ಸಾರಾಂಶ
ಹೊಸಪೇಟೆ: ರಾಜ್ಯದಲ್ಲಿ ೨೨೩ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿರುವುದರಿಂದ ಅತೀ ಹೆಚ್ಚು ತಾಪಮಾನ ಪ್ರತಿಕೂಲ ಪರಿಣಾಮ ತಡೆಗಟ್ಟಲು ಕೆಲವು ಪ್ರಮುಖ ಸಲಹೆ ಸೂಚನೆಗಳನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮನವಿ ಮಾಡಿದ್ದಾರೆ.
ಭಾರತ ಹವಾಮಾನ ಇಲಾಖೆಯು ಪ್ರಸ್ತಕ ವರ್ಷದಲ್ಲಿ ಅತೀ ಹೆಚ್ಚು ತಾಪಮಾನ ಕುರಿತು ಹೊರಡಿಸಿದ ಅನ್ವಯ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಗರಿಷ್ಠ ತಾಪಮಾನ ಇದೆ ಎಂಬುದನ್ನು ಸೂಚಿಸುತ್ತದೆ. ಭಾರತೀಯ ಹವಾಮಾನ ಇಲಾಖೆಯು ೨೦೨೪ರ ಏಪ್ರೀಲ್ ೦೧ ರಂದು ಬಿಡುಗಡೆ ಮಾಡಲಾದ ಹವಾಮಾನ ಸಂಭವನೀಯತೆಯ ಮುನ್ನೋಟ ಆಧರಿಸಿ ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್ ಮಾಹೆಯಿಂದ ಮೇ ೨೦೨೪ರ ಅವಧಿಯಲ್ಲಿ ಮುಂಬರುವ ಬಿಸಿ ವಾತಾವರಣವು ಸಾಮಾನ್ಯ ತಾಪಮಾನಕ್ಕಿಂತ ಹೆಚಾಗಿ ಇರುತ್ತದೆ ಎಂದು ಸೂಚಿಸಿರುತ್ತದೆ. ಅತೀ ಹೆಚ್ಚು ತಾಪಮಾನ ಸಮಯದಲ್ಲಿ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಲು ನೀಡಿರುವ ಸಲಹೆ ಸೂಚನೆಗಳನ್ನು ಪಾಲನೆ ಮಾಡಬೇಕಿದೆ.ಅತೀ ಹೆಚ್ಚು ತಾಪಮಾನದಿಂದ ಉಂಟಾಗುವ ಅನಾರೋಗ್ಯವನ್ನು ತಡೆಗಟ್ಟಲು ಕೆಲವು ಸೂಚನೆಗಳನ್ನು ನೀಡಲಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ ವಿಶೇಷವಾಗಿ ಗರಿಷ್ಠ ತಾಪಮಾನ ಮಧ್ಯಾಹ್ನ ೧೨ ರಿಂದ ೩ರವರೆಗಿನ ಅವಧಿಯಲ್ಲಿ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು. ಕಾಲಕಾಲಕ್ಕೆ ಸಾಕಷ್ಟು ನೀರು ಕುಡಿಯಬೇಕು. ಹಗುರ, ತಿಳಿ ಬಣ್ಣದ ಸಡಿಲವಾದ ಮತ್ತು ಹತ್ತಿಬಟ್ಟೆಗಳನ್ನು ಧರಿಸಬೇಕು ಎಂದರು.
ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡಕಗಳು, ಛತ್ರಿ, ಟೋಪಿ, ಬೂಟುಗಳು ಅಥವಾ ಚಪ್ಪಲಿಗಳನ್ನು ಬಳಸಬೇಕು. ಹೊರಗಿನ ಉಷ್ಣತೆಯು ಅಧಿಕವಾಗಿರುವಾಗ ಮಧ್ಯಾಹ್ನ ೧೨ ರಿಂದ ೩ ಗಂಟೆಯವರೆಗೆ ಹೊರಗೆ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಬೇಕು. ಪ್ರಯಾಣ ಮಾಡುವಾಗ ನೀರನ್ನು ಜೊತೆಯಲ್ಲಿ ಒಯ್ಯುಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ತಪ್ಪಿಸಬೇಕು. ಸಾಧ್ಯವಾದಷ್ಟು ಬಿಸಿ ಆಹಾರ ಸೇವಿಸಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು. ಮೂರ್ಛೆ ಅಥವಾ ಅನಾರೋಗ್ಯ ಅನಿಸಿದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ಓಆರ್‌ಎಸ್ ಬಳಸಬೇಕು. ಸಾಕುಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸಬೇಕು. ಮನೆಯನ್ನು ತಂಪಾಗಿರಿಸಲು ಪರದೆಗಳು, ಶಟರ್‌ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಬೇಕು ಹಾಗೂ ಆಗಿಂದಾಗ್ಗೆ ತಣ್ಣೀರು ಸ್ನಾನ ಮಾಡಬೇಕು. ಹೊರಗೆ ಹೋಗುವಾಗ ನೀರಿನ ಬಾಟಲಿ, ಛತ್ರಿ ಟೋಪಿ ಅಥವಾ ಕ್ಯಾಪ್ ಹೆಡ್ ಕವರ್, ಹ್ಯಾಂಡ್ ಟಾವೆಲ್, ಹ್ಯಾಂಡ್ವ್ಯಾನ್, ಎಲೆಕ್ಟೋಲೈಟ್ ಗ್ಲೋಕೋಸ್ ಓಆರ್‌ಎಸ್‌ಅನ್ನು ಒಳಗೊಂಡಿರುವ ಅತೀ ಹೆಚ್ಚು ತಾಪಮಾನವನ್ನು ತಡೆಗಟ್ಟುವ ಕಿಟ್‌ಅನ್ನು ಒಯ್ಯಬೇಕು.ಗುರುತಿಸುವಿಕೆ:
ಅತೀ ಹೆಚ್ಚು ತಾಪಮಾನದಿಂದ ಸಾಮಾನ್ಯವಾಗಿ ನಿರ್ಜಲೀಕರಣ, ಶಾಖ ಸೆಳೆತ, ಶಾಖದ ಬಳಲಿಕೆ ಮತ್ತು ಅಥವಾ ಶಾಖದ ಆಘಾತದಂತಹ ಆರೋಗ್ಯದ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಶಾಖ ಸೆಳೆತಗಳು ಅಂದರೆ ಎಡೆರ್ನಾ (ಊತ) ಮತ್ತು ಮೂರ್ಛೆ ಸಾಮಾನ್ಯವಾಗಿ ೩೯ ಡಿಗ್ರಿ ಸೆಲ್ಸಿಯಸ್ ಅಂದರೆ ೧೦೨ ಡಿಗ್ರಿ ಎಫ್ ಗಿಂತ ಕಡಿಮೆ ಜ್ವರದಿಂದ ಕೂಡಿರುತ್ತದೆ.ಶಾಖದ ಬಳಲಿಕೆಯು ಆಯಾಸ, ದೌರ್ಭಲ್ಯ, ತಲೆ ತಿರುಗುವಿಕೆ, ತಲೆ ನೋವು, ವಾಕರಿಕೆ, ವಾಂತಿ, ಸ್ನಾಯು ಸೆಳೆತ ಮತ್ತು ಬೆವರುವ ಲಕ್ಷಣಗಳಿಂದ ಕೂಡಿರುತ್ತದೆ. ಶಾಖಾಘಾತ (ಸನ್ ಸ್ಟ್ರೋಕ್) ದೇಹದ ಉಷ್ಣತೆಯು ೪೦ ಡಿಗ್ರಿ ಸೆಲ್ಸಿಯಸ್ ಅಂದರೆ ೧೦೪ ಡಿಗ್ರಿ ಎಫ್ ಅಥವಾ ಅದಕ್ಕಿಂತ ಹೆಚ್ಚಾಗುವುದು ಹಾಗೂ ಉಸಿರಾಟದಲ್ಲಿ ವ್ಯತ್ಯಯ ಮತ್ತು ಪ್ರಜ್ಞೆ ತಪ್ಪುವ ಲಕ್ಷಣಗಳಿಂದ ಕೂಡಿರುತ್ತದೆ ಎಂದು ತಿಳಿಸಿದ್ದಾರೆ.