ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ಕೇವಲ 17 ತಿಂಗಳ ಅವಧಿಯಲ್ಲಿ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಸಿಂದಗಿ ನಗರದ ಅಭಿವೃದ್ಧಿಗಾಗಿ ಅನುದಾನ ಮಂಜೂರು ಮಾಡಿಸಿ ಕಾಮಗಾರಿ ಕೈಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದ ಬಳಿ ಭಾನುವಾರ ಲೋಕೋಪಯೋಗಿ ಇಲಾಖೆ ಆಯೋಜಿಸಿದ್ದ 2023-24ನೇ ಸಾಲಿನ ಅಪೆಂಡಿಕ್ಸ್-ಇ ಯೋಜನೆ ಅಡಿಯಲ್ಲಿ ಸುಮಾರು ₹5 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ-50ರ ವರ್ತುಲ ರಸ್ತೆಯಿಂದ ಡೋಹರ್ ಕಕ್ಕಯ್ಯ ವೃತ್ತ, ಟಿಪ್ಪು ವೃತ್ತದವರೆಗೆ ಮತ್ತು ರಾಜ್ಯ ಹೆದ್ದಾರಿ -16 ರಿಂದ ಶ್ರೀ ಬಸವೇಶ್ವರ ವೃತ್ತ, ಶ್ರೀ ಕನಕದಾಸ ವೃತ್ತ ರಾಷ್ಟ್ರೀಯ ಹೆದ್ದಾರಿ 50ರವರೆಗೆ ಸುಮಾರು 6.50 ಕಿ.ಮೀ ಅಲಂಕಾರಿಕ ಬೀದಿ ದೀಪಗಳ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ₹86 ಕೋಟಿ ಮಂಜೂರು ಮಾಡಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದು ನನಗೆ ಸಂತಸವಾಗಿದೆ ಎಂದರು.
ಅಮೃತ್ -2 ಯೋಜನೆ ಅಡಿಯಲ್ಲಿ ಸುಮಾರು ₹36 ಕೋಟಿ ಅನುದಾನದಲ್ಲಿ ಸಿಂದಗಿ ನಗರಕ್ಕೆ 24×7 ಕುಡಿಯುವ ನೀರಿನ ಯೋಜನೆ, ಸಿಂದಗಿ ನಗರದ 52 ಎಕರೆ ಪ್ರದೇಶದಲ್ಲಿ 1994ರಲ್ಲಿ ದಿ.ಎಂ.ಸಿ.ಮನಗೂಳಿ ಅವರ ಅಧಿಕಾರಾವಧಿಯಲ್ಲಿ ನಿರ್ಮಾಣಗೊಂಡ ಕೆರೆಯನ್ನು ₹3.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದು ಮತ್ತು ಕೆರೆ ಪ್ರದೇಶದಲ್ಲಿ ಸಿಂದಗಿಯ ಸಿರಿ ಲಿಂ. ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಮೂರ್ತಿ ಅನಾವರಣ, ಎರಡು ಕೋಟಿ ವೆಚ್ಚದಲ್ಲಿ ಗಾಂಧಿ ವೃತ್ತದಿಂದ ಆಲಮೇಲ ರಸ್ತೆಯವರೆಗೆ ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ಸಿಂದಗಿ ನಗರದ ಅಭಿವೃದ್ಧಿಗಾಗಿ ಸುಮಾರು 39 ಕಾಮಗಾರಿಗಳು ಮಂಜೂರಾತಿ ಪಡೆದುಕೊಂಡಿದ್ದಾಗಿ ತಿಳಿಸಿದರು.ನಗರದಲ್ಲಿ 274 ಹೊಸ ಅಲಂಕಾರಿಕ ವಿದ್ಯುತ್ ಕಂಬಗಳನ್ನು ಅಳವಡಿಸುವ ಮೂಲಕ ಜನ ನೀಡಿದ ಅಧಿಕಾರವನ್ನು ಜನರ ಕಲ್ಯಾಣಕ್ಕಾಗಿ ಬಳಸಲು ಸದಾ ಸಿದ್ದನಿದ್ದೇನೆ. ಪಟ್ಟಣವಲ್ಲದೆ ಸಿಂದಗಿ ಮತಕ್ಷೇತ್ರವನ್ನು ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪವನ್ನು ಹೊಂದಿದ್ದಾಗಿ ಅವರು ತಿಳಿಸಿದರು.
ಈ ವೇಳೆ ಪುರಸಭೆಯ ಮಾಜಿ ಅಧ್ಯಕ್ಷ ಹನುಮಂತ ಸುಣಗಾರ ಮಾತನಾಡಿದರು. ಸಾನಿಧ್ಯ ವಹಿಸಿದ್ದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಮಾತನಾಡಿ, ದಿ.ಎಂ.ಸಿ.ಮನಗೂಳಿ ಅವರು ತಾವು ಇರುವವರೆಗೂ ಜನರ ಕಲ್ಯಾಣಕ್ಕಾಗಿ ದುಡಿದವರು. ಅವರ ಪುತ್ರ ಶಾಸಕ ಅಶೋಕ್ ಮನಗೂಳಿ ಅವರು ಈ ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪ ತೊಟ್ಟಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಕಂಕಣ ಬದ್ಧರಾಗಬೇಕು ಎಂದು ವಿಶ್ವಾಸ ವ್ಯಕ್ತಪಡಿಸಿದರು.ವೇದಿಕೆ ಮೇಲೆ ಕೊಣ್ಣೂರಿನ ಹೊರಗಿನ ಕಲ್ಯಾಣ ಮಠದ ಡಾ.ವಿಶ್ವ ಪ್ರಭುದೇವ ಶಿವಾಚಾರ್ಯರು, ಆಸಂಗಿಹಾಳದ ಪೂಜ್ಯರು, ಪುರಸಭೆಯ ಅಧ್ಯಕ್ಷ ಶಾಂತವೀರ್ ಬಿರಾದಾರ್, ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ್, ಸದಸ್ಯರಾದ ಡಾ.ಶಾಂತವೀರ ಮನಗೂಳಿ, ಭಾಷಾಸಾಬ ತಾಂಬೋಳಿ, ಬಸವರಾಜ್ ಯಾರನಾಳ, ಸಂದೀಪ್ ಚೌರ್, ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ್ ಕಾಂಬಳೆ, ಕೆಡಿಪಿ ಸದಸ್ಯ ಮಹಾನಂದ ಬೊಮ್ಮಣ್ಣಿ, ಸಿದ್ದು ಮಲ್ಲೇದ, ಚೆನ್ನಪ್ಪ ಗೋಣಿ, ಇಲಾಖೆಯ ಅರುಣ್ ಕುಮಾರ್ ವಡಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.