ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವುಶು ಕ್ರೀಡೆ ವಿದ್ಯಾರ್ಥಿಗಳಲ್ಲಿ ಮಾನಸಿಕ ಸಾಮರ್ಥ್ಯ ವೃದ್ಧಿಸುತ್ತದೆ. ಹೀಗಾಗಿ ಇಂತಹ ಕಲೆಗೆ ಬವಿವಿ ಸಂಘ ಉತ್ತರ ಕರ್ನಾಟಕದಲ್ಲಿ ಸದಾ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ವುಶು ಅಸೋಸಿಯೇಶನ್ ಕಾರ್ಯದರ್ಶಿ ಅಶೋಕ ಮೊಕಾಶಿ ಹೇಳಿದರು.ನಗರದ ಬವಿವಿ ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಗಲಕೋಟೆ ವಿಶ್ವವಿದ್ಯಾಲಯ ಮಟ್ಟದ ವುಶು ಕ್ರೀಡಾರ್ಥಿಗಳ ಆಯ್ಕೆ ಪ್ರಕ್ರಿಯೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಕ್ಷಿಣ ಭಾರತ ಸೇರಿದಂತೆ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ವುಶು ಕ್ರೀಡೋತ್ಸವಕ್ಕೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಶಾಸಕರು ಆದ ಡಾ.ವೀರಣ್ಣ ಚರಂತಿಮಠ ಅವರ ಕೊಡುಗೆ ಅಪಾರವಾಗಿದೆ. ಅವರ ನೇತೃತ್ವದಲ್ಲಿ ಈ ಬಗೆಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತ ಬರುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.ಪ್ರಾಚಾರ್ಯ ಡಾ.ಎಸ್.ಎಂ.ಗಾಂವ್ಕರ್ ಮಾತನಾಡಿ, ವುಶು ಎಂಬುದು ನಮ್ಮ ಭಾರತೀಯ ಪರಂಪರೆಯ ಕಲಾತ್ಮಕ ಆಟಗಳ ಮೂಲವಾಗಿದೆ. ಬಹುತೇಕರು ಕರಾಟೆಯನ್ನೇ ವುಶು ಆಟ ಎಂದುಕೊಂಡಿದ್ದಾರೆ. ಆದರೆ ಕರಾಟೆ ಮತ್ತು ವುಶು ಆಟಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಹಿಂದೆ ಮೂಲ ಭಾರತೀಯರಾದ ಬೌದ್ಧ ಭಿಕ್ಕುಗಳು ಕಾಲ್ದಾರಿ ಮೂಲಕ ಕಾಡುಮೇಡುಗಳ ಮೂಲಕ ಧರ್ಮ ಪ್ರಚಾರಕ್ಕಾಗಿ ದೇಶ ವಿದೇಶಗಳಿಗೆ ತೆರಳುವಾಗ ತಮ್ಮ ಆತ್ಮರಕ್ಷಣೆಗಾಗಿ ಈ ಕಲೆಯನ್ನು ಬಳಸಿಕೊಳ್ಳುತ್ತಿದ್ದರು ಎಂದರು.
