ಸಾರಾಂಶ
ಬೆಂಗಳೂರು : ನಗರದ ಟನಲ್ ಯೋಜನೆಗೆ ಸಮಿತಿ ಮಾಡಿದರೆ ನಾನು ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳುತ್ತೇನೆ. ಅದಕ್ಕೂ ಮೊದಲು ನಗರದ ಕಸ, ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಸುರಂಗ ರಸ್ತೆ ಯೋಜನೆ ಬಗ್ಗೆ ಜನರಿಗೆ ಮಾಹಿತಿ ನೀಡಿಲ್ಲ. ಜನರ ಪ್ರಶ್ನೆಗಳಿಗೆ ಮೊದಲು ಉತ್ತರ ನೀಡಲಿ ಎಂದು ಆಗ್ರಹಿಸಿದರು.ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ ನಿರ್ಮಿಸಲಿರುವ ಸುರಂಗ ರಸ್ತೆ ಯೋಜನೆಯ ಬಗ್ಗೆ ನಗರದ ಜನರಿಗೆ ಯಾವುದೇ ಮಾಹಿತಿ ನೀಡಿಲ್ಲ. ನಾನು ಅಧಿಕಾರಿಗಳನ್ನು ಈ ಬಗ್ಗೆ ಕೇಳಿದಾಗ 124 ಇಲಾಖೆಗಳಿಂದ ಅನುಮತಿ ಪಡೆಯಬೇಕಿದೆ ಎಂದು ತಿಳಿದುಬಂತು.
ರಸ್ತೆಗುಂಡಿಗಳನ್ನು ಮುಚ್ಚಿಸಲಿ
ನನ್ನನ್ನೇ ಸಮಿತಿ ಅಧ್ಯಕ್ಷರನ್ನಾಗಿ ಮಾಡುತ್ತಾರೆಂದು ಹೇಳಿದ್ದಾರೆ. ಇಂತಹ ಯೋಜನೆ ಮಾಡಲು ಇವರಿಗೆ ನೈಪುಣ್ಯತೆ ಇದೆಯೇ ಎಂದು ಸಾಬೀತುಪಡಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ರಸ್ತೆಗುಂಡಿಗಳನ್ನು ಮುಚ್ಚಿಸಲಿ. ಗುಂಡಿ ಮುಚ್ಚಲು ಆಗದವರು ಸುರಂಗ ಹೇಗೆ ಮಾಡುತ್ತಾರೆ? ಇದಕ್ಕೆ ಹಣ ಎಲ್ಲಿದೆ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಅಭಿವೃದ್ಧಿಯ ವಿರೋಧಿಗಳಲ್ಲ
ಬಿಜೆಪಿಯವರು ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ ಮೊದಲು ರಸ್ತೆಗುಂಡಿ ಮುಚ್ಚಿಸಲಿ, ಕಸ ನಿರ್ವಹಣೆ ಮಾಡಲಿ. ಯೋಜನೆ ಖಂಡಿತ ಮಾಡುತ್ತೇವೆ ಎಂದು ದೌರ್ಜನ್ಯದಂತೆ ಮಾತನಾಡಬಾರದು. ಲಾಲ್‌ಬಾಗ್, ಕೆಂಪೇಗೌಡ ಗೋಪುರ ಹಾಳು ಮಾಡಬಾರದು. ಪರಿಸರ ನಾಶ ಮಾಡಬಾರದು. ನನಗೆ ಉತ್ತರ ಕೊಡುವ ಬದಲು ಜನರಿಗೆ ಸರ್ಕಾರ ಉತ್ತರ ನೀಡಬೇಕು. ನಾನಿಲ್ಲಿ ಜನರ ಧ್ವನಿಯಾಗಿ ಮಾತಾಡುತ್ತಿದ್ದೇನೆ ಎಂದರು.
;Resize=(690,390))

;Resize=(128,128))
;Resize=(128,128))
;Resize=(128,128))