‘ಕಂಕನಾಡಿ’ ತು‍ಳು ಸಿನಿಮಾ ಚಿತ್ರೀಕರಣಕ್ಕೆ ಮುಹೂರ್ತ

| Published : Sep 09 2024, 01:33 AM IST

ಸಾರಾಂಶ

ವಿಧಾನ ಪರಿಷತ್‌ ಸದಸ್ಯ ಐವನ್ ಡಿ ಸೋಜಾ ಚಿತ್ರೀಕರಣಕ್ಕೆ ಕ್ಲ್ಯಾಪ್ ಮಾಡಿದರು. ಪ್ರಕಾಶ್ ಪಾಂಡೇಶ್ವರ್ ಕ್ಯಾಮರಾ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಎಚ್‌ಪಿಆರ್ ಫಿಲ್ಮ್ಸ್, ಪುಳಿಮುಂಚಿ ಚಿತ್ರ ತಂಡದ, ಹರಿಪ್ರಸಾದ್ ರೈ ನಿರ್ಮಾಣದ, ತ್ರಿಶೂಲ್ ಶೆಟ್ಟಿ ನಿರ್ದೇಶನದ ‘ಕಂಕನಾಡಿ’ ತುಳು ಚಲನಚಿತ್ರದ ಚಿತ್ರೀಕರಣದ ಮೂಹೂರ್ತ ಮಂಗಳೂರಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಭಾನುವಾರ ನೆರವೇರಿತು.ವಿಧಾನ ಪರಿಷತ್‌ ಸದಸ್ಯ ಐವನ್ ಡಿ ಸೋಜಾ ಚಿತ್ರೀಕರಣಕ್ಕೆ ಕ್ಲ್ಯಾಪ್ ಮಾಡಿದರು. ಪ್ರಕಾಶ್ ಪಾಂಡೇಶ್ವರ್ ಕ್ಯಾಮರಾ ಚಾಲನೆ ನೀಡಿದರು. ಬಳಿಕ ಮಾತನಾಡಿದ ಐವನ್ ಡಿಸೋಜಾ, ಜಿಲ್ಲೆಯಲ್ಲಿ ಬಹಳಷ್ಟು ಪ್ರತಿಭಾವಂತ ಕಲಾವಿದರಿದ್ದಾರೆ. ಕಲಾವಿದರಿಗೆ ಅವಕಾಶ ದೊರೆತು ಅವರು ಸಮಾಜದ ಎದುರು ಬರಲಿ.‌ ತುಳು ಸಿನಿಮಾಗಳನ್ನು ಎಲ್ಲ ಧರ್ಮದ ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸಬೇಕೆಂದರು. ತುಳು ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ಭಾಷೆ ವಿಶ್ವದ ಎಲ್ಲೆಡೆ ಪಸರಿಸಿದೆ. ಇವತ್ತು ಭಾಷೆ ಉಳಿಯುವಲ್ಲಿ ತುಳು ನಾಟಕ, ತುಳು ಸಿನಿಮಾದ ಕೊಡುಗೆ ದೊಡ್ಡದಿದೆ. ತುಳು ಭಾಷೆಯ ರಾಯಭಾರಿಯಾಗಿ ನಾಟಕ ಸಿನಿಮಾಗಳು ಕೆಲಸ ಮಾಡುತ್ತಿದೆ ಎಂದರು.

ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಳ್ವರಿಸ್ ಮಾತನಾಡಿ, ಹಾಸ್ಯ ಸಿನಿಮಾದ ಜೊತೆಗೆ ಸದಭಿರುಚಿಯ ಸಮಾಜಕ್ಕೆ ಸಂದೇಶ ಭರಿತ ಸಿನಿಮಾಗಳು ತಯಾರಾಗಲಿ ಎಂದರು.

ಡಾ ದೇವದಾಸ ಕಾಪಿಕಾಡ್ ಮಾತನಾಡಿ, ತ್ರಿಶೂಲ್ ರಂತಹ ಪ್ರತಿಭಾವಂತರಿಗೆ ಇಲ್ಲಿ ಉತ್ತಮ ಭವಿಷ್ಯ ಇದೆ. ಕಲಾವಿದರು ಕೂಡಾ ಶ್ರದ್ದಾ ಭಕ್ತಿಯಿಂದ ನಟಿಸ ಬೇಕು ಎಂದರು.

ನಿರ್ಮಾಪಕ ಹರಿಪ್ರಸಾದ್ ರೈ, ಪ್ರಕಾಶ್ ಪಾಂಡೇಶ್ವರ್‌, ಉದ್ಯಮಿ ಮುರಳೀಧರ್ ರೈ, ಅರವಿಂದ ಬೋಳಾರ್, ಬಾಲಕೃಷ್ಣ ಶೆಟ್ಟಿ, ಇಸ್ಮಾಯಿಲ್ ಮೂಡುಶೆಡ್ಡೆ, ರಾಹುಲ್ ಅಮೀನ್, ಮಾಸ್ಟರ್ ಫ್ಲವರ್ ಪಕೀರಬ್ಬ, ನವ್ಯ ಪೂಜಾರಿ, ಲಂಚುಲಾಲ್, ರೋಶನ್ ಶೆಟ್ಟಿ, ನವೀನ್ ಸಾಲ್ಯಾನ್ ಮಲ್ಪೆ, ಪ್ರಕಾಶ್ ಶೆಟ್ಟಿ ಧರ್ಮನಗರ ಮತ್ತಿತರರು ಇದ್ದರು.

ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರ್ವಹಿಸಿದರು.ಕಂಕನಾಡಿ ಸಿನಿಮಾಕ್ಕೆ ಹರಿಪ್ರಸಾದ್ ರೈ ಸಿನಿಮಾ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಒಂದೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿತ್ರೀಕರಣ ನಡೆಸಲು ರೂಪುರೇಷೆ ಸಿದ್ಧಪಡಿಸಿದ್ದಾರೆ. ತಾರಾಗಣದ ಆಯ್ಕೆ ನಡೆಯುತ್ತಿದೆ. ತ್ರಿಶೂಲ್ ಶೆಟ್ಟಿ ನಿರ್ದೇಶಿಸಿರುವ ಸಿನಿಮಾಕ್ಕೆ ಛಾಯಾಗ್ರಾಹಣ ಮಯೂರ್ ಆರ್ ಶೆಟ್ಟಿ ಸಂಗೀತ ಕಿಶೋರ್ ಕುಮಾರ್ ಶೆಟ್ಟಿ ಸಂಭಾಷಣೆ ಡಿಬಿಸಿ ಶೇಖರ್, ಕಲಾನಿರ್ದೇಶನ ಹರೀಶ್ ನಾಯಕ್, ಸಂಕಲನ ಗಣೇಶ್ ನಿರ್ಚೇಲ್, ಪಬ್ಲಿಸಿಟಿ ಡಿಸೈನರ್ ದೇವಿ ರೈ, ಸಾಹಸ ಚಂದ್ರು ಬಂಡೆ, ನೃತ್ಯ ದಿಕ್ಷೀತ್ ಕುಮಾರ್ ಮತ್ತು ನವೀನ್ ಇದ್ದಾರೆ.