ಪ್ರತಿ ನಿಮಿಷಕ್ಕೆ ಮೂವರಿಗೆ ಪಾರ್ಶ್ವವಾಯು: ಡಾ. ಅಶೋಕ್

| Published : Oct 30 2025, 02:45 AM IST

ಸಾರಾಂಶ

ಮಂಗಳವಾರ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾಸ್ಪತ್ರೆಯಲ್ಲಿ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಆಶ್ರಯದಲ್ಲಿ ವಿಶ್ವ ಪಾರ್ಶ್ವವಾಯು ದಿನಾಚರಣೆ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು.

ಉಡುಪಿ: ಭಾರತದಲ್ಲಿ 1 ಲಕ್ಷದ ಜನಸಂಖ್ಯೆಗೆ 145 ಜನರು ಪಾರ್ಶ್ವವಾಯು ತುತ್ತಾಗುತ್ತಿದ್ದು, ಪ್ರತಿ 1 ನಿಮಿಷದಲ್ಲಿ 3 ಜನ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಕಡಿಮೆ ಮಾಡಲು ಯುವಜನತೆ ತಮ್ಮ ಆಹಾರಶೈಲಿ ಮತ್ತು ದೈಹಿಕ ಚಟುವಟಿಕೆಗೆ ಕಾಳಜಿ ನೀಡಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಅಶೋಕ್ ಎ. ಹೇಳಿದ್ದಾರೆ.

ಮಂಗಳವಾರ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾಸ್ಪತ್ರೆಯಲ್ಲಿ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಆಶ್ರಯದಲ್ಲಿ ನಡೆದ ವಿಶ್ವ ಪಾರ್ಶ್ವವಾಯು ದಿನಾಚರಣೆ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್ ಉದ್ಘಾಟಿಸಿ, ಸಾರ್ವಜನಿಕರಲ್ಲಿ ಪಾಶ್ವವಾಯು ಬಗ್ಗೆ ಜಾಗೃತಿ ಮೂಡಿಸಲು ಯುವ ಜನರು ಕಾರ್ಯಪ್ರವೃತರಾಗಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ ಮಾತನಾಡಿ, ಜೀವಸತ್ವಗಳು, ಖನಿಜಗಳು ಮತ್ತು ಇತರ ಅಗತ್ಯ ಘಟಕಗಳಿರುವ ವೈವಿಧ್ಯಮಯ ಆಹಾರ ಸೇವನೆಯಿಂದ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಸಾರ್ವಜನಿಕರಲ್ಲಿ ಈ ಅರಿವು ಮೂಡಿಸಲು ನರ್ಸಿಂಗ್ ವಿದ್ಯಾರ್ಥಿಗಳ ಪಾತ್ರ ಬಹಳ ದೊಡ್ಡದು ಎಂದರು.

ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ವಾಸುದೇವ್ ಪಾರ್ಶ್ವವಾಯು ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ನಿರಮಯ ನರ್ಸಿಂಗ್ ಕಾಲೇಜಿನ ಉಪಾನ್ಯಾಸಕಿ ಜನ್ನಿಪರ್, ಜಿಲ್ಲಾ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ಲೀಲಾವತಿ ಮತ್ತಿತರರು ಉಪಸ್ಥಿತರಿದ್ದರು.