ಮುಂದೆ ಬೌದ್ಧಧರ್ಮವು ವಿದೇಶಗಳಲ್ಲಿಯೇ ಹೆಚ್ಚು ಪ್ರಚಾರ ಪಡೆಯುವುದರ ಜೊತೆಗೆ ಈ ಆಟವೂ ಅಲ್ಲಿ ಹೆಚ್ಚು ಬಳಕೆಗೆ ಬಂದಿತು. ಹೀಗಾಗಿಯೇ ನಮ್ಮ ದೇಶಕ್ಕಿಂತಲೂ ಇದು ವಿದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ನಮ್ಮಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಇಂತಹ ಆಟಗಳ ಉಳಿವು ಹಾಗೂ ಬೆಳವಣಿಗೆಗೆ ಪ್ರೇರಣೆ ದೊರೆಯಬೇಕಿದೆ ಎಂದರು.ಬಾಗಲಕೋಟೆ ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ಸಂಯೋಜಕ ಪ್ರೊ.ಕೆ.ಎಂ.ಶಿರಹಟ್ಟಿ ಮಾತನಾಡಿ, ವುಶುನಂತಹ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಸಾಧನೆಯ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಜತೆಗೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ಜರುಗುವ ಶೈಕ್ಷಣಿಕ ಆಟಗಳನ್ನೂ ಪಠ್ಯದ ಭಾಗವಾಗಿಯೇ ಗ್ರಹಿಸುವ ಕಲೆ ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳ ವಿದ್ಯಾರ್ಜನೆಯ ಜೊತೆಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಅವರು ಸಾಧನೆ ಕ್ಷೇತ್ರಗಳನ್ನು ಪ್ರೋತ್ಸಾಹಿಸುವಲ್ಲಿ ಬವಿವಿ ಸಂಸ್ಥೆ ಮಾಡುತ್ತ ಬಂದಿರುವುದು ಅತ್ಯಂತ ಶ್ಲಾಘನೀಯ. ಅಂತೆಯೇ ಈಗ ಹಮ್ಮಿಕೊಂಡ ಈ ಕಾರ್ಯಕ್ರಮ ಕೂಡ ಇದಕ್ಕೆ ಸಾಕ್ಷಿಯಾಗಿದೆ ಎಂದರು.ನಂತರ ವುಶು ಆಟದ ಪರವಾಗಿ ವಿಶೇಷ ಸಾಧನೆ ಮಾಡಿದ ಗಣ್ಯರನ್ನು ಇದೆ ವೇಳೆ ಸತ್ಕರಿಸಲಾಯಿತು. ವೇದಿಕೆ ಮೇಲೆ ರಾಜ್ಯ ವುಶು ಅಸೋಸಿಯೇಶನ್ ಖಜಾಂಚಿ ಸಂಗಮೇಶ ಲಾಯದಗುಂದಿ, ಐಕ್ಯುಎಸಿ ಸಂಯೋಜಕ ಡಾ.ದೇವಪ್ಪ ಲಮಾಣಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ.ಎ.ಎಲ್.ಕಾತರಕಿ, ಕ್ರೀಡಾ ವಿಭಾಗದ ಮುಖ್ಯಸ್ಥ ಪ್ರೊ.ಬಸವರಾಜ ಲೋಕಾಪುರ ಇದ್ದರು.
ಐಕ್ಯುಎಸಿ ಸಂಯೋಜಕ ಡಾ.ದೇವಪ್ಪ ಲಮಾಣಿ ಸ್ವಾಗತಿಸಿದರು. ಪ್ರೊ.ಬಸವರಾಜ ಲೋಕಾಪುರ ಅತಿಥಿಗಳನ್ನು ಪರಿಚಯಿಸಿದರು. ಕುಮಾರ ಶಿವಾನಂದ ಮಡಿವಾಳರ ಪ್ರಾರ್ಥಿಸಿದರು. ಅಕ್ಷತಾ ಅಕ್ಕಿಮರಡಿ ನಿರೂಪಿಸಿದರು. ಶ್ರೀಹರಿ ಧೂಪದ ವಂದಿಸಿದರು. ಹಿಂದೆ ಮೂಲ ಭಾರತೀಯರಾದ ಬೌದ್ಧ ಭಿಕ್ಕುಗಳು ಕಾಲ್ದಾರಿ ಮೂಲಕ ಕಾಡುಮೇಡುಗಳ ಮೂಲಕ ಧರ್ಮ ಪ್ರಚಾರಕ್ಕಾಗಿ ದೇಶ ವಿದೇಶಗಳಿಗೆ ತೆರಳುವಾಗ ತಮ್ಮ ಆತ್ಮರಕ್ಷಣೆಗಾಗಿ ವುಶು ಕಲೆಯನ್ನು ಬಳಸಿಕೊಳ್ಳುತ್ತಿದ್ದರು.- ಡಾ.ಎಸ್.ಎಂ.ಗಾಂವ್ಕರ್,
ಪ್ರಾಚಾರ್ಯರು