ಸಾರಾಂಶ
ಇಂದಿನ ವಿದ್ಯಾರ್ಥಿಗಳು ಶುದ್ಧ ಗಾಳಿ, ನೀರು, ಮಣ್ಣಿನ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಮತ್ತು ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ಮತ್ತು ಅಪಾಯಕಾರಿ ವಸ್ತುಗಳನ್ನು ಬೇರ್ಪಡಿಸುವ ಬಗ್ಗೆ ಸಂಬಂಧಪಟ್ಟ ಜನರು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು
ಕನ್ನಡಪ್ರಭ ವಾರ್ತೆ ಬಳಗಾವಿ
ಕೋವಿಡ್ - 19 ಸಾಂಕ್ರಾಮಿಕದ ನಂತರ ಪ್ರಪಂಚವು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಸಾಕಷ್ಟು ತ್ಯಾಜ್ಯವನ್ನು ಕಂಡಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು ಈ ರೀತಿಯ ತ್ಯಾಜ್ಯವನ್ನು ನಿರ್ವಹಿಸಲು ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ಶುದ್ಧ ಗಾಳಿ, ನೀರು, ಮಣ್ಣಿನ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಮತ್ತು ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ಮತ್ತು ಅಪಾಯಕಾರಿ ವಸ್ತುಗಳನ್ನು ಬೇರ್ಪಡಿಸುವ ಬಗ್ಗೆ ಸಂಬಂಧಪಟ್ಟ ಜನರು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಎರಡು ದಿನಗಳ ಹಜಾರಡಸ್ ವೆಸ್ಟ್ ಮ್ಯಾನೇಜ್ಮೆಂಟ್ ಮತ್ತು ಎನ್ವಿರಾನ್ಮೆಂಟಲ್ ಪ್ರಾಕ್ಟಿಸಸ್ ಎಂಬ ವಿಷಯದ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವೈಜ್ಞಾನಿಕ ತ್ಯಾಜ್ಯ ವಿಲೇವಾರಿಯ ಅರಿವು ಮತ್ತು ಪ್ರಾಮುಖ್ಯತೆ ಇಂದಿನ ಅವಶ್ಯಕತೆಯಾಗಿದೆ ಎಂದರು. ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. 5 ಟ್ರಿಲಿಯನ್ ಆರ್ಥಿಕತೆಯ ರಾಷ್ಟ್ರವಾಗುವತ್ತ ದಾಪುಗಾಲಿಡುತ್ತಿದೆ. ಉತ್ಪಾದನಾ ಕ್ಷೇತ್ರದ ಕೈಗಾರಿಕೆಗಳಿಲ್ಲದೆ ಇದನ್ನು ಸಾಧಿಸಲಾಗುವುದಿಲ್ಲ. ಆದ್ದರಿಂದ ಉತ್ಪಾದನಾ ಕ್ಷೇತ್ರವು ದೇಶದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುವುದರ ಜೊತೆಗೆ ವೇಗವಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಯು ಖಂಡಿತವಾಗಿಯೂ ಅಪಾರ ಪ್ರಮಾಣದ ಅಪಾಯಕಾರಿ ಮತ್ತು ಕೈಗಾರಿಕಾ ತ್ಯಾಜ್ಯವನ್ನು ಉಂಟುಮಾಡುತ್ತದೆ. ಆದ್ದರಿಂದ ನಮ್ಮ ಪರಿಸರಕ್ಕೆ ಅಪಾಯಕಾರಿ ತ್ಯಾಜ್ಯ ವಸ್ತುಗಳಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಹೊಸ ಯೋಜನೆಗಳನ್ನು ಮತ್ತು ನಾಗರಿಕರಾಗಿ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಚಿಂತನೆ ನಡೆಸಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಇವತ್ತು ಅನಿವಾರ್ಯವಾಗಿದೆ ಎಂದು ಹೇಳಿದರು.ವಿಟಿಯುನಲ್ಲಿ ಆಗುತ್ತಿರುವ ಅಭಿವೃದ್ಧಿ ಕೆಲಸ ಮತ್ತು ಈಚೆಗಿನ ಬೆಳವಣಿಗೆಗಳನ್ನು ಶ್ಲಾಘಿಸಿದ ಅವರು, ವಿಟಿಯು ದೇಶದ ಅತಿದೊಡ್ಡ ತಾಂತ್ರಿಕ ವಿಶ್ವ ವಿದ್ಯಾಲಯಗಳಲ್ಲಿ ಒಂದಾಗಿದ್ದು ಕ್ಯಾಂಪಸ್‌ನಲ್ಲಿ ಉದ್ಯಮ ಆಧಾರಿತ ಲ್ಯಾಬ್‌ಗಳನ್ನು ಸ್ಥಾಪಿಸುವ ಹೊಸ ತಂತ್ರಜ್ಞಾನವನ್ನು ತ್ವರಿತವಾಗಿ ಅಳವಡಿಸಿಕೊಳ್ಳುತ್ತಿದೆ. ಔದ್ಯೋಗಿಕ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ಪಠ್ಯಕ್ರಮ ಪರಿಷ್ಕರಿಸುತ್ತದೆ ಮತ್ತು ಈ ರೀತಿಯ ಸಮ್ಮೇಳನಗಳನ್ನು ಹಮ್ಮಿಕೊಳ್ಳುವುದರ ಮೂಲಕ ಅದರ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್ ಎಸ್. ಮಾತನಾಡಿ ಅಪಾಯಕಾರಿ ವಸ್ತುಗಳ ನಿರ್ವಹಣೆ ಕುರಿತು ಜಾಗೃತಿ ಮತ್ತು ಶಿಕ್ಷಣ ಇಂದಿನ ಅಗತ್ಯವಾಗಿದೆ. ಆದ್ದರಿಂದ ವಿಟಿಯು ಪಠ್ಯಕ್ರಮದಲ್ಲಿ ಅಪಾಯಕಾರಿ ವಸ್ತುಗಳು ಮತ್ತು ನಿರ್ವಹಣೆ ವಿಷಯ ಕಡ್ಡಾಯವಾಗಿ ಕ್ರೆಡಿಟ್ ಕೋರ್ಸ್ ಪಠ್ಯಕ್ರಮದಲ್ಲಿ ಸೇರಿಸಲಾಗುವುದು ಎಂದು ಹೇಳಿದರು.
ಕುಲಸಚಿವ ಪ್ರೊ. ಬಿ. ಈ. ರಂಗಸ್ವಾಮಿ ಸ್ವಾಗತಿಸಿದರು. ವಿತಾವಿಯ ಕುಲಸಚಿವರು(ಮೌಲ್ಯಮಾಪನ), ಪ್ರೊ. ಟಿ. ಎನ್. ಶ್ರೀನಿವಾಸ ಹಾಗೂ ಪ್ರೊ. ಜಿ. ಸಿ. ರಂಗನಾಥ್ ಉಪಸ್ಥಿತರಿದ್ದರು. ಡಾ. ನಾಗರಾಜ್ ಪಾಟೀಲ್ ವಂದಿಸಿದರು.