ಉದ್ಯಮಿಗಳ ಅಪಹರಿಸಿ ಸುಲಿಗೆ: 8 ಮಂದಿ ಬಂಧನ.

| Published : Aug 03 2024, 12:34 AM IST

ಸಾರಾಂಶ

ಬಂಧಿತ ಆರೋಪಿಗಳಿಂದ 41 ಲಕ್ಷ ರು.ಗಳ ನಗದು, ನಾಲ್ಕು ಕಾರು, ಒಂದು ಚಿನ್ನದ ಸರ, ವಿವಿಧ ಕಂಪನಿಯ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಲ್ಲಿ ಲೋಹಿತ್ ಕುಮಾರ್ ಮತ್ತು ಪ್ರವೀಣ ಅಲಿಯಾಸ್ ನೇಪಾಳಿ ಕೋಲಾರದ ಮಾಜಿ ಸಚಿವ ವರ್ತೂರು ಪ್ರಕಾಶ್ ರವರ ಅಪಹರಣ ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹಣಕ್ಕಾಗಿ ಉದ್ಯಮಿಗಳನ್ನು ಅಪಹರಿಸಿ ಹಣ ಸುಲಿಗೆ ಮಾಡುತ್ತಿದ್ದ ಎಂಟು ಮಂದಿ ಕುಖ್ಯಾತ ಸುಲಿಗೆ ಕೋರರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಆರೋಪಿಗಳ ವಿವರ ಹಾಗೂ ಪ್ರಕರಣಗಳ ಮಾಹಿತಿ ನೀಡಿದರು.

ಎರಡು ಸುಲಿಗೆ ಪ್ರಕರಣ

ಕಳೆದ ಜೂನ್ 18 ರಂದು ಚಿಕ್ಕಬಳ್ಳಾಪುರ ತಾಲೂಲ್ಲೂಕು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಾರೊಬಂಡೆಯ ಸಹಕಾರ ಭವನದ ಬಳಿ ಒರ್ವ ಉದ್ಯಮಿಯನ್ನು ಅಪಹರಿಸಿ ಆ ಉದ್ಯಮಿಯಿಂದ ಹದಿನೆಂಟು ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಿದ್ದ ಪ್ರಕರಣ ಮತ್ತು ಜುಲೈ 20 ರಂದು ಚಿಕ್ಕಬಳ್ಳಾಪುರ ಜಿಲ್ಲೆ, ನಂದಿ ಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಸಾಗರಹಳ್ಳಿಯ ಬಳಿಯಿರುವ ಔರಾ ಲೇಔಟ್ ನಲ್ಲಿ ವಾಕಿಂಗ್ ಮಾಡುತ್ತಿದ್ದ ಉದ್ಯಮಿಯನ್ನು ಅಪಹರಿಸಿ, 60 ಲಕ್ಷ ಹಣವನ್ನು ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಂತೆ ಎಂಟು ಮಂದಿ ಸುಲಿಗೆ ಕೋರರ ಬಂಧಿಸಲಾಗಿದೆ ಎಂದರು.

