ಕಾರ್ಕಳ: ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ವತಿಯಿಂದ ಸೌಹಾರ್ದ ಇಫ್ತಾರ್ ಕೂಟವು ಕಾರ್ಕಳ ಸಾಲ್ಮಾರದ ಜಾಮೀಯಾ ಮಸೀದಿಯ ಶಾದಿ ಮಹಲ್ ಸಭಾಂಗಣದಲ್ಲಿ ನಡೆಯಿತು.
ಕಾರ್ಕಳ ಬಂಗ್ಲೆಗುಡ್ಡೆಯ ತೈಬಾ ಗಾರ್ಡನ್ ಪ್ರಾಂಶುಪಾಲರಾದ ಮೌಲಾನಾ ಅಹ್ಮದ್ ಶರೀಫ್ ಅವರು ಮಾತನಾಡಿ, ಇಂದು ಜಗತ್ತು ನೆನಪಿಟ್ಟುಕೊಳ್ಳುವ ಅನೇಕ ಅತ್ಯಾಧುನಿಕ ಆವಿಷ್ಕಾರಗಳನ್ನು ಮಾಡಿದವರು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಮನಶಾಂತಿಗಾಗಿ ಧರ್ಮದ ಪಾಲನೆಗೆ ಮೊರೆ ಹೋಗಿದ್ದಾರೆ. ನಾವೆಲ್ಲರೂ ನಮ್ಮ ನಮ್ಮ ಧರ್ಮಗಳನ್ನು ಪಾಲಿಸುತ್ತಾ ಶಾಂತಿ ಮತ್ತು ಸೌಹಾರ್ದತೆಗೆ ಮಹತ್ವ ನೀಡೋಣ ಎಂದು ಹೇಳಿದರು.ನಕ್ರೆ ಚರ್ಚ್‌ನ ಧರ್ಮಗುರು ವಂದನೀಯ ಪಾದರ್ ಲೂಯಿಸ್ ಡೇಸಾ ಮಾತನಾಡಿ, “ನಾವೆಲ್ಲರೂ ದೇವರ ಮಕ್ಕಳು. ಜಾತಿ-ಧರ್ಮಗಳ ಭೇದವು ದೇವರ ಮಕ್ಕಳಾದ ನಮ್ಮನ್ನು ವಿಭಜಿಸದಂತೆ ಎಲ್ಲರೂ ಜಾಗೃತರಾಗಿರಬೇಕು” ಎಂದು ತಿಳಿಸಿದರು.ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡರಾದ ಶೇಖರ ಮಡಿವಾಳ ಅವರು ಮಾತನಾಡಿ, ಜಾಗತಿಕವಾಗಿ ಯುದ್ಧದ ಕಾರ್ಮೋಡ ಕವಿದಿರುವ ಈ ಸಂದರ್ಭದಲ್ಲಿ ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ಹಾರೈಸಿದರು.ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ್ ಶೆಟ್ಟಿ ಮುನಿಯಾಲು ಮಾತನಾಡಿ, ಸಮಾನತೆಯನ್ನು ಸಾರಿದ ಸಂತ ಶಿಶುನಾಳ ಶರೀಫರ ಜಯಂತಿಯ ಪುಣ್ಯ ದಿನದಂದು ಎಲ್ಲಾ ಮತ-ಧರ್ಮಗಳ ಜನರು ಒಂದಾಗಿ ಸೇರಿರುವುದು ಸಂತಸದ ವಿಚಾರ. ಉಪವಾಸದ ಈ ಪವಿತ್ರ ತಿಂಗಳು ಎಲ್ಲರಿಗೂ ಶುಭವನ್ನುಂಟು ಮಾಡಲಿ ಎಂದು ಆಶಿಸಿದರು.ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ಅವರು ಅಧ್ಯಕ್ಷೀಯ ಮಾತುಗಳನ್ನಾಡುತ್ತಾ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕವು ಸರ್ವಧರ್ಮಗಳನ್ನು ಒಗ್ಗೂಡಿಸಿ ಸೌಹಾರ್ದತೆಯನ್ನು ಸಾರುವ ನಿಟ್ಟಿನಲ್ಲಿ ಇಫ್ತಾರ್ ಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.ಈ ಸಂದರ್ಭದಲ್ಲಿ ರಾಜ್ಯ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಮುದ್ರಾಡಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಡಳಿಯ ಅಧ್ಯಕ್ಷರಾದ ಎಂ.ಎ. ಗಫೂರ್ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖ್ ವಾಹಿದ್ ದಾವೂದ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಶುಭಾನ್ ಮತ್ತು ಅಕ್ಬರ್ ಅವರ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯವೂ ನೀಡಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಮುಸ್ಲಿಂ ಒಕ್ಕೂಟ ಕಾರ್ಕಳ ಘಟಕದ ಅಧ್ಯಕ್ಷ ಮೊಹಮ್ಮದ್ ಗೌಸ್, ಆಶ್ಫಕ್ ಅಹ್ಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಎಂ.ಪಿ. ಮೊಯಿದಿನಬ್ಬ ಇನ್ನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶೇಖ್ ಶಭೀರ್ ಮಿಯ್ಯಾರು ಕಾರ್ಯಕ್ರಮವನ್ನು ನಿರೂಪಿಸಿದರು. ಅಬ್ದುಲ್ ಸಾಣೂರು ಅವರು ವಂದಿಸಿದರು.