ಸಾರಾಂಶ
ಮಾನ್ಯ ಗೌರವಾನ್ವಿತ ಸುಮಲತಾ ಅವರಿಗೆ ನಾನು ಕೇಳಿಕೊಳ್ಳುತ್ತೇನೆ. ನೀವೇ ಬಂದು ಅಂಡರ್ ಪಾಸ್ ಮಾಡಿಸಿ ಕ್ರೆಡಿಟ್ ತಗೋದುಕೊಳ್ಳಿ. ಅಂಡರ್ ಪಾಸ್ ಮಾಡಿಸಿ ಉದ್ಘಾಟನೆಗೆ ನಾನೇ ನನ್ನ ಹಣದಲ್ಲಿ ಕ್ರೆಡಿಟ್ ಗೋಸ್ಟ್ ಟು ಮಾನ್ಯ ಸುಮಲತಾ ಅವರಿಗೆ ಅಂತ ಫ್ಲೆಕ್ಸ್ ಹಾಕಿಸುತ್ತೇನೆ.
ಕನ್ನಡಪ್ರಭ ವಾರ್ತೆ ರಾಮನಗರ/ ಮಂಡ್ಯ
ಮಂಡ್ಯ ತಾಲೂಕಿನ ಹನಕೆರೆ- ಗೌಡಗೆರೆ ಗೇಟ್ ಬಳಿ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಿಸುವುದಾಗಿ ಸಚಿವ ಚಲುವರಾಯಸ್ವಾಮಿ ಭರವಸೆ ಕೊಟ್ಟಿದ್ದಾರೆ. ಅವರಿಗೂ ಒಂದು ಅವಕಾಶ ಕೊಡುತ್ತೇವೆ. ಕೆಲಸ ಆಗದಿದ್ದರೆ ಮತ್ತೆ ಉಪವಾಸ ಸತ್ಯಾಗ್ರಹ ಕೂರುತ್ತೇವೆ ಎಂದು ಮಂಡ್ಯ ಕ್ಷೇತ್ರ ಶಾಸಕ ಗಣಿಗ ರವಿಕುಮಾರ್ ಎಚ್ಚರಿಕೆ ನೀಡಿದರು.ಬಸವನಪುರದಲ್ಲಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಕಚೇರಿ ಎದುರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿರವರ ಮೇಲೆ ಸಂಪೂರ್ಣ ನಂಬಿಕೆ ಇದೆ. ಈ ಕಾರಣದಿಂದಾಗಿಯೇ ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದೇವೆ ಎಂದರು.ಹನಕೆರೆ ಬಳಿ ಮೇಲ್ಸೇತುವೆ ಮಾಡುವುದನ್ನು ಮೊದಲು ಸ್ಥಗಿತ ಮಾಡಬೇಕು. ಮೇಲ್ಸೇತುವೆ ಮಾಡಿ ಜನರನ್ನು ಯಾಮಾರಿಸಲು ಅಧಿಕಾರಿಗಳು ಪ್ರಯತ್ನಿಸಿದರು. ಆದರೆ, ರೈತರು ಆಕ್ರೋಶಗೊಂಡರೆ ಏನಾಗುತ್ತದೆ ಅಂತ ಈಗ ಗೊತ್ತಾಗಿದೆ. ಮನಸ್ಸು ಮಾಡಿದ್ದರೆ 50 ಸಾವಿರ ಜನರನ್ನು ಕರೆತಂದು ಎಕ್ಸ್ ಪ್ರೆಸ್ ವೇ ನಲ್ಲಿ ಪ್ರತಿಭಟನೆ ಮಾಡಬಹುದಿತ್ತು. ಜನರಿಗೆ ತೊಂದರೆ ಆಗಬಾರದೆಂಬ ಕಾರಣದಿಂದ ಗಾಂಧಿ ಮಾರ್ಗದಲ್ಲಿ ಪ್ರತಿಭಟನೆ ಮಾಡಿದ್ದೇವೆ ಎಂದು ತಿಳಿಸಿದರು.ಅಲ್ಲಿ ನಾಲ್ಕು ಜನ ಸತ್ತಾಗ, ಜನರ ಮೇಲೆ ಲಾಠಿ ಪ್ರಹಾರ ನಡೆದಾಗ ಬಂದು ಹೋರಾಟ ಮಾಡಲಿಲ್ಲ. ನಾನೂ ದಿನ ಪತ್ರ ಬರೆಯುತ್ತೇನೆ. ಕೊಟ್ಟ ಪತ್ರಗಳಿಗೆಲ್ಲ ಅನುದಾನ ಬರುವುದಿಲ್ಲ. ಸಂಸದೆ ಸುಮಲತಾ ಲೆಟರ್ ಕೊಟ್ಟಿದ್ದೀನಿ ಅನ್ನುತ್ತಿದ್ದರೆ ಆಗಲ್ಲ. ಮಾನ್ಯ ಗೌರವಾನ್ವಿತ ಸುಮಲತಾ ಅವರಿಗೆ ನಾನು ಕೇಳಿಕೊಳ್ಳುತ್ತೇನೆ. ನೀವೇ ಬಂದು ಅಂಡರ್ ಪಾಸ್ ಮಾಡಿಸಿ ಕ್ರೆಡಿಟ್ ತಗೋದುಕೊಳ್ಳಿ. ಅಂಡರ್ ಪಾಸ್ ಮಾಡಿಸಿ ಉದ್ಘಾಟನೆಗೆ ನಾನೇ ನನ್ನ ಹಣದಲ್ಲಿ ಕ್ರೆಡಿಟ್ ಗೋಸ್ಟ್ ಟು ಮಾನ್ಯ ಸುಮಲತಾ ಅವರಿಗೆ ಅಂತ ಫ್ಲೆಕ್ಸ್ ಹಾಕಿಸುತ್ತೇನೆ ಎಂದು ರವಿ ಟಾಂಗ್ ನೀಡಿದರು.