ್ರೀಯ ವಿಚಾರ ಆಗಿರುವುದರಿಂದ ನಮ್ಮ ರಾಷ್ಟ್ರೀಯ ನಾಯಕರು ಮಾತನಾಡುತ್ತಾರೆ. ಹಾಸನದಲ್ಲಿ ನಾವು ಮಾತನಾಡುವುದು ಸಮಂಜಸವಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಷ್ಟ್ರೀಯ ಭದ್ರತೆ ದೃಷ್ಠಿಯಿಂದ ನಾಗರಿಕ ವೇದಿಕೆಯಿಂದ ಆಪರೇಷನ್ ಸಿಂದೂರ ಎನ್ನುವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಮ್ಮ ಸೈನ್ಯ ಮಾಡಿರುವುದರಿಂದ ಬೃಹತ್ ತಿರಂಗಾ ಯಾತ್ರೆಯನ್ನು ಹಾಸನದಲ್ಲಿ ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿದೆ. ದೇಶಕ್ಕಾಗಿ ಮಾಡಿರುವ ಅಪಾರವಾದ ಸೇವೆಯನ್ನು ಗೌರವಿಸುವ ಕೆಲಸವನ್ನು ಈ ದೇಶದ ಪ್ರತಿ ನಾಗರಿಕರು ಮಾಡಬೇಕಾಗಿರುವ ಕರ್ತವ್ಯವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಾಜಿ ಸೈನಿಕರು, ವಿವಿಧ ಸಂಘಟನೆಯ ಮುಖಂಡರು ಕೂಡ ತಾವಾಗೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದರು. ಇಷ್ಟೊಂದು ಮಳೆ ಇದ್ದರೂ ಕೂಡ ಯಾವುದನ್ನು ಲೆಕ್ಕಿಸದೇ ಬರುವುದನ್ನ ನೋಡಿದರೇ ಒಂದು ಕಡೆ ಸೈನಿಕರು ಮೇಲಿನ ಭಕ್ತಿ ಹಾಗೂ ನರೇಂದ್ರ ಮೋದಿಯವರ ಮೇಲಿರುವ ಅಪಾರವಾದ ಅಭಿಮಾನ ಗೊತ್ತಾಗುತ್ತದೆ. ಈ ಕಾರ್ಯಕ್ರಮ ಯಶಸ್ವಿಯಾಗಿ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧೇಶ್ ನಾಗೇಂದ್ರ ಮಾತನಾಡಿ, ಏಪ್ರಿಲ್ ೨೨ರಂದು ಪಾಕಿಸ್ತಾನಿ ಸರ್ಕಾರಿ ಪೋಷಿತ ಉಗ್ರಗಾಮಿಗಳ ದಾಳಿಯಿಂದ ನಮ್ಮ ಭಾರತೀಯ ನಾಗರಿಕರು ಹುತಾತ್ಮರಾಗಿದ್ದಾರೆ. ಕಾಶ್ಮೀರದ ಸೊಬಗನ್ನು ಸವಿಯಲು ಕುಟುಂಬ ಸಮೇತರಾಗಿ ಹೋದಾಗ ಈ ದುರ್ಘಟನೆ ಸಂಭವಿಸಿದೆ. ನಂತರ ನಮ್ಮ ಭಾರತವು ಆಪರೇಷನ್ ಸಿಂದೂರ ಹೆಸರಿನಲ್ಲಿ ತಕ್ಕ ಉತ್ತರ ನೀಡಿದೆ. ನಾವು ಟಾರ್ಗೆಟ್ ಮಾಡಿರುವುದು ಉಗ್ರಗಾಮಿಗಳ ತಾಣಗಳು, ಆದರೆ ಪಾಕಿಸ್ತಾನಗಳು ಅರಿಯದೇ ಮತ್ತೆ ಸಮರ್ಥನೆ ಮಾಡಿಕೊಂಡು ಕ್ಷಿಪಣಿಗಳನ್ನು ಬಿಡುವ ಕೆಲಸ ಮಾಡಿದೆ. ಆದ್ರೆ ನಮ್ಮ ವೀರಯೋಧರು ತಡೆ ಹಿಡಿದಿದ್ದಾರೆ ಎಂದರು. ಈ ನಿಟ್ಟಿನಲ್ಲಿ ವೀರಯೋಧರ ಮಾನಸಿಕ ಸ್ಥೈರ್ಯ ತುಂಬಲು ಹಾಗೂ ರಾಷ್ಟ್ರದ ಐಕ್ಯತಾ ಸುಸಂದರ್ಭದಲ್ಲಿ ನಾವು ಎಲ್ಲಾರೂ ನಾಗರಿಕರೂ ಸೇರಿ ನಮ್ಮೊಂದಿಗೆ ನಿವೃತ್ತ ಯೋಧರು, ಅವರ ಕುಟುಂಬದವರು, ತಾಯಾಂದಿರುವ ಹೆಚ್ಚಿನ ಸಂಖ್ಯೆಯಲ್ಲಿ ಈ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಲಾಗಿದೆ. ಮಳೆ ಬಂದರೂ ಈ ಯಾತ್ರೆ ನಡೆದಿದೆ. ಹೇಮಾವತಿ ಪ್ರತಿಮೆ ಬಳಿ ಕೊನೆಗೊಳಿಸಿ ರಾಷ್ಟ್ರಕ್ಕೆ ಸಂದೇಶ ಸಾರಿದ್ದಾರೆ ಎಂದು ಹೇಳಿದರು. ತಿರಂಗ ಯಾತ್ರೆ ಆಪರೇಷನ್ ಸಿಂದೂರದಲ್ಲಿ ಮಹೇಶ್ವರ ಶಿವಚಾರ್ಯ ಸ್ವಾಮೀಜಿ, ಪುಷ್ಪಗಿರಿ ಮಠದ ಸೋಮಶೇಖರ ಸ್ವಾಮೀಜಿ, ಕೆಸವತ್ತೂರು ಬಸವರಾಜೇಂದ್ರ ಸ್ವಾಮೀಜಿ, ದೊಡ್ಡ ಮಠ ಅರಕಲಗೂಡಿನ ಮಲ್ಲಿಕಾರ್ಜುನ ಸ್ವಾಮೀಜಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಆರ್‌.ಎಸ್.ಎಸ್. ಮುಖಂಡರಾದ ವಿಜಯಕುಮಾರ್, ಜಿಲ್ಲಾ ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಪ್ರದೀಪ್ ಸಾಗರ್, ಬಿ. ದೊರೆರಾಜು, ಬಿ.ಕೆ. ವೆಂಕಟೇಶ್, ಪ್ರಭಾಕರ್, ಅಖಿಲ ಭಾರತ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಲೋಕೇಶ್, ಎಚ್.ಎನ್. ನಾಗೇಶ್, ಚನ್ನಕೇಶವ, ಹರ್ಷಿತ್, ವೇದಾವತಿ, ವಿಜಯಲಕ್ಷ್ಮಿ ಅಂಜನಪ್ಪ, ರತ್ನಮ್ಮ, ರಾಜಕುಮಾರ್, ಶೋಭನ್ ಬಾಬು, ನಗರಾಧ್ಯಕ್ಷ ಯೋಗೀಶ್, ಮಂಜು ಇತರರು ಉಪಸ್ಥಿತರಿದ್ದರು.