ಪೆರಾಜೆ ಗ್ರಾಮದಲ್ಲಿ ಜನಸ್ಪಂದನಾ: 60 ಅರ್ಜಿ ಸಲ್ಲಿಕೆ

| Published : Jan 31 2024, 02:20 AM IST

ಸಾರಾಂಶ

ಪೆರಾಜೆ ಗ್ರಾಮದ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ಜನಸ್ಪಂದನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಶಾಸಕ ಎ.ಎಸ್.ಪೊನ್ನಣ್ಣ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಿಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಕುಡಿಯುವ ನೀರು, ರಸ್ತೆ ಮತ್ತು ಸೇತುವೆ ನಿರ್ಮಾಣ, ವಿದ್ಯುತ್ ದೀಪ ಅಳವಡಿಸುವುದು ಮತ್ತಿತರ ಸಂಬಂಧ 24 ಅರ್ಜಿಗಳು ಸಲ್ಲಿಕೆಯಾದವು.

ಕನ್ನಡಪ್ರಭ ವಾರ್ತೆ ಮಡಿಕೇರಿ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ,ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ಪೆರಾಜೆ ಗ್ರಾಮದ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ಜನಸ್ಪಂದನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಗ್ರಾಮಿಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಕುಡಿಯುವ ನೀರು, ರಸ್ತೆ ಮತ್ತು ಸೇತುವೆ ನಿರ್ಮಾಣ, ವಿದ್ಯುತ್ ದೀಪ ಅಳವಡಿಸುವುದು ಮತ್ತಿತರ ಸಂಬಂಧ 24 ಅರ್ಜಿಗಳು ಸಲ್ಲಿಕೆಯಾದವು.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 17 ಅರ್ಜಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ 5 ಅರ್ಜಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದಂತೆ 4 ಅರ್ಜಿಗಳು, ಸೆಸ್ಕ್, ಅರಣ್ಯ, ಕೆಎಸ್‌ಆರ್‌ಟಿಸಿ ವಿಭಾಗಕ್ಕೆ ತಲಾ 2 ಅರ್ಜಿಗಳು, ಪೊಲೀಸ್, ಆಹಾರ, ಉದ್ಯೋಗ ವಿನಿಮಯ, ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ತಲಾ 1 ಅರ್ಜಿಗಳು ಒಟ್ಟು 60 ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾದವು.

ಜನಸ್ಪಂದನಾ ಸಭೆಯ ಆರಂಭದಲ್ಲಿ ಮಾತನಾಡಿದ ಎ.ಎಸ್.ಪೊನ್ನಣ್ಣ, ಸರ್ಕಾರ ಜನರ ಬಾಗಿಲಿಗೆ ಬಂದು ಹಲವು ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಶ್ರಮಿಸುತ್ತಿದೆ ಎಂದು ತಿಳಿಸಿದರು.

ಯಾವುದೇ ಸಮಸ್ಯೆಗಳು ಇದ್ದಲ್ಲಿ ಬಗೆಹರಿಸಲು ಪ್ರಯತ್ನಿಸಲಾಗುವುದು. ಆ ನಿಟ್ಟಿನಲ್ಲಿ ಸರ್ಕಾರ ಜನರ ಮನೆ ಬಾಗಿಲಿಗೆ ಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡ ಜನರ ಪರವಾಗಿ ಕೆಲಸ ಮಾಡುತ್ತಿದೆ ಎಂದರು.

ಈ ಭಾಗದಲ್ಲಿ ಜಲಜೀವನ್ ಯೋಜನೆ ಇನ್ನಷ್ಟು ಉತ್ತಮವಾಗಿ ಕೈಗೊಳ್ಳಬೇಕು. ಸರ್ಕಾರದ ಯೋಜನೆಗಳು ಜನರಿಗೆ ಸರಿಯಾಗಿ ತಲುಪಬೇಕು ಎಂದು ಪೊನ್ನಣ್ಣ ಅವರು ತಾಕೀತು ಮಾಡಿದರು.

ಪೆರಾಜೆ ಗ್ರಾ.ಪಂ.ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ ಮಾತನಾಡಿ, ಪೆರಾಜೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮತ್ತಿತರ ಮೂಲ ಸೌಲಭ್ಯ ಕಲ್ಪಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ತಹಶೀಲ್ದಾರ್ ಪ್ರವೀಣ್ ಕುಮಾರ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.

ಶಾಸಕ ಪೊನ್ನಣ್ಣ ಪೆರಾಜೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಇತ್ತೀಚೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ಕೆ.ಪೆರಾಜೆ –ಆಲೆಟ್ಟಿ-ಕಾಪುಮಲೆ-ಕುಂದಲ್ಪಾಡಿ-ಕುಂಬಳಚೇರಿ ವಿ.ಎಸ್.ಎಸ್.ಎನ್. ಸುಮಾರು 170 ಲಕ್ಷ ರು. ವೆಚ್ಚದ ಕಾಮಗಾರಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ಸುಮಾರು 400 ಲಕ್ಷ ರೂ. ವೆಚ್ಚದ ಕೆ.ಪೆರಾಜೆ-ಆಲೆಟ್ಟಿ-ಕಾಪುಮಲೆ-ಕುಂದಲ್ಪಾಡಿ-ಕುಂಬಳಚೇರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. 10 ಲಕ್ಷ ರು. ವೆಚ್ಚದ ಪೆರಾಜೆ ಗ್ರಾಮ ಪಂಚಾಯಿತಿ ಬಂಗಾರುಕೋಡಿ ರಸ್ತೆ ಯಾಪರೆ ಕುಟುಂಬಸ್ಥರ ರಸ್ತೆ ಹತ್ತಿರ ಕಾಲು ಸೇತುವೆ ಕಾಮಗಾರಿಗೆ ಚಾಲನೆ ಒಟ್ಟು 580 ಲಕ್ಷ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.