ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಶಾಲೆಯ ಹೂವಿನ ಗಿಡಗಳು ಆಡು, ದನ ಕರುಗಳ ಪಾಲಾಗುತ್ತಿದೆ, ಕುಡಿಯಲು ಶುದ್ಧ ನೀರು ಬೇಕು, ಹೆದ್ದಾರಿಯಲ್ಲಿ ದಾಟಲು ಜಿಬ್ರಾ ಕ್ರಾಸ್ ಅಳವಡಿಸಿ, ಹಾನಿಗೊಳ್ಳುತ್ತಿರುವ ಕುಡಿಯುವ ನೀರಿನ ಟ್ಯಾಪ್, ಶಾಲಾ ಗೇಟ್ ಮುಂಭಾಗದಲ್ಲಿ ವಾಹನಗಳ ನಿಲುಗಡೆ, ಶಾಲಾ ಅವಧಿಯ ವೇಳೆ ಮೈದಾನಕ್ಕೆ ಸಾರ್ವಜನಿಕರು ಆಗಮಿಸುವುದು, ಶಾಲೆ ಬಿಡುವ ವೇಳೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆಗೊಳಿಸುವಂತೆ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಆಗ್ರಹಿಸಿದರು.ಗುರುವಾರ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಐಶ್ವರ್ಯ ಅಧ್ಯಕ್ಷತೆಯಲ್ಲಿ ಮಕ್ಕಳ ಗ್ರಾಮಸಭೆ ನಡೆಯಿತು.ಸಭೆಯಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮಹಮ್ಮದ್ ಆರಫನ್ ಮಾತನಾಡಿ, ಶಾಲೆಯಲ್ಲಿ ಶುದ್ಧ ಕುಡಿಯವ ನೀರಿನ ಘಟಕ ಇಲ್ಲ, ಅದನ್ನು ಒದಗಿಸಿಕೊಡುಂವಂತೆ ಆಗ್ರಹಿಸಿದರು.
ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕೃತಿಕಾ, ಶಾಲೆಯ ಮುಂಭಾಗದಲ್ಲಿ ಸುಂದರವಾದ ಹೂತೋಟವನ್ನು ಮಾಡಲಾಗಿದ್ದು, ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ನಿತ್ಯ ವಿದ್ಯಾರ್ಥಿಗಳು ಪಾಠ ಪ್ರವಚನದ ಸಂದರ್ಭ ಆಡು, ದನ ಕರುಗಳನ್ನು ಓಡಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುವಂತಾಗಿದೆ. ಇದರಿಂದ ನಮಗೆ ಪಾಠ ಪ್ರವಚನ ಕೇಳಲು ಕಷ್ಟ ಸಾಧ್ಯ ಎಂದರು.ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರೋಜ ಎಂ., ಸುಂಟಿಕೊಪ್ಪ ಪಟ್ಟಣದ ನಡುವೆ ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ನಾವು ಹೆದ್ದಾರಿಯನ್ನು ದಾಟಬೇಕಾದರೆ ವಾಹನಗಳ ವೇಗ ಹಾಗೂ ದಟ್ಟನೆ ಹೆಚ್ಚಾಗಿರುತ್ತದೆ. ಆದ್ದರಿಂದ ಕನ್ನಡ ವೃತ್ತದ ಬಳಿ ಜಿಬ್ರಾಕ್ರಾಸ್ ಅಳವಡಿಸುವಂತೆ ಕೋರಿಕೊಂಡರು. ಪ್ರಾಥಮಿಕ ಶಾಲೆಯ ಟ್ಯಾಪ್ ಸೋಮವಾರದಿಂದ ಶನಿವಾರದ ವರೆಗೆ ಸುಸ್ಥಿತಿಯಲ್ಲಿರುತ್ತದೆ. ಶನಿವಾರ, ಭಾನುವಾರ ರಜಾದಿನಗಳಲ್ಲಿ ಟ್ಯಾಪ್ ಹಾನಿಗೊಳಗಾಗುತ್ತದೆ ಎಂದು ಹೇಳಿದರು.
