ಸಾರಾಂಶ
ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ನಿರಂತರವಾಗಿ ಕೆಲಸ ನೀಡಲು ನರೇಗಾ ವಾರ್ಷಿಕ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನಾಇಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ತಿಳಿಸಿದರು. ನರೇಗಾ ಕಾಮಗಾರಿ ಸ್ಥಳಕ್ಕೆ ಗರಿಮಾ ಪನ್ವಾರ ಭೇಟಿ, ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಬಳಿಕ ಮಾತನಾಡಿದ ಅವರು, ಒಂದು ಆರ್ಥಿಕ ವರ್ಷದಲ್ಲಿ ಪ್ರತಿ ಜಾಬ್ ಕಾರ್ಡ್‌ಗೆ 100 ದಿನ ಅಕುಶಲ ಕೂಲಿ ಕೆಲಸ ನೀಡಲಾಗುವುದು. ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ನಿರಂತರವಾಗಿ ಕೂಲಿ ಕೆಲಸ ನೀಡಲು ಈಗಾಗಲೇ ನರೇಗಾ ವಾರ್ಷಿಕ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಹೇಳಿದರು.ತಾಲೂಕು ಪಂಚಾಯಿತಿ ವ್ಯಾಪ್ತಿಯ ವರ್ಕನಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕೊಯ್ಲೂರ್ ಗ್ರಾಮದಲ್ಲಿ ಮನರೇಗಾ ಯೋಜನೆಯ ಜಲಶಕ್ತಿ ಹಾಗೂ "ವಲಸೆ ಯಾಕ್ರಿ, ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ", ದುಡಿಮೆ ಖಾತ್ರಿ ವಿಶೇಷ ಅಭಿಯಾನದಡಿ ಪ್ರಗತಿಯಲ್ಲಿದ್ದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಅವರು ಭೇಟಿ ನೀಡಿ, ಪರಿಶೀಲಿಸಿದರು.
ಈ ವೇಳೆ ಮಾತನಡಿದ ಅವರು, ಕೆರೆ, ಹಳ್ಳ ಹಾಗೂ ನಾಲಾ ಹೂಳೆತ್ತುವ ಕಾಮಗಾರಿ ಮಾಡುವುದರಿಂದ ಮಳೆಗಾಲದಲ್ಲಿ ಮಳೆ ನೀರು ಸಂಗ್ರಹವಾಗಿ ಭೂಮಿಯ ಅಂತರ್ಜಲ ಮಟ್ಟ ಹೆಚ್ಚಾಗುವುದರಿಂದ ಸುತ್ತಮುತ್ತಲಿನ ರೈತರ ಜಮೀನಿನಲ್ಲಿರುವ ಕೊಳವೆ ಬಾವಿಗಳ ನೀರಿನ ಮಟ್ಟ ವೃದ್ಧಿಸುತ್ತದೆ ಎಂದು ತಿಳಿಸಿದರು.ಮನರೇಗಾ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳು ಗ್ರಾಮೀಣ ಭೂರಹಿತ ಕೃಷಿ ಕೂಲಿಕಾರರು, ರೈತರು ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಕೈಗೊಳ್ಳಲಾಗುತ್ತಿದ್ದು, ನೀವೆಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಬೇಸಿಗೆ ಬಿಸಿಲು ಹೆಚ್ಚು ಇರುವುದರಿಂದ ಸರ್ಕಾರವು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಿದ್ದು, ಏಪ್ರಿಲ್, ಮೇ ತಿಂಗಳಲ್ಲಿ ಶೇ.30 ಹಾಗೂ ಜೂನ್ ತಿಂಗಳಲ್ಲಿ ಶೇ. 20 ರಷ್ಟು ನರೇಗಾ ಕಾಮಗಾರಿಗಳಲ್ಲಿ ಕೆಲಸ ಮಾಡುವ ಪ್ರಮಾಣದಲ್ಲಿ ವಿನಾಯಿತಿ ನೀಡಲಾಗಿದೆ. ಏ.1ರಿಂದ ಕೂಲಿ ಮೊತ್ತವು ದಿನಕ್ಕೆ 349 ರು.ಗಳಾಗಿದ್ದು, ಕೆಲಸ ಮಾಡಿದ ಕೂಲಿ ಹಣ ನೇರವಾಗಿ ಕೂಲಿಕಾರರ ನೋಂದಾಯಿತ ಬ್ಯಾಂಕ್ ಖಾತೆಗೆ ಜಮೆಯಾಗುವುದು ಎಂದು ತಿಳಿಸಿದರು.ಈ ವೇಳೆ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 7ರಂದು ನಡೆಯುವ ಮತದಾನದ ಹಿನ್ನೆಲೆ ಮತದಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲು ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿದ್ದ ಕೂಲಿ ಕಾರ್ಮಿಕರಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.
ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಲ್ಲಣ್ಣ ಸಂಕನೂರ, ಆಪ್ತ ಸಹಾಯಕ ಕಿಶನ್ ರಾಠೋಡ, ಬನ್ನಪ್ಪ, ತಾಂತ್ರಿಕ ಸಂಯೋಜಕ ಉಮೇಶ, ಸಂಯೋಜಕ ಭಿಮರೆಡ್ಡಿ ವಡಗೇರಾ, ತಾಂತ್ರಿಕ ಸಹಾಯಕ ಅಭಿಲಾಷ್ ರೆಡ್ಡಿ, ಬಿಎಫ್‌ಟಿ ಚಂದ್ರಶೇಖರ, ರಾಜೇಶ್ವರಿ ಸೇರಿದಂತೆ ಕಾಯಕ ಬಂಧುಗಳು ಹಾಗೂ 223 ಜನ ನರೇಗಾ ಕೂಲಿಕಾರರು ಇದ್ದರು.