ಕನ್ನಡಪ್ರಭ ವಾರ್ತೆ ಮಂಗಳೂರುನಾಡಿನ ಪ್ರಭಾವಿ ದಿನಪತ್ರಿಕೆ ‘ಕನ್ನಡಪ್ರಭ’ 2001 ಮೇ 4ರಂದು ಮಂಗಳೂರಿನಲ್ಲಿ ಆರಂಭಿಸಿದ ಆವೃತ್ತಿ 25 ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಶನಿವಾರ ಬೆಳ್ಳಿಹಬ್ಬ ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕೊಡಗು ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ಆವೃತ್ತಿಯ ಬೆಳ್ಳಿ ಹಬ್ಬದ ಸಂಭ್ರಮೋತ್ಸವ ಮಂಗಳೂರಿನಲ್ಲಿ ಶನಿವಾರ ಅದ್ಧೂರಿಯಾಗಿ ನೆರವೇರಿತು.ಮಂಗಳೂರು ಹೊರವಲಯದ ಮರೋಳಿ ಸೂರ್ಯ ವುಡ್ಸ್‌ನ ವರ್ಣರಂಜಿತ ವೇದಿಕೆಯಲ್ಲಿ ಬೆಳ್ಳಿ ಹಬ್ಬದ ಸಂಭ್ರಮೋತ್ಸವ ನಡೆಯಿತು. ಕನ್ನಡಪ್ರಭ ಮಂಗಳೂರು ಆವೃತ್ತಿಯ ಬೆಳ್ಳಿ ಹಬ್ಬಕ್ಕೆ ಕರಾವಳಿ ಜಿಲ್ಲೆಗಳು ಹಾಗೂ ಕೊಡಗು ಜಿಲ್ಲೆಯ ಜನಪ್ರತಿನಿಧಿಗಳು, ಉದ್ಯಮಿಗಳು, ಓದುಗರು ಆಗಮಿಸಿ ಕನ್ನಡಪ್ರಭಕ್ಕೆ ಶುಭ ಕೋರಿದರು.ಕದ್ರಿಯ ರವಿ ಅಲೆವೂರಾಯರ ನೇತೃತ್ವದ ಸರಯೂ ಬಾಲ ಯಕ್ಷ ವೃಂದ ಪ್ರಸ್ತುತ ಪಡಿಸಿದ ಯಕ್ಷ ನೃತ್ಯ, ಪುತ್ತೂರಿನ ನೃತ್ಯಗುರು ಶಾಲಿನಿ ಆತ್ಮಭೂಷಣ್‌ ಅವರ ನೃತ್ಯೋಪಾಸನಾ ಕಲಾ ಅಕಾಡೆಮಿ ತಂಡದ ಭರತನಾಟ್ಯ ಪ್ರದರ್ಶನಗಳು ಸಂಜೆಯ ರಂಗು ಹೆಚ್ಚಿಸಿದವು. ಮೂಡುಬಿದಿರೆಯ ಮಹಾಗೌರಿ ಚಂಡೆ ಬಳಗದ ಚಂಡೆ ವಾದನವೂ ಎಲ್ಲರ ಮೈನವಿರೇಳುವಂತೆ ಮಾಡಿತು.ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ ನೇತೃತ್ವದಲ್ಲಿ ನಡೆದ ಬೆಳ್ಳಿ ಹಬ್ಬದಲ್ಲಿ ನಾಲ್ವರಿಗೆ ಜೀವಮಾನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಧರ್ಮಸ್ಥಳ ಧರ್ಮಾಧಿಕಾರಿ ಡಾ। ಡಿ.ವೀರೇಂದ್ರ ಹೆಗ್ಗಡೆ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ। ಎಂ.ಎನ್‌.ರಾಜೇಂದ್ರಕುಮಾರ್‌, ಮಾಹೆ ಸಹ ಕುಲಾಧಿಪತಿ ಡಾ। ಎಚ್‌.ಎಸ್.