ಮಹಮದ್ ಆಜ್ಮಲ್ ಮಾತನಾಡಿ, ಶಾಲಾ ವಠಾರದಲ್ಲಿ ವಾಹನಗಳನ್ನು ಕ್ರಮಬದ್ಧವಾಗಿ ನಿಲ್ಲಿಸದೆ ಎಲ್ಲೆಂದರಲ್ಲಿ ನಿಲ್ಲಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಶಾಲಾ ಗೇಟ್ ಮುಂಭಾಗದಲ್ಲಿ ವಾಹನಗಳನ್ನು ತಂದು ನಿಲ್ಲಿಸಲಾಗುತ್ತಿದೆ ಎಂದರು.ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಂಜನಾ, ಸಾರ್ವಜನಿಕರು ಶಾಲಾ ಸಮಯದಲ್ಲಿ ಮೈದಾನಕ್ಕೆ ಆಗಮಿಸುತ್ತಿದ್ದಾರೆ ಎಂದು ದೂರಿದರು.
ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಮಾತನಾಡಿ, ಇಂದಿಗೂ ಬಾಲ್ಯ ವಿವಾಹ ಕೆಲವು ಭಾಗಗಳಲ್ಲಿ ಜೀವಂತವಾಗಿದ್ದು, ಅವುಗಳ ಬಗ್ಗೆ ಮಾಹಿತಿ ತಿಳಿದ್ದಲ್ಲಿ ಇಲಾಖೆಯ ಗಮನಕ್ಕೆ ತಂದರೆ ಕೂಡಲೇ ಅಂತಹ ಮಕ್ಕಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗುವುದು. ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿದ್ದು, ಉತ್ತಮ ಪುಸ್ತಕಗಳನ್ನು ವಾಚಿಸುವುದರಿಂದ ಮೊಬೈಲ್‌ನಲ್ಲಿರುವ ಮಾಹಿತಿಯು ಪುಸ್ತಕದಲ್ಲಿಯೂ ದೊರಕುತ್ತದೆ. 18 ವರ್ಷಕ್ಕಿಂತ ಕೆಳಗಿನವರು ಮೋಟಾರ್ ವಾಹನ ಚಲಾಯಿಸುವುದರಿಂದ ಪೋಷಕರು 25,000 ರು. ದಂಡ ಹಾಗೂ ಜೈಲು ಸೆರಬೇಕಾಗುತ್ತದೆ ಎಂದರು.ಮಕ್ಕಳ ತಂದೆ ಮದ್ಯವ್ಯಸನಿಗಳಾಗಿದ್ದರೆ ಅವರಿಗೆ ಮನ ಬದಲಾಯಿಸುವ ಬೇಡಿಕೆಗಳನ್ನು ಇಡುವ ಮೂಲಕ ಮಕ್ಕಳು ತಂದೆಯನ್ನು ಮದ್ಯಚಟದಿಂದ ಮುಕ್ತಗೊಳಿಸಲು ಸಾದ್ಯ. ಕೊಡಗು ಜಿಲ್ಲೆಯು ಪುಟ್ಟ ಪ್ರದೇಶವಾದರೂ ಕ್ರೀಡೆ, ದೇಶ ಸೇವೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಆದ್ದರಿಂದ ಮಕ್ಕಳು ಕ್ರೀಡೆ ಹಾಗೂ ಸೇನೆಗಳಿಗೆ ಸೇರುವಂತಾಗಬೇಕು ಎಂದು ಹೇಳಿದರು.
