ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ವತಿಯಿಂದ ಶನಿವಾರ (ಏ.೬) ಕಾಲೇಜಿನ ವನರಂಗದಲ್ಲಿ ಜಾನಪದ ಜಾತ್ರೆ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಸಾಂಸ್ಕತಿಕ ವೇದಿಕೆ ಸಂಚಾಲಕ ಡಾ.ಕುಮಾರ್ ಬೆಳಲೆ ತಿಳಿಸಿದರು.ಬೆಳಗ್ಗೆ ೧೦ ಗಂಟೆಗೆ ಸಂಸ್ಕೃತಿ ಚಿಂತಕ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಸಮಾರಂಭ ಉದ್ಘಾಟಿಸುವರು. ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಹೇಮಲತಾ ಅಧ್ಯಕ್ಷತೆ ವಹಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅದ್ಧೂರಿ ಆಚರಣೆಗೆ ನಿರ್ಧಾರ:ವಿದ್ಯಾರ್ಥಿಗಳಿಗೆ ಜಾನಪದ, ಸಂಸ್ಕೃತಿಯನ್ನು ತಿಳಿಸುವ ಸಲುವಾಗಿ ೨೦೧೩ರಲ್ಲಿ ನಮ್ಮ ಕಾಲೇಜಿನಲ್ಲಿ ಜಾನಪದ ಜಾತ್ರೆ ಪ್ರಾರಂಭಿಸಲಾಯಿತು. ಅಂದಿನಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿತ್ತು. ಕೋವಿಡ್ ಕಾರಣದಿಂದಾಗಿ ಎರಡು ವರ್ಷ ಕಾರ್ಯಕ್ರಮವನ್ನು ಮಾಡಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಸಂಭ್ರಮ, ಸಡಗರದಿಂದ ಜಾನಪದ ಜಾತ್ರೆಯನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳೂ ಸಹ ಇದರಲ್ಲಿ ಪಾಲ್ಗೊಳ್ಳಲು ಉತ್ಸಾಹ ತೋರಿದ್ದಾರೆ ಎಂದರು.
ಮೆರವಣಿಗೆ:ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ದೇಸೀ ಉಡುಗೆಯಲ್ಲೇ ಬರುತ್ತಾರೆ. ಕಾಲೇಜಿನ ಆವರಣದಲ್ಲಿ ಅಲಂಕೃತಗೊಂಡ ಎತ್ತಿನ ಗಾಡಿ, ತಮಟೆ, ಪೂಜಾ ಕುಣಿತ, ಕೋಲಾಟ, ಗಾರುಡಿಗೊಂಬೆ, ವೀರಗಾಸೆ ಮೊದಲಾದ ಕಲಾತಂಡಗಳ ಮೆರವಣಿಗೆಯನ್ನು ಏರ್ಪಡಿಸಲಾಗಿದೆ. ಭತ್ತಘಿ, ರಾಗಿಯ ರಾಶಿ ಪೂಜೆಯೊಡನೆ ಕಾರ‌್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಜಾನಪದ ವಸ್ತುಗಳ ಪ್ರದರ್ಶನ, ದೇಸಿ ತಿಂಡಿ ಅಂಗಡಿಗಳು, ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರಶಸ್ತಿ ಪ್ರದಾನ:ಸುಂದರವಾಗಿ ದೇಸಿ ವೇಷಭೂಷಣ ತೊಟ್ಟ ವಿದ್ಯಾರ್ಥಿನಿಯರಿಗಾಗಿ ಜಾನಪದ ಚಲುವೆ/ಚಲುವ ಪ್ರಶಸ್ತಿಯನ್ನೂ ನೀಡಲಾಗುತ್ತದೆ. ಜಾನಪದ ಸಂಸ್ಥೆಯವರು ಗಾದೆ ಹೇಳಿ-ಒಗಟು ಬಿಡಿಸಿ-ಬಹುಮಾನ ಗೆಲ್ಲಿ ಎಂಬ ಸ್ಪರ್ಧೆಯನ್ನೂ ಏರ್ಪಡಿಸಿದ್ದಾರೆ. ಜೊತೆಗೆ ಗ್ರಾಮೀಣ ಕ್ರೀಡೆಗಳ ಸ್ಪರ್ಧೆ, ರಂಗೋಲಿ ಸ್ಪರ್ಧೆ ಇರುತ್ತದೆ ಎಂದರು.
ಬುಜ್ಜಣಿಗೆ ಬುಟ್ಟಿ ಲಕ್ಕಿ ಡ್ರಾ:ಈ ಬಾರಿ ವಿಶೇಷವಾಗಿ ವಿದ್ಯಾರ್ಥಿನಿಯರು, ಮಹಿಳಾ ಮತ್ತು ಪುರುಷ ಸಿಬ್ಬಂದಿಗಳಿಗೆ ಹಳ್ಳಿಯ ತಿಂಡಿಗಳಾದ ಕಜ್ಜಾಯ, ರೆವೆಉಂಡೆ, ಕರ್ಜಿಕಾಯಿ, ಎಳ್ಳುಂಡೆ, ಒಬ್ಬಟ್ಟು ಸೇರಿದಂತೆ ೫೦೦ ರು. ಮೌಲ್ಯದ ಸಿಹಿ ಖಾರಾ ಒಳಗೊಂಡಂತೆ ಬುಜ್ಜಣಿಗೆ ಬುಟ್ಟಿಯಲ್ಲಿ ಇಟ್ಟು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ವಿತರಿಸಲಾಗುತ್ತದೆ ಎಂದು ವಿವರಿಸಿದರು.
ಬಹುಮಾನ ವಿತರಣೆ:ಜಾನಪದೀಯವಾಗಿ ಅಲಂಕೃತಗೊಂಡ ಎತ್ತಿನ ಗಾಡಿ ಮೆರವಣಿಗೆಯಲ್ಲಿ ಭಾಗವಹಿಸಿ ಬಹುಮಾನ ಪಡೆದದವರಿಗೆ ೩ ಸಾವಿರ, ೩ ಸಾವಿರ ಹಾಗೂ ೧ ಸಾವಿರ ಬಹುಮಾನ ನೀಡಲಾಗುತ್ತದೆ. ವಿದ್ಯಾರ್ಥಿಗಳು ತಾವೇ ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡಲು ೧೪ ಸ್ಟಾಲ್‌ಗಳನ್ನು ತೆರೆಯಲಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಕೆ. ಹೇಮಲತಾ, ಪ್ರಾಧ್ಯಾಪಕರಾದ ಡಾ. ಜ್ಯೋತ್ಸ್ನಾಕಾರಂತ್, ಡಾ. ಕೆಂಪಮ್ಮ, ಡಾ. ಪ್ರಮೀಳಾ, ಡಾ. ಕೃಷ್ಣೇಗೌಡ, ಪತ್ರಾಂಕಿತ ವ್ಯವಸ್ಥಾಪಕ ರವಿಕಿರಣ್ ಗೋಷ್ಠಿಯಲ್ಲಿದ್ದರು.