ಸಾರಾಂಶ
ಬೆಳಗಾವಿ ತಾಲೂಕಿನ ಸೋನಟ್ಟಿ ಗ್ರಾಮದ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಕಳ್ಳಭಟ್ಟಿ ಸಾರಾಯಿ ಅಡ್ಡೆ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಹಾಗೂ ಡಿಸಿಪಿ ರೋಹನ್ ನೇತೃತ್ವದಲ್ಲಿ ಸುಮಾರು 200 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಳ್ಳಭಟ್ಟಿ ಸಾರಾಯಿ ತಯಾರಿಕೆ ಅಡ್ಡೆಯ ಮೇಲೆ ಶನಿವಾರ ಬೆಳ್ಳಂಬೆಳಗ್ಗೆ ಬೆಳಗಾವಿ ನಗರ ಪೊಲೀಸರು ದಾಳಿ ನಡೆಸಿ ಸುಮಾರು ₹11 ಲಕ್ಷ ಮೌಲ್ಯದ 5700 ಲೀ. ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ತಾಲೂಕಿನ ಸೋನಟ್ಟಿ ಗ್ರಾಮದ ಸಿದ್ರಾಯಿ ರಾಜಕಟ್ಟಿ, ಶೆಟ್ಟೆವ್ವ ರಾಜಕಟ್ಟಿ, ಸಿದ್ದಪ್ಪ ಪನಗುದ್ದಿ ಹಾಗೂ ಬಾಳಪ್ಪ ಮುಚ್ಚಂಡಿ ಸೇರಿ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ.ಬೆಳಗಾವಿ ತಾಲೂಕಿನ ಸೋನಟ್ಟಿ ಗ್ರಾಮದ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಕಳ್ಳಭಟ್ಟಿ ಸಾರಾಯಿ ಅಡ್ಡೆ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಹಾಗೂ ಡಿಸಿಪಿ ರೋಹನ್ ನೇತೃತ್ವದಲ್ಲಿ ಸುಮಾರು 200 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿದರು.
ದಾಳಿ ವೇಳೆ 26 ಬ್ಯಾರಲ್, 10 ಅಲ್ಯೂಮಿನಿಯಂ ಪಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು ₹11 ಲಕ್ಷದ ಮೌಲ್ಯದ 5700 ಲೀ.ನಷ್ಟು ಬೆಲ್ಲದ ಕೊಳೆ ನಾಶಪಡಿಸಲಾಗಿದೆ. ಜತೆಗೆ 40 ಲೀ.ನಷ್ಟು ಕಳ್ಳಭಟ್ಟಿ ಸಾರಾಯಿಯನ್ನು ಮನೆಗಳಿಂದ, ಬಯಲಿನಲ್ಲಿ ಹಾಗೂ ನಾಲೆಯ ಕಡೆಯಲ್ಲಿ ಸಂಗ್ರಹ ಮಾಡಿದ್ದನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಸ್ಥಳದಿಂದ ಆರೋಪಿಗಳು ಪರಾರಿಯಾಗಿದ್ದಾರೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ದಾಳಿಯಲ್ಲಿ ಭಾಗವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗೆ ಪೊಲೀಸ್ ಆಯುಕ್ತರು ₹ 25000 ನಗದು ಬಹುಮಾನ ಘೋಷಿಸಿದ್ದಾರೆ.
--------ಕೋಟ್
ಒಟ್ಟು 5700 ಲೀಟರ್ ಕಳ್ಳಭಟ್ಟಿ ವಶಕ್ಕೆ ಪಡೆದಿದ್ದೇವೆ. ಕೆಲವು ಮನೆಗಳ ಮೇಲೂ ದಾಳಿ ಮಾಡಿ ಕಳ್ಳಭಟ್ಟಿ ವಶಕ್ಕೆ ಪಡೆಯಲಾಗಿದೆ. ಒಂದು ವಾರದ ಹಿಂದೆ ಬಂದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದೇವೆ. ಪೊಲೀಸರು ಬಂದ ತಕ್ಷಣ ಎಲ್ಲರೂ ಓಡಿ ಹೋಗಿದ್ದಾರೆ. ಕೆಲವು ದಿನಗಳಿಂದ ಇಲ್ಲಿ ಕಳ್ಳಭಟ್ಟಿ ಸಾರಾಯಿ ದಂಧೆ ನಡೆಯುತ್ತಿದೆ. ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ.- ಎಸ್. ಎನ್. ಸಿದ್ದರಾಮಪ್ಪ, ನಗರ ಪೊಲೀಸ್ ಆಯುಕ್ತ