ಮಕ್ಕಳಿಗೆ ಯಾವುದೇ ರೀತಿಯ ಅಪಾಯಕಾರಿ ಸಮಸ್ಯೆಗಳು ಎದುರಾದರೆ ಕೂಡಲೇ 1098 ಅಥವಾ 112 ಗೆ ಕರೆಮಾಡಿದರೆ ಕೂಡಲೇ ನೀವು ಇರುವ ಕಡೆ ನಿಮ್ಮ ಸಹಾಯಕ್ಕೆ ಬರಲಿದೆ ಎಂದು ತಿಳಿಸಿದರು.ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕ್ಷೇತ್ರ ಕಾರ್ಯಕರ್ತೆ ಜಯಶ್ರೀ ಮಾತನಾಡಿ, ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳಿಗಾಗಿಯೇ ಮಕ್ಕಳ ಹಕ್ಕು ಕಾಯ್ದೆ ಸೇರಿದಂತೆ ಒಡಂಬಡಿಕೆ ಕಾನೂನಿನ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಬಡತನರೇಖೆಗಿಂತ ಕೆಳಗಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರೆ, ಅವರು ಅರ್ಜಿ ಸಲ್ಲಿಸಿದ್ದಲ್ಲಿ ಸರ್ಕಾರದಿಂದ 4,000 ರು. ಸಹಾಯಧನ ನೀಡಲಾಗುತ್ತದೆ. ಎಚ್‌ಐವಿ ಮಾರಣಾಂತಿಕ ಕಾಯಿಲೆಗೆ ತುತ್ತಾಗಿರುವ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಆರೋಗ್ಯ ಸುಧಾರಣೆಗಾಗಿ ಮಾಸಿಕ 1,000 ರು. ನೀಡಲಾಗುತ್ತದೆ ಎಂದರು.
ಮಕ್ಕಳ ಮೇಲೆ ಲೈಗಿಂಕ ದೌರ್ಜನ್ಯಗಳು ಪ್ರಕರಣಗಳು ಆಗ್ಗಿಂದಾಗೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಕ್ಸೋ ಕಾಯ್ದೆಯನ್ನು 2012ರಲ್ಲಿ ಜಾರಿಗೆ ತರಲಾಗಿದೆ. ಇದರಿಂದ ಮಕ್ಕಳ ರಕ್ಷಣೆಗೆ ಸಹಕಾರಿಯಾಗಿದೆ. ಮಕ್ಕಳು ತಮ್ಮ ರಕ್ಷಣೆಗೆ ಸಹಾಯವಾಣಿ ಕೇಂದ್ರದವಾದ 1098 ಹಾಗೂ 112ಕ್ಕೆ ಕರೆ ಮಾಡುವ ಮೂಲಕ ನಮ್ಮ ಇಲಾಖೆಯಿಂದ ಮಕ್ಕಳಿಗೆ ಕಾನೂನ್ಮತಕ ರಕ್ಷಣೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.ಮಕ್ಕಳ ಗ್ರಾಮಸಭೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಉದ್ಘಾಟಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಪ್ರಾಸ್ತಾವಿಕ ಭಾಷಣ ಮಾತನಾಡಿ, ಮಕ್ಕಳ ಗ್ರಾಮಸಭೆಯ ಮಹತ್ವತೆ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭ ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರಾದ ಪಿ. ಎಫ್.ಸೆಬಾಸ್ಟಿಯನ್, ಜೀನಾಸುದ್ದೀನ್, ರಫೀಕ್ ಖಾನ್, ಗೀತಾ, ರೇಷ್ಮ, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕ ಅರುಳ್ ಸೆಲ್ವಕುಮಾರ್, ಕಾಲೇಜಿನ ಪ್ರಾಂಶುಪಾಲೆ ಶ್ರೀಲತಾ, ಮೇಲ್ವಿಚಾರಕರು ಮಕ್ಕಳ ಸಹಾಯವಾಣಿ ಘಟಕದ ನಿಮಾ ತಂಗಚ್ಚನ್ ಮತ್ತಿತರರು ಇದ್ದರು.