ಸಾರಾಂಶ
ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ರಾಜ್ಯ ಸರ್ಕಾರದ ಕ್ರಮ ಕಾನೂನು ಬಾಹಿರವಾಗಿದೆ ಎಂದು ಸಿಬಿಐ ಹೈಕೋರ್ಟ್‌ನಲ್ಲಿ ಬಲವಾಗಿ ವಾದಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ರಾಜ್ಯ ಸರ್ಕಾರದ ಕ್ರಮ ಕಾನೂನು ಬಾಹಿರವಾಗಿದೆ ಎಂದು ಸಿಬಿಐ ಹೈಕೋರ್ಟ್‌ನಲ್ಲಿ ಬಲವಾಗಿ ವಾದಿಸಿದೆ.ಡಿಸಿಎಂ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ನೀಡಿದ್ದ ಅನುಮತಿ ಹಿಂಡೆದು ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ಹೊರಡಿಸಿದ ಆದೇಶ ರದ್ದು ಕೋರಿ ಸಿಬಿಐ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸಿಬಿಐ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್, ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಹಿಂದಿನ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನುಮತಿ ಹಿಂಪಡೆದಿದೆ. ಹಿಂದಿನ ಸರ್ಕಾರ ಅನುಮತಿ ನೀಡಿದ್ದನ್ನು ಮತ್ತು ಸಿಬಿಐ ದಾಖಲಿಸಿದ್ದ ಎಫ್ಐಆರ್ ಅನ್ನು ಪ್ರಶ್ನಿಸಿ ಶಿವಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವು ವಜಾಗೊಂಡ ಕಾರಣ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಅದು ವಿಚಾರಣೆ ಹಂತದಲ್ಲಿ ಇರುವಾಗ ಅನುಮತಿ ಹಿಂಪಡೆಯಲಾಗಿದೆ. ಇದು ಕಾನೂನು ಬಾಹಿರ ಕ್ರಮ ಎಂದು ವಾದ ಮಂಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಎಫ್ಐಆರ್ ದಾಖಲಿಸಿ ಸುಮಾರು ನಾಲ್ಕು ವರ್ಷಗಳಾದರೂ ಏಕೆ ಅಂತಿಮ ವರದಿ ಸಲ್ಲಿಸಲಿಲ್ಲ ಎಂದು ಪ್ರಶ್ನಿಸಿದರು.ಅದಕ್ಕೆ ಉತ್ತರಿಸಿದ ಪ್ರಸನ್ನ ಕುಮಾರ್, 2020ರ ಅ.3ರಂದು ಎಫ್ಐಆರ್ ದಾಖಲಿಸಲಾಗಿದೆ. ಇದರಲ್ಲಿ ಎರಡು ವರ್ಷ ಕೋವಿಡ್‌ನಿಂದಾಗಿ ತನಿಖೆ ನಡೆಸಲಾಗಿಲ್ಲ. ಒಂದು ವರ್ಷ ಪ್ರಕರಣದ ವಿಚಾರಣೆಗೆ ಶಿವಕುಮಾರ್ ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆದುಕೊಂಡಿದ್ದರು. ಸಿಬಿಐ ತನಿಖೆ ಈಗಲೂ ಪ್ರಗತಿಯಲ್ಲಿದ್ದು, ಈ ಸಂಬಂಧ ವಿಸ್ತೃತ ಬೆಳವಣಿಗೆಯನ್ನು ನ್ಯಾಯಾಲಯದ ಮುಂದಿಡಲಾಗುವುದು ಎಂದು ಸಮಜಾಯಿಷಿ ನೀಡಿದರು. ದಿನದ ಕಲಾಪದ ಅವಧಿ ಮುಕ್ತಾಯಗೊಂಡ ಕಾರಣ ನ್ಯಾಯಪೀಠವು ಅರ್ಜಿಗಳ ವಿಚಾರಣೆಯನ್ನು ಏ.18ಕ್ಕೆ ಮುಂದೂಡಿತು.
ಅಲ್ಲದೆ, ಅನುಮತಿ ಹಿಂಪಡೆದಿರುವುದಕ್ಕೆ ರಾಜ್ಯ ಸರ್ಕಾರ ಕಾರಣ ನೀಡಿಲ್ಲ. 2013-18ರ ಅವಧಿಯಲ್ಲಿ ಶಿವಕುಮಾರ್ ಅವರ ಅಕ್ರಮ ಆಸ್ತಿ ಪ್ರಮಾಣ ಶೇ. 49.13ರಷ್ಟು ಹೆಚ್ಚಳವಾಗಿದೆ. ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯುವ ಅಧಿಕಾರ ಸರ್ಕಾರಕ್ಕೆ ಇದೆ ಎಂದಾದರೂ ತನಿಖೆ ಪೂರ್ಣಗೊಳಿಸಿ, ಅಂತಿಮ ವರದಿ ಸಲ್ಲಿಸಲು ಸಿಬಿಐಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.