ಬಲ್ಲಾಳ್, ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ। ಮೋಹನ್ ಆಳ್ವ ಅವರಿಗೆ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜಾ ಅವರು ಈ ಪ್ರಶಸ್ತಿ ಪ್ರದಾನ ನೆರವೇರಿಸಿದರು. ಡಾ। ವೀರೇಂದ್ರ ಹೆಗ್ಗಡೆ ಅವರ ಪರವಾಗಿ ಅವರ ಸಹೋದರ ರಾಜೇಂದ್ರ ಕುಮಾರ್ ಹಾಗೂ ಮೋಹನ್ ಆಳ್ವ ಪರವಾಗಿ ಆಳ್ವಾಸ್‌ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕುರಿಯನ್ ಅವರು ಪ್ರಶಸ್ತಿ ಸ್ವೀಕರಿಸಿದರು.ಮಂಗಳೂರು ಆವೃತ್ತಿ ವ್ಯಾಪ್ತಿಯ ಪ್ರದೇಶಾಭಿವೃದ್ಧಿ ಹಾಗೂ ‘ಕನ್ನಡಪ್ರಭ’ ಬೆಳವಣಿಗೆಗೆ ನಿರಂತರವಾಗಿ ಬೆಂಬಲಕ್ಕೆ ನಿಂತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಸನ್ಮಾನಿಸಲಾಯಿತು. ಉಡುಪಿಯ ಸಮಾಜ ಸೇವಕ ಜಿ.ಶಂಕರ್‌ ಅವರ ಪರವಾಗಿ ಅವರ ಪ್ರತಿನಿಧಿ, ಕರ್ಣಾಟಕ ಬ್ಯಾಂಕಿನ ಪರವಾಗಿ ಸಿಒಒ ರಾಜಾ ಬಿ.ಎಸ್‌., ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲ್‌, ಉಡುಪಿಯ ಸಮಾಜ ಸೇವಕ ಕೆ.ಕೃಷ್ಣಮೂರ್ತಿ ಆಚಾರ್ಯ, ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ರಮಾನಂದ ಗುರೂಜಿ, ಎಂಆರ್‌ಪಿಎಲ್ ಪರವಾಗಿ ಮಣಿಪಾಲ ಆಡ್ಸ್‌ನ ಗಿರೀಶ್, ಕಾರ್ಕಳದ ಕ್ರಿಯೇಟಿವ್ ಎಜುಕೇಷನ್ ಫೌಂಡೇಶನ್‌ ಪರವಾಗಿ ಶೇಷಗಿರಿ ಹಾಗೂ ಕುಂದಾಪುರದ ಸುಜ್ಞಾನ ಎಜುಕೇಷನ್ ಟ್ರಸ್ಟ್ ಪರವಾಗಿ ರಮೇಶ್ ಶೆಟ್ಟಿ ಮತ್ತು ಭರತ್ ಶೆಟ್ಟಿ ಗೌರವ ಸ್ವೀಕರಿಸಿದರು.ಬೆಳ್ಳಿಹಬ್ಬದ ಅಂಗವಾಗಿ ‘ಕನ್ನಡಪ್ರಭ’ ಹೊರತಂದ ವಿಶೇಷ ಸಂಚಿಕೆ ‘ಕರಾವಳಿ-ಪ್ರಭಾವಳಿ’ಯನ್ನು ಅತಿಥಿಗಳು ಬಿಡುಗಡೆ ಮಾಡಿದರು. ಕನ್ನಡಪ್ರಭ ವರ್ಷದ ವ್ಯಕ್ತಿ ಹರೇಕಳ ಹಾಜಬ್ಬ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ, 55 ವರ್ಷಗಳಿಂದ ನಿರಂತರವಾಗಿ ‘ಕನ್ನಡಪ್ರಭ’ ಸಂಗ್ರಾಹಕ ಮುತ್ತಪ್ಪ ಪೂಜಾರಿ ಅವರಿಗೆ ಗೌರವ ಸಲ್ಲಿಸಲಾಯಿತು. ಕಾರ್ಮಿಕ ಇಲಾಖೆ ಆಯುಕ್ತೆ ನಾಜಿಯಾ ಸುಲ್ತಾನ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಜರಿದ್ದು ಬೆಳ್ಳಿ ಹಬ್ಬದ ಸಂಭ್ರಮ ಹೆಚ್ಚಿಸಿದರು.