ಮಾದರಿ ಬ್ಯಾಂಕ್‌ ಮಾಡುತ್ತೇನೆ

| Published : Apr 06 2024, 12:50 AM IST

ಸಾರಾಂಶ

ನಾನು ಇಂದು ಇಷ್ಟೆಲ್ಲ ಕ್ಷೇತ್ರಗಳಲ್ಲಿ ಬೆಳೆಯಲು ಕಾರಣ ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಜನರು

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಕೆಂಗೇರಿಮಡ್ಡಿಯ ಸಕಲ ಜನತೆಗೆ ನಾನು ಚಿರಋಣಿ. ನನ್ನ ಪ್ರತಿ ಕೆಲಸಗಳಿಗೆ ನೀವು ಬೆಂಬಲಿಸುತ್ತ ಬಂದಿದ್ದೀರಿ. ಇನ್ನೂ ಹೆಚ್ಚಿನ ಮಟ್ಟಿಗೆ ನಿಮ್ಮ ಸೇವೆ ಮಾಡುವ ಶಕ್ತಿಯನ್ನು ದೇವರು ನನಗೆ ನೀಡಲಿ ಎಂದು ಬೇಡಿಕೊಳ್ಳುವೆ ಎಂದು ಮಹಾಲಿಂಗಪುರ ಅರ್ಬನ್ ಬ್ಯಾಂಕಿನ ನೂತನ ಅಧ್ಯಕ್ಷ ಶೇಖರ ಅಂಗಡಿ ಹೇಳಿದರು.

ಸ್ಥಳೀಯ ಕೆಂಗೇರಿಮಡ್ಡಿ ಬಡಾವಣೆಯ 13 ಮತ್ತು 14 ನೇ ವಾರ್ಡಿನ ನಾಗರಿಕರ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಇಂದು ಇಷ್ಟೆಲ್ಲ ಕ್ಷೇತ್ರಗಳಲ್ಲಿ ಬೆಳೆಯಲು ಕಾರಣ ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಜನರು. ಈ ಜನರ ಸೇವೆ ಮಾಡುವ ಭಾಗ್ಯ ನನಗೆ ದೊರೆತಿರುವುದು ಆ ಮಹಾಲಿಂಗೇಶ್ವರ ದೇವರ ಆಶೀರ್ವಾದ ಸಿಕ್ಕಂತೆ ಆಗಿದೆ. ಮಹಾಲಿಂಗಪುರ ಅರ್ಬನ್ ಬ್ಯಾಂಕನ್ನು ಆದಷ್ಟು ಬೇಗ ಅಭಿವೃದ್ಧಿಗೆ ನನ್ನ ಪ್ರಾಮಾಣಿಕ ಪ್ರಯತ್ನ ಇರುತ್ತದೆ. ಜನರಿಂದ ಜನರಿಗಾಗಿ ಸಿಕ್ಕ ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಮಾದರಿ ಬ್ಯಾಂಕ್‌ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಯುವ ಮುಖಂಡ ಅಲ್ಲಪ್ಪ ಲೋಕಾಪುರ ಮಾತನಾಡಿ, ಶೇಖರ್ ಅಂಗಡಿಯವರು ಕೆಂಗೇರಿಮಡ್ಡಿ ಬಡಾವಣೆಯ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಬಡಾವಣೆಯ ಮೂಲ ಸೌಕರ್ಯ ಒದಗಿಸಿ ಬಡವರ ಕಣ್ಮಣಿಯಾಗಿದ್ದಾರೆ. ಪುರಸಭೆಯಿಂದ ಬರುವ ಪ್ರತಿ ಯೋಜನೆಗಳನ್ನು ತಮ್ಮ ವಾರ್ಡಿನ ಜನರಿಗೆ ಸರಿಯಾಗಿ ಹಂಚಿಕೆ ಮಾಡುವಲ್ಲಿ ಶೇಖರ ಅಂಗಡಿಯವರ ಪಾತ್ರ ಮಹತ್ವದ್ದಾಗಿದೆ. ಅಲ್ಲದೆ ಎಲ್ಲರ ಜೊತೆ ಒಂದಾಗಿ ಎಲ್ಲರನ್ನು ಒಂದೆ ತೆರನಾಗಿ ಕಾಣುತ್ತಾರೆ. ಇವರು ಇರುವವರೆಗೆ ನಮ್ಮ ವಾರ್ಡಿನ ಜನರಿಗೆ ಯಾವುದೇ ತೊಂದರೆ ಬರುವುದಿಲ್ಲ ಎಂದರು.