ಬಂಧಿತ ಆರೋಪಿಗಳನ್ನು ಚಿಕ್ಕಬಳ್ಳಾಪುರ ನಗರದ ಬರ್ಕತ್ ಉಲ್ಲಾ (44), ಬೆಂಗಳೂರಿನವರಾದ ಲೋಹಿತ್ ಕುಮಾರ್(30) ಮತ್ತು ಪ್ರವೀಣ(21), ಚಾಲಕ ಭರತ್ ಕುಮಾರ್ ನಾಯಕ್(26), ಮತ್ತೊಬ್ಬ ಕಾರು ಚಾಲಕ ಮಾರುತಿ ಪ್ರಸನ್ನ(28), ಕೋಲಾರ ತಾಲೂಕಿನ ರಾಮಸಂದ್ರದ ಸಂತೋಷ್(28), ಕೋಲಾರದ ವಕ್ಕಲೇರಿ ಹೋಬಳಿಯ ವೆಂಕಟೇಶ್(24) ಮತ್ತು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನ ಮರು ಮಲ್ಲಪ್ಪ(28) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ 41 ಲಕ್ಷ ರು.ಗಳ ನಗದು, ನಾಲ್ಕು ಕಾರು, ಒಂದು ಚಿನ್ನದ ಸರ, ವಿವಿಧ ಕಂಪನಿಯ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಲ್ಲಿ ಲೋಹಿತ್ ಕುಮಾರ್ ಮತ್ತು ಪ್ರವೀಣ ಅಲಿಯಾಸ್ ನೇಪಾಳಿ ಕೋಲಾರದ ಮಾಜಿ ಸಚಿವ ವರ್ತೂರು ಪ್ರಕಾಶ್ ರವರ ಅಪಹರಣ ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದರು. ಬಂಧಿತರಲ್ಲಿ ಬರ್ಕತ್ ಉಲ್ಲಾ ಚಿಕ್ಕಬಳ್ಳಾಪುರದ ಅಪಹರಣ ಪ್ರಕರಣಗಳ ಪ್ರಮುಖ ಮಾಸ್ಟರ್ ಮೈಂಡ್ ಆಗಿದ್ದಾನೆ ಎಂದು ಎಸ್ಪಿ ಕುಶಾಲ್ ಚೌಕ್ಸೆ ಮಾಹಿತಿ ನೀಡಿದರು.

ಸುಲಿಗೆಕೋರರ ಬಂಧಿಸಿ ತಂಡ

ಆರೋಪಿಗಳ ಬಂಧನಕ್ಕೆ ಎಸ್ಪಿ ಕುಶಾಲ್ ಚೌಕ್ಸೆ ಹಾಗೂ ಹೆಚ್ವುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಕಾಸೀಮ್ ಮಾರ್ಗದರ್ಶನದಲ್ಲಿ ಡಿವೈಎಸ್ ಪಿಎಸ್ ಶಿವಕುಮಾರ್ ಹಾಗೂ ಸಿಇಎನ್ ಡಿವೈಎಸ್ಪಿ ಕೆ.ವೈ. ರವಿಕುಮಾರ್ ಸೆನ್ ತನಿಖಾ ತಂಡಗಳನ್ನು ರಚಿಸಲಾಗಿತ್ತು. ತನಿಖಾಧಿಕಾರಿಗಳಾಗಿ ಸಿಪಿಐಗಳಾದ ಎಂ.ಮಂಜುನಾಥ್, ಸತ್ಯನಾರಾಯಣ, ನಯಾಜ್ ಬೇಗ್, ಪ್ರಶಾಂತ್ ವರ್ಣಿ, ಸೂರ್ಯಪ್ರಕಾಶ್, ಶ್ರೀನಿವಾಸ್, ಜನಾರ್ದನ, ಪಿಎಸ್‌ಐಗಳಾದ ಡಿ.ಹರೀಶ್ ಕುಮಾರ್, ಕೆ.ಬಿ.ಶರಣಪ್ಪ, ಹರೀಶ್, ಸಿಬ್ಬಂದಿ ರವಿಕುಮಾರ್,ವಿಜಯ್ ಕುಮಾರ್,ಮದುಸೂದನ್, ಪರಶುರಾಮ್, ಮುರುಳಿ,ವೆಂಕಟೇಶ್ ಮೂರ್ತಿ, ಹರೀಶ್, ನಾಗಾರ್ಜುನ್, ಅಮರನಾಥ, ನಾಗೇಶ, ಪ್ರವೀಣ್ ಕುಮಾರ್, ಸತ್ಯನಾರಾಯಣ, ಲಕ್ಷ್ಮೀಕಾಂತ, ಗೌತಮ್ ರಾಜ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ಸಿಬ್ಬಂದಿಗಳಾದ ರವೀಂದ್ರ ಕುಮಾರ್, ಮುನಿಕೃಷ್ಣ ಕಾರ್ಯಾಚರಣೆ ತಂಡದಲ್ಲಿದ್ದರು. ತಂಡ ಸಾಧನೆಯನ್ನು ಎಸ್ಪಿ ಶ್ಲಾಘಿಸಿದರು.