ಮಹಿಳೆಯರಿಗೆ ಪ್ರೋತ್ಸಾಹ ಕೊಡಿ ತುಳಿಯಬೇಡಿ

| Published : Mar 25 2025, 12:45 AM IST

ಸಾರಾಂಶ

ಮಹಿಳೆಯರು ಉತ್ತಮ ಸಾಧನೆ ಮಾಡುವ ಸಂದರ್ಭದಲ್ಲಿ ಪ್ರೋತ್ಸಾಹ ನೀಡಬೇಕು. ಅದು ಬಿಟ್ಟು ಅವರನ್ನು ತುಳಿಯುವ ಕೆಲಸ ಮಾಡಬಾರದು ಎಂದು ತಹಸೀಲ್ದಾರ್ ಎಂ. ಮಮತಾ ಹೇಳಿದರು. ಕೆಲ ವಿದ್ಯಾವಂತ ಮಹಿಳೆಯರು ಸಣ್ಣಪುಟ್ಟ ಕೌಟುಂಬಿಕ ವ್ಯಾಜ್ಯಗಳಿಗೆ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿರುವುದು ದುರದೃಷ್ಟಕರ ಬೆಳವಣಿಗೆ ಎಂದರು. ಈ ಸಂದರ್ಭದಲ್ಲಿ ರೈತಮಹಿಳೆ ಕೃಷಿ ಪ್ರಶಸ್ತಿ ಪಡೆದಂತಹ ಮಮತಾ ಚಂದ್ರಶೇಖರ್‌ ಅವರನ್ನು ಅಭಿನಂದಿಸಲಾಯಿತು. ಬೆಂಗಳೂರಿನ ನೀಲಾಂಬಿಕ ಮಹಿಳಾ ಸಂಘದ ವತಿಯಿಂದ ವಚನ ಗಾಯನ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಬೇಲೂರು

ಮಹಿಳೆಯರು ಉತ್ತಮ ಸಾಧನೆ ಮಾಡುವ ಸಂದರ್ಭದಲ್ಲಿ ಪ್ರೋತ್ಸಾಹ ನೀಡಬೇಕು. ಅದು ಬಿಟ್ಟು ಅವರನ್ನು ತುಳಿಯುವ ಕೆಲಸ ಮಾಡಬಾರದು ಎಂದು ತಹಸೀಲ್ದಾರ್ ಎಂ. ಮಮತಾ ಹೇಳಿದರು.

ಅಖಿಲ ಭಾರತ ವೀರಶೈವ ಮಹಿಳಾ ಸಂಘದ ವತಿಯಿಂದ ವಚನ ವೈಭವ ಹಾಗೂ ಮಹಿಳಾ ದಿನಾಚರಣೆ ಅಂಗವಾಗಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಒಬ್ಬ ಮಹಿಳೆಯ ಹಿಂದೆ ಎಲ್ಲಾ ರೀತಿಯ ಸಹಕಾರ ಧೈರ್ಯ ತುಂಬುವ ಕೆಲಸವನ್ನು ಪುರುಷರು ಮಾಡಿರುತ್ತಾರೆ ಎಂಬುವುದನ್ನು ಮರೆಯಬಾರದು. ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಉತ್ತಮ ಅವಕಾಶ ವೇದಿಕೆ ಇದೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಮ್ಮನ್ನು ನಾವು ಮೊದಲು ಗೌರವಿಸುವ ಕೆಲಸ ಮಾಡಬೇಕಿದೆ. ಈಗ ಎಲ್ಲಾ ರಂಗದಲ್ಲಿ ಮಹಿಳೆಯರು ಛಾಪನ್ನು ಮೂಡಿಸುತ್ತಿದ್ದು ಬಹುಮುಖ್ಯವಾಗಿ ಹಳೆಬೀಡಿನ ಕೃಷಿಕ ಪ್ರಶಸ್ತಿ ಪಡೆದ ಮಹಿಳೆ ಮಮತಾ ಚಂದ್ರಶೇಖರ್ ಅವರ ಸಾಧನೆ ನಿಜಕ್ಕೂ ಅದ್ಭುತವಾಗಿದ್ದು, ಅವರು ಕಡಿಮೆ ವಿದ್ಯಾಭ್ಯಾಸ ಮಾಡಿದ್ದು, ಚಿಕ್ಕ ವಯಸ್ಸಿನಲ್ಲಿ ಅವರ ಪತಿಯನ್ನು ಕಳೆದುಕೊಂಡು ಎದೆಗುಂದದೆ ಅವರು ಸಾಧನೆ ಮಾಡಿದ ಕ್ಷೇತ್ರ ಕೃಷಿಯಲ್ಲಿ ಸಂತೃಪ್ತಿ ಕಂಡಿದ್ದಾರೆ. ನಾವು ಆಡಂಬರದ ಜೀವನ ನಡೆಸುವ ಬದಲು ಇಂತ ಮಹಿಳೆಯರ ಆದರ್ಶ ಪಾಲನೆ ಮಾಡಬೇಕು. ಕೆಲ ವಿದ್ಯಾವಂತ ಮಹಿಳೆಯರು ಸಣ್ಣಪುಟ್ಟ ಕೌಟುಂಬಿಕ ವ್ಯಾಜ್ಯಗಳಿಗೆ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿರುವುದು ದುರದೃಷ್ಟಕರ ಬೆಳವಣಿಗೆ ಎಂದರು.

ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ವಿಂಪು ಸಂತೋಷ್ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುವ ಕೆಲಸಕ್ಕೆ ಮುಂದಾಗಬೇಕು. ಅಲ್ಲದೆ ಕೇವಲ ಮಹಿಳಾ ದಿನಾಚರಣೆಯನ್ನು ನಾವುಗಳು ಆಡಂಬರವಾಗಿ ಆಚರಿಸದೆ ಅರ್ಥಪೂರ್ಣವಾಗಿ ನೊಂದವರ ಪಾಲಿಗೆ ಬೆಳಕಾಗುವ ಮೂಲಕ ನಾವು ಅವರಿಗೆ ನೆರವಾಗಬೇಕು. ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ವತಿಯಿಂದ ಪ್ರತಿ ಗ್ರಾಮೀಣ ಭಾಗಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ರೈತಮಹಿಳೆ ಕೃಷಿ ಪ್ರಶಸ್ತಿ ಪಡೆದಂತಹ ಮಮತಾ ಚಂದ್ರಶೇಖರ್‌ ಅವರನ್ನು ಅಭಿನಂದಿಸಲಾಯಿತು. ಬೆಂಗಳೂರಿನ ನೀಲಾಂಬಿಕ ಮಹಿಳಾ ಸಂಘದ ವತಿಯಿಂದ ವಚನ ಗಾಯನ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಸಂತೋಷ್, ಮಹಿಳಾ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷೆ ಚಂದ್ರಕಲಾ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ್, ಕಾರ್ಯದರ್ಶಿ ವಿಜಯ ಧರ್ಮಪ್ಪ, ನೀಲಾಂಬಿಕೆ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪ, ಪ್ರಧಾನ ಕಾರ್ಯದರ್ಶಿ ಮದನ್ ಬಳ್ಳೂರು ನಿರ್ದೇಶಕರಾದ ಲಕ್ಷ್ಮಿ ನಾಗರಾಜ್, ಉಮಾ, ರಾಜಣ್ಣ ಮಹಿಳಾ ಸದಸ್ಯರು, ಇತರರು ಹಾಜರಿದ್ದರು.