ಸುಬ್ರಹ್ಮಣ್ಯಪುರಕೆರೆ ಅವಸಾನದತ್ತ

| Published : May 19 2024, 01:46 AM IST

ಸಾರಾಂಶ

ರಾಜ್ಯ ಸರ್ಕಾರ ಕೆರೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಮಾಡುತ್ತಿರುವ ರಾಜ್ಯ ಸರ್ಕಾರದಿಂದ ಕೆರೆಯ ಕಾಮಾಗಾರಿ ಸರಿಯಾಗಿ ಆಗಿಲ್ಲ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ

ಕೆರೆಗಳಿಗೆ ಕಾಯಕಲ್ಪ ನೀಡಬೇಕೆಂಬ ಮಹತ್ವಾಕಾಂಕ್ಷೆಯಿಂದ ರಾಜ್ಯ ಸರ್ಕಾರ ಕೆರೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಮಾಡುತ್ತಿದೆಯಾದರೂ ಕಾಮಗಾರಿಯ ಗುಣಮಟ್ಟ ಮತ್ತು ಪ್ರಗತಿ ಎರಡೂ ತೃಪ್ತಿಕರವಾಗಿಲ್ಲ ಎಂದು ಕೆರೆಗಳ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಜನ ಪ್ರಶ್ನೆ ಮಾಡುವಂತಾಗಿದೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಬ್ರಹ್ಮಣ್ಯಪುರದ ಕೆರೆಯ ದುಸ್ಥಿತಿ ಇದಾಗಿದ್ದು. ಬದ್ಧತೆಯಿಲ್ಲದೆ ಅಭಿವೃದ್ದಿಪಡಿಸಿರುವ ಕೆರೆಗೆ ರಾಜಕಾಲುವೆ ಕೊಳಚೆ ನೀರು ಸೇರುತ್ತಿದೆ. ಇದರ ಪರಿಣಾಮ ಕೆರೆಯು ಕೊಳಚೆ ಗುಂಡಿಯಂತಾಗಿ ಸುತ್ತಮುತ್ತಲಿನ ಬಡಾವಣೆಯ ಜನರಿಗೆ ದುರ್ವಾಸನೆ, ಸೊಳ್ಳೆ ಕ್ರಿಮಿಕೀಟಗಳ ಹಾವಳಿ, ಸಾಂಕ್ರಾಮಿಕ ರೋಗದ ಭೀತಿ ಉಂಟಾಗಿದೆ.

ಕೆರೆಯ ಸುತ್ತಲೂ ಕಬ್ಬಿಣದ ತಡೆಗೋಡೆ, ನಡಿಗೆ ಪಥ, ಒಳಹರಿವು ಹಾಗೂ ಹೊರಹರಿವು, ಏರಿ ಕಲ್ಲು ನಿರ್ಮಾಣ ಸೇರಿದಂತೆ ನೂರಾರು ಸಸಿಗಳನ್ನು ನೆಟ್ಟು ಸಮಗ್ರವಾಗಿ ಕೆರೆಯನ್ನು ಅಭಿವೃದ್ಧಿ ಪಡಿಸಿದರೂ ಪ್ರಯೋಗ ಶೂನ್ಯ ಎಂಬಂತಾಗಿದೆ. ಕೆರೆಗೆ ಒಳಚರಂಡಿ ನೀರು ಸೇರುತ್ತಿರುವ ಪರಿಣಾಮ ಅನುದಾನದ ಹಣ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆರೆಯ ಪಕ್ಕದಲ್ಲಿ ಹಾದು ಹೋಗುವ ರಾಜಕಾಲುವೆ ತಡೆಗೋಡೆ ಎತ್ತರಿಸಿರುವುದರಿಂದ ಮಳೆಯಾದಾಗ ನೀರಿನ ರಭಸ ಹೆಚ್ಚಾಗಿ ಕೆರೆಗೆ ಒಳಚರಂಡಿ ಕಲುಷಿತ ನೀರು ಸೇರ್ಪಡೆಯಾಗುತ್ತಿದೆ.ಹೇಳೊರು,ಕೇಳೂರ ಇಲ್ಲದೆ ಅಧಿಕಾರಿಗಳು ಆಡಿದ್ದೇ ಆಟವಾಗಿದೆ ಎಂದು ಪಾಲಿಕೆ ಮಾಜಿ ಸದಸ್ಯ ಹನುಮಂತಯ್ಯ ದೂರಿದ್ದಾರೆ.

ಅಂತರ್ಜಲ ಮಟ್ಟ ವೃದ್ಧಿಗಾಗಿ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸುಬ್ರಹ್ಮಣ್ಯ ಕೆರೆಯನ್ನು ಪುನಶ್ಚೇತನಗೊಳಿಸಲಾಗಿತ್ತು. ಈ ನಡುವೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅವೈಜ್ಞಾನಿಕ ಕೆಲಸದಿಂದ ಕೆರೆ ಕಲುಷಿತಗೊಳ್ಳುತ್ತಿದೆ. ಈಗಾಗಲೇ ಸಮಸ್ಯೆ ಸರಿಪಡಿಸಲು ಹಲವಾರು ಬಾರಿ ಸೂಚಿಸಿದರೂ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ಸ್ವತಃ ಶಾಸಕ, ಎಂ.ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಕೋರ್ಟ್‌ನಲ್ಲಿ ಕೆರೆಯ ವಿಚಾರವಾಗಿ ದಾವೆ ಹೂಡಿದ್ದ ಕಾರಣ ಅಭಿವೃದ್ಧಿ ಕುಂಠಿತವಾಗಿತ್ತು. ಕೋರ್ಟ್‌ನಿಂದ ಕೇಸ್ ತೆರವುಗೊಂಡ ನಂತರ ಕೆರೆಯ ಅಭಿವೃದ್ಧಿಗೆ ಹಸಿರು ನಿಶಾನೆ ದೊರೆತರೂ ಜಲಮಂಡಳಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಅಭಿವೃದ್ಧಿಪಡಿಸಿದ ಕೆರೆ ಹಾಳಾಗುತ್ತಿದೆ ಎಂದು ಸ್ಥಳೀಯ ನಿವಾಸಿ ನಾಗರಾಜ್ ದೂರಿದ್ದಾರೆ.

ಕೆರೆಗೆ ಒಳಚರಂಡಿ ನೀರು ಸೇರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕೆರೆಗೆ ಕಲುಷಿತ ನೀರು ಸೇರದಂತೆ ಕಾಲುವೆ ನಿರ್ಮಾಣ ಮಾಡಿ ಹೊರ ಹರಿಬಿಡಲಾಗುತ್ತಿದೆ. ಆದರೆ ಮಳೆಯಾದಾಗ ರಭಸವಾಗಿ ಕೆರೆಗೆ ಒಳಚರಂಡಿ ನೀರು ಹರಿಯುತ್ತಿದೆ. ಶೀಘ್ರದಲ್ಲಿಯೇ ಶಾಶ್ವತ ಪರಿಹಾರ ಒದಗಿಸುವ ಕಾಮಗಾರಿ ಕೈಗೊಳ್ಳಲಾಗುತ್ತದೆ.

-ಉಷಾ, ಎಇ, ಬಿಬಿಎಂಪಿ ಕೆರೆ ವಿಭಾಗ