ಪತ್ರಕರ್ತ ಜಯರಾಮ ಶೆಟ್ಟಿ ಮಾತನಾಡಿ, ಶೇಖರ ಅಂಗಡಿಯವರನ್ನು ನಾನು ಸುಮಾರು ವರ್ಷಗಳಿಂದ ಬಲ್ಲೆ. ಇವರು ನನ್ನ ಆತ್ಮೀಯ ಸ್ನೇಹಿತರು ಹೌದು. ಇವರ ಸಾಮಾಜಿಕ ಕಳಕಳಿ ಮತ್ತು ಅಭಿವೃದ್ಧಿ ಕಾರ್ಯಗಳು ಎದ್ದು ಕಾಣುವಂತಾಗಿವೆ. ಸಮಾಜದಲ್ಲಿ ಒಬ್ಬ ವ್ಯೆಕ್ತಿ ಸಾರ್ವಜನಿಕರೊಂದಿಗೆ ಹೇಗೆ ಬೆರೆಯಬೇಕು, ಅಧಿಕಾರ ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಇವರನ್ನು ನೋಡಿ ಕಲಿಯಬೇಕು, ಒಟ್ಟಿನಲ್ಲಿ ಸಾರ್ವಜನಿಕ ಸೇವೆಗಳು ತನ್ನ ವಾರ್ಡಿನ ಜನರಿಗೆ ಹೆಚ್ಚು ಸಿಗಬೇಕು ಎಂಬ ಹೆಬ್ಬಯಕೆ ಹೊಂದಿದ ಪುರಸಭೆ ಸದಸ್ಯ. ಅದೇ ರೀತಿಯಲ್ಲಿ ಮಹಾಲಿಂಗಪುರ ಅರ್ಬನ್‌ ಬ್ಯಾಂಕನ್ನು ಕೂಡ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ನೀಡುವ ಮೂಲಕ ಅಭಿವೃದ್ಧಿ ಪಡಿಸುತ್ತಾರೆ ಎಂಬ ನಂಬಿಕೆ ನಮಗಿದೆ ಎಂದರು.

ಪಿಕೆಪಿಎಸ್ ನಿರ್ದೇಶಕ ಈರಪ್ಪ ದಿನ್ನಿಮನಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಲಕ್ಷ್ಮಣ ಪಾಟೀಲ, ಗಂಗಪ್ಪ ದಿನ್ನಿಮನಿ, ಮುತ್ತಪ್ಪ ಕುಂದ್ರಾಳ, ಹರೀಶ ನಾಯಕ, ಬಸವರಾಜ ಪರೀಟ, ಚನ್ನಪ್ಪ ಬಳಗಾರ, ಸಿದ್ದು ಪಾಟೀಲ, ಶ್ರೀಶೈಲ ದೊಡ್ಡಮನಿ, ಮಹಾದೇವ ಢವಳೇಶ್ವರ, ನಾಗಲಿಂಗ ಬಡಿಗೇರ, ದೀಪು ಮೇತ್ರಿ, ಮಂಜು ಭಜಂತ್ರಿ, ಮಹಾಲಿಂಗ ಮಾವಿನಹಿಂಡಿ, ಸುರೇಶ ಗೌಂಡಿ, ಶಿವಾನಂದ ಚಿಚಖಂಡಿ, ಮಲ್ಲಪ್ಪ ಚಿಚಖಂಡಿ, ಪರಶುರಾಮ ಶಿವಣಗಿ, ಇತರರಿದ್ದರು. ವರದಿಗಾರ ರಾಜೇಂದ್ರ ನಾವಿ ಸ್ವಾಗತಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು. ಫೋಟೋ : 5 ಎಂ.ಎಲ್.ಪಿ 3ಮಹಾಲಿಂಗಪುರ : ಕೆಂಗೇರಿಮಡ್ಡಿಯ ವಾರ್ಡ ಜನರು ಅರ್ಭನ ಬ್ಯಾಂಕಿಗೆ ನೂತನವಾಗಿ ಅಧ್ಯಕ್ಷರಾದ ಶೇಖರ ಅಂಗಡಿಯವರನ್ನು ಸನ್ಮಾನಿಸಿ ಗೌರವಿಸಿದರು.