ಮಾನವನ ಇಹದ ಬದುಕಿನಲ್ಲಿರುವ ರಕ್ತ ಸಂಬಂಧಿಗಳು, ವಿಭಿನ್ನ ನೆಲೆಯ ಬಂಧು-ಮಿತ್ರರು ಮನುಷ್ಯ ಇನ್ನಿಲ್ಲವಾದಾಗ ಎಲ್ಲರೂ ಇಲ್ಲಿಯೇ ಉಳಿಯುತ್ತಾರೆ. ಆದರೆ ಮಾನವನ ಸಾವಿನ ನಂತರವೂ ಹಿಂಬಾಲಿಸುವ ಅಖಂಡ ವಿಶ್ವದ ಏಕೈಕ ಸಂಗಾತಿ ಎಂದರೆ ಅದು ಇಷ್ಟಲಿಂಗ ಮಾತ್ರ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಶಿವಮೊಗ್ಗ: ಮಾನವನ ಇಹದ ಬದುಕಿನಲ್ಲಿರುವ ರಕ್ತ ಸಂಬಂಧಿಗಳು, ವಿಭಿನ್ನ ನೆಲೆಯ ಬಂಧು-ಮಿತ್ರರು ಮನುಷ್ಯ ಇನ್ನಿಲ್ಲವಾದಾಗ ಎಲ್ಲರೂ ಇಲ್ಲಿಯೇ ಉಳಿಯುತ್ತಾರೆ. ಆದರೆ ಮಾನವನ ಸಾವಿನ ನಂತರವೂ ಹಿಂಬಾಲಿಸುವ ಅಖಂಡ ವಿಶ್ವದ ಏಕೈಕ ಸಂಗಾತಿ ಎಂದರೆ ಅದು ಇಷ್ಟಲಿಂಗ ಮಾತ್ರ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.ಭಾನುವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘ ಹಾಗೂ ಶ್ರೀಬಸವೇಶ್ವರ ವೀರಶೈವ-ಲಿಂಗಾಯತ ಸಮಾಜ ಸೇವಾ ಸಂಘದ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿರುವ ‘ಲಿಂಗತತ್ವ ದರ್ಶನ’ ಆಧ್ಯಾತ್ಮಿಕ ಆಶೀರ್ವಚನ ನೀಡಿ ಮಾತನಾಡಿದರು.ಇಷ್ಟಲಿಂಗದ ಪೀಠದಲ್ಲಿ ಜಗಜ್ಜನನಿ ಶಕ್ತಿಮಾತೆಯ ಚೈತನ್ಯ ಮತ್ತು ಲಿಂಗದಲ್ಲಿ ಶಿವಚೈತನ್ಯ ಮೇಳೈಸಿವೆ. ಹಾಗಾಗಿ ಇಷ್ಟಲಿಂಗವು ಶಿವ-ಶಕ್ತಿಯರ ಸಂಗಮದ ಮಹಾಚೈತನ್ಯವಾಗಿದೆ. ಮಾನವನು ಮಹಾದೇವನಾಗಲು, ಜೀವವು ಶಿವನಾಗಲು, ಅಂಗವು ಲಿಂಗ ಚೈತನ್ಯ ಹೊಂದಲು ಅಗತ್ಯವಾದ ಬಯಲ ಬೆಳಗ ದರ್ಶನಕ್ಕೆ ಮಾರ್ಗದರ್ಶನ ಮಾಡುವ ಚಿಜ್ಯೋತಿಯೇ ಇಷ್ಟಲಿಂಗವಾಗಿದೆ ಎಂದು ಅವರು ತಿಳಿಸಿದರು. ಇಂದ್ರಿಯ, ಮನಸ್ಸು ಮತ್ತು ಬುದ್ಧಿಗಳ ಶುಭ್ರತೆಗೆ ಕಾರಣವಾಗುವ ಇಷ್ಟಲಿಂಗ, ಪ್ರಾಣಲಿಂಗ ಹಾಗೂ ಭಾವಲಿಂಗಗಳು ಮಾನವನ ರಕ್ಷಾಕವಚಗಳಾಗಿರುತ್ತವೆ. ಹಾಗಾಗಿ ಪ್ರತಿಯೊಬ್ಬ ವೀರಶೈವನೂ ದೇಹದ ಮೇಲೆ ಇಷ್ಟಲಿಂಗ ಧಾರಣೆ ಮಾಡಿ ನಿತ್ಯವೂ ಇಷ್ಟಲಿಂಗಾರ್ಚನೆಗೆ ತೆರೆದುಕೊಂಡಾಗ ಎಲ್ಲ ಬಂಧನಗಳಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.ನಿತ್ಯವೂ ಪ್ರಾತಃಕಾಲದ ಬ್ರಾಹ್ಮೀ ಮುಹೂರ್ತದಲ್ಲಿ ಇಷ್ಟಲಿಂಗಾರ್ಚನೆಗೆ ತೊಡಗಿಕೊಳ್ಳುವುದು ಅತ್ಯಂತ ಶ್ರೇಷ್ಠವಾದದ್ದು. ಒಂದು ವೇಳೆ ಇದು ಸಾಧ್ಯವಾಗದೇ ಹೋದಾಗ ಸೂರ್ಯೋದಯದ ನಂತರವೂ ಇಷ್ಟಲಿಂಗವನ್ನು ಪೂಜಿಸಬಹುದು. ಇಷ್ಟಲಿಂಗಾರ್ಚನೆಗೆ ಅತೀ ಅಗತ್ಯವಾದದ್ದು ಭಕ್ತಿಯ ಬದ್ಧತೆ. ಭಕ್ತಿಯ ನೆಲೆಯಲ್ಲಿ ನಡೆಸುವ ಶಿವಪಂಚಾಕ್ಷರಿ ಮಹಾಮಂತ್ರದ ಅನುಸಂಧಾನದಲ್ಲಿ ಮನಸ್ಸಿನ ಸತ್ ಸಂಕಲ್ಪಗಳು ಈಡೇರುತ್ತಿದ್ದು, ಆ ಮೂಲಕ ಶಿವಾನುಗ್ರಹಕ್ಕೆ ಪಾತ್ರರಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ವಿವಿಧ ಸಂಘಟನೆಗಳ ಗಣ್ಯರಾದ ಎಸ್.ಎಸ್.ಜ್ಯೋತಿಪ್ರಕಾಶ, ಎಸ್.ಪಿ.ದಿನೇಶ, ಬಳ್ಳೇಕೆರೆ ಸಂತೋಷ, ಸಿ.ಜಿ.ಪರಮೇಶ್ವರಪ್ಪ ಇತರರು ಇದ್ದರು.