ದುಷ್ಟ ಶಾಸಕರು ಯಾರೆಂದು ಜನರಿಗೆ ಗೊತ್ತು: ಶಾಸಕ ಪಿ.ಎಂ.ನರೇಂದ್ರಸ್ವಾಮಿ

| Published : Apr 06 2024, 12:50 AM IST

ದುಷ್ಟ ಶಾಸಕರು ಯಾರೆಂದು ಜನರಿಗೆ ಗೊತ್ತು: ಶಾಸಕ ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಯಾರು ಕಾರಣ?., ಆ ಚುನಾವಣೆಯಲ್ಲಿ ನೀವೆಷ್ಟು ಬೆಂಬಲ ನೀಡಿದ್ದೀರಿ. ಈಗ ಕುಮಾರಸ್ವಾಮಿ ಅವರಿಗೂ ನೀವು ಅದೇ ರೀತಿ ಮಾಡುತ್ತಿದ್ದೀರಾ?. ಚುನಾವಣೆ ಭಾಷಣಕ್ಕೊಸ್ಕರ ಒಬ್ಬರನ್ನು ಹೀಯಾಳಿಸುವುದನ್ನು ಬಿಡಬೇಕು. ನಾವು ಇದಕ್ಕೆಲ್ಲ ಅಂಜುವುದಿಲ್ಲ. ಅಳುಕುವುದಿಲ್ಲ. ನಾನು ನಮ್ಮ ರಾಜಕಾರಣ ಮಾಡುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರು ನನ್ನ ಬಗ್ಗೆ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ವೀರಾವೇಶದಿಂದ ಮಾತನಾಡಿದ್ದಾರೆ. ನನ್ನನ್ನು ಟೀಕಿಸುವ ಭರಲ್ಲಿ ದುಷ್ಟ ಶಾಸಕ ಎಂದು ಹೇಳಿದ್ದೀರಿ. ಜಿಲ್ಲೆಯಲ್ಲಿ ಯಾರು ದುಷ್ಟ ಶಾಸಕರು ಎಂಬುದು ಜನರಿಗೆ ತಿಳಿದಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿರುಗೇಟು ನೀಡಿದರು.

೨೦೦೮ರಲ್ಲಿ ನಾನು ಪಕ್ಷೇತರ ಶಾಸಕನಾಗಿ ಗೆಲ್ಲುವ ಮೂಲಕ ಮಳವಳ್ಳಿ ಕ್ಷೇತ್ರದಲ್ಲಿ ನಿಜವಾದ ಕಾಂಗ್ರೆಸ್ ಏನು ಎಂಬುದನ್ನು ಸಾಬೀತುಪಡಿಸಿದ್ದೆ. ಅದರಂತೆ ಯಡಿಯೂರಪ್ಪ ಅವರು ಬೆಂಬಲ ಕೋರಿದಾಗ ೯ ಮಂದಿ ಪಕ್ಷೇತರ ಶಾಸಕರು ಬೆಂಬಲ ನೀಡಿದ್ದೆವು. ಆದರೆ, ನೀವು ಮತ್ತು ಮಾಜಿ ಪ್ರಧಾನಿ ದೇವೇಗೌಡರು ಯಡಿಯೂರಪ್ಪ ಸರ್ಕಾರವನ್ನು ಉರುಳಿಸಲು ಏನೇನು ಮಾಡಿದಿರಿ ಎಂಬುದನ್ನು ಮರೆತ್ತಿದ್ದೀರಾ? ಎಂದು ಯಡಿಯೂರಪ್ಪ ಸರ್ಕಾರ ಬೀಳಲು ಕಾರಣರಾದವರ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದರು.

ನನ್ನ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡಿರುವ ನೀವು ಪುಟ್ಟರಾಜು ಅಲ್ಲ, ದೊಡ್ಡರಾಜು ಎಂದು ಕರೆಯಬೇಕು. ಯಡಿಯೂರಪ್ಪ ಸರ್ಕಾರ ಬೀಳಿಸಲು ನೀವು ಎಲ್ಲೆಲ್ಲಿ ಸಭೆ ಮಾಡಿದಿರಿ. ಯಾರನ್ನೆಲ್ಲಾ ಪ್ರಚೋದನೆ ಮಾಡಿದಿರಿ. ನಿಮ್ಮ ಪಕ್ಷದ ಮುಖಂಡರು ಗೋವಾ, ಬಾಂಬೆ, ಚೆನ್ನೈ, ಕೇರಳಕ್ಕೆ ಕರೆದುಕೊಂಡು ಹೋಗಿ ನಂತರ ಈಗಲ್ಟನ್ ರೆಸಾರ್ಟ್ ಕರೆದುಕೊಂಡು ಬಂದರು. ನಮ್ಮನ್ನು ಕರೆದುಕೊಂಡು ಬಂದ ಪುಟ್ಟಣ್ಣನವರು ಚೆನ್ನೈನಲ್ಲಿ ೯ ಮಂದಿ ಸಚಿವರ ರಾಜೀನಾಮೆ ಪಡೆದು ರಾಜ್ಯಪಾಲರಿಗೆ ನೀಡಿದ್ದೆವು. ನಾನು ಬಾಯಿ ಬಿಟ್ಟರೆ ನಿಮ್ಮ ಬಣ್ಣ ಬಯಲಾಗಲಿದೆ ಎಂದು ಎಚ್ಚರಿಸಿದರು.

ನೀವು ನನ್ನೊಬ್ಬನ ಮನೆ ಹಾಳು ಮಾಡಿದ್ದಲ್ಲ. ೯ ಮಂದಿ ಸಚಿವರಿಂದ ರಾಜೀನಾಮೆ ಕೊಡಿಸಿ ಅವರ ಮನೆಯನ್ನೂ ಹಾಳುಗೆಡವಿದಿರಿ. ಸ್ವಂತ ಶಕ್ತಿಯಿಂದ ವೈಯಕ್ತಿಕವಾಗಿ ಸಚಿವ ಸ್ಥಾನವನ್ನು ಪಡೆದುಕೊಂಡಿದ್ದೆವು. ಆದರೆ, ನೀವು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮಾಡುತ್ತೇವೆ ಎಂದು ಆಮಿಷವೊಡ್ಡಿ ೨೧ ಮಂದಿ ಶಾಸಕರನ್ನು ಒಗ್ಗೂಡಿಸಿ ಕೊನೆಗೆ ೧೭ ಮಂದಿ ಶಾಸಕರು ಅನೂರ್ಜಿತರಾಗಲು ಕಾರಣ ಯಾರು ಎಂಬುದನ್ನು ನೀವೇ ಹೇಳಬೇಕು ಎಂದು ಮರುಪ್ರಶ್ನಿಸಿದರು.

ಶಾಸಕ ಸ್ಥಾನ ಕಳೆದುಕೊಂಡು ಕಣ್ಣೀರು ಹಾಕುವಾಗ ದೇವೇಗೌಡರು ಕಾಪಾಡಿದರು ಎಂದು ಹೇಳುತ್ತೀರಿ. ಅದಕ್ಕೆ ಕಾರಣ ಯಾರು ಹಾಗೂ ಅದರ ಹಿಂದಿನ ಕಹಿ ಸತ್ಯವನ್ನು ಬಾಯಿ ಬಿಟ್ಟರೆ ಮಹಾ ನಾಯಕನಿಗೆ ಚ್ಯುತಿ ಬರುತ್ತದೆ ಎಂದು ಮುಚ್ಚಿಟ್ಟು ಮಾತನಾಡುತ್ತಿದ್ದೇನೆ. ನಿಮಗೆ ಎಚ್ಚರಿಕೆ ಇರಲಿ, ನಮ್ಮ ಇಷ್ಟು ಜನರ ರಂಪಾಟಕ್ಕೆ ಕಾರಣರಾದವರೇ ಎಚ್.ಡಿ. ಕುಮಾರಸ್ವಾಮಿ ಅವರು ಎಂಬುದನ್ನು ನೀವು ಮರೆಯಬೇಡಿ. ಯಾಕೆ ಈ ರೀತಿ ತೊಂದರೆ ಕೊಡುತ್ತೀರಿ. ನಿಮಗೆ ಎಲ್ಲರೂ ವಿರೋಧಿಗಳೇ, ಅವರು ಬದುಕಿದ್ದಾಗ ಯಾವ ರೀತಿ ತೊಂದರೆ, ಕಿರುಕುಳ ನೀಡಿದಿರಿ. ಈಗ ಅವರು ಸತ್ತ ಮೇಲೆ ಅವರ ಸಮಾಧಿಗೆ ಹೋಗಿ ನಮಸ್ಕರಿಸುತ್ತಿದ್ದೀರಿ ಎಂದು ಟೀಕಿಸಿದರು.

ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಯಾರು ಕಾರಣ?., ಆ ಚುನಾವಣೆಯಲ್ಲಿ ನೀವೆಷ್ಟು ಬೆಂಬಲ ನೀಡಿದ್ದೀರಿ. ಈಗ ಕುಮಾರಸ್ವಾಮಿ ಅವರಿಗೂ ನೀವು ಅದೇ ರೀತಿ ಮಾಡುತ್ತಿದ್ದೀರಾ?. ಚುನಾವಣೆ ಭಾಷಣಕ್ಕೊಸ್ಕರ ಒಬ್ಬರನ್ನು ಹೀಯಾಳಿಸುವುದನ್ನು ಬಿಡಬೇಕು. ನಾವು ಇದಕ್ಕೆಲ್ಲ ಅಂಜುವುದಿಲ್ಲ. ಅಳುಕುವುದಿಲ್ಲ. ನಾನು ನಮ್ಮ ರಾಜಕಾರಣ ಮಾಡುತ್ತಿದ್ದೇವೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ ಆಯ್ಕೆಯಾಗಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಲು ಬಯಸಿದ್ದೆ. ಬಿಜೆಪಿಯವರೊಂದಿಗೆ ಒಳಸಂಚು ರೂಪಿಸಿ ನಾಮ ನಿರ್ದೇಶಕ ಸದಸ್ಯರ ಬೆಂಬಲ ಪಡೆದು ನನಗೆ ಅಡ್ಡಗಾಲಾದಿರಿ. ನಾನೇನು ನಿಮಗೆ ಅನ್ಯಾಯ ಮಾಡಿದ್ದೆ. ಒಬ್ಬ ದಲಿತ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗುವುದನ್ನು ನೀವು ಸಹಿಸಲಿಲ್ಲ. ನಾನು ಈ ಹಿಂದೆ ಸಚಿವನಾಗಿದ್ದ ಸಮಯದಲ್ಲಿ ಮನ್‌ಮುಲ್, ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಒಕ್ಕಲಿಗರಿಗೆ ನೀಡಿದ್ದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಮುಖಂಡರಾದ ಸುರೇಶ್‌ಕಂಠಿ, ಸಿದ್ದರಾಜು, ಸ್ವಾಮಿ, ನಾಗೇಶ್, ಲಿಂಗದೇವರು ಇದ್